ADVERTISEMENT

ಕುಣಿಗಲ್‌ನಲ್ಲಿ ತಲೆ ಎತ್ತಲಿದೆ ಹೈಟೆಕ್‌ ಬಸ್ ನಿಲ್ದಾಣ

ಎರಡು ದಶಕದ ನಂತರ ಹೈಟೆಕ್ ಬಸ್ ನಿಲ್ದಾಣ ನಿರ್ಮಾಣಕ್ಕೆ ಟೆಂಡರ್

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2024, 0:12 IST
Last Updated 5 ಸೆಪ್ಟೆಂಬರ್ 2024, 0:12 IST
ಕುಣಿಗಲ್ ಪುರಸಭೆಯ ಹೈಟೆಕ್ ಬಸ್ ನಿಲ್ದಾಣದ ನೀಲ ನಕ್ಷೆ
ಕುಣಿಗಲ್ ಪುರಸಭೆಯ ಹೈಟೆಕ್ ಬಸ್ ನಿಲ್ದಾಣದ ನೀಲ ನಕ್ಷೆ   

ಕುಣಿಗಲ್: 1910ರಲ್ಲಿ ನಿರ್ಮಾಣಗೊಂಡು 2005ರ ವರೆಗೂ ಸಾರ್ವಜನಿಕ ಸೇವೆಯಲ್ಲಿದ್ದ ಪುರಸಭಾ ಬಸ್ ನಿಲ್ದಾಣವನ್ನು ಹೈಟೆಕ್ ಬಸ್ ನಿಲ್ದಾಣ ನಿರ್ಮಾಣದ ನೆಪದಲ್ಲಿ ತೆರವುಗೊಳಿಸಲಾಗಿತ್ತು. ಈಗ ₹9.5 ಕೋಟಿ ವೆಚ್ಚದಲ್ಲಿ ನಿರ್ಮಾಣಕ್ಕೆ ಟೆಂಡರ್ ಪ್ರಾರಂಭವಾಗಿದೆ.

ಬಸ್ ನಿಲ್ದಾಣವೂ ರಾಷ್ಟ್ರೀಯ ಹೆದ್ದಾರಿ 48, ರಾಜ್ಯ ಹೆದ್ದಾರಿ 33ರಲ್ಲಿದ್ದು, ಬೆಂಗಳೂರು- ಮಂಗಳೂರು, ತುಮಕೂರು- ಮೈಸೂರು, ಮಾಗಡಿ- ಬೆಂಗಳೂರು ಮಾರ್ಗವಾಗಿ ನೂರಾರು ಬಸ್‌ಗಳು ಸಂಚರಿಸುತ್ತಿದ್ದರೆ, ಸಾವಿರಾರು ಪ್ರಯಾಣಿಕರ ಸಂಪರ್ಕ ಕೇಂದ್ರವಾಗಿತ್ತು. ನಿಲ್ದಾಣದಲ್ಲಿದ್ದ ವಾಣಿಜ್ಯ ಮಳಿಗೆ, ಹೋಟೆಲ್, ನೆಲ ಬಾಡಿಗೆ ಆಧಾರದ ಮಳಿಗೆಗಳಿಂದ ಪುರಸಭೆಗೆ ಆದಾಯವೂ ಬರುತ್ತಿದ್ದು, ನೂರಾರು ಕುಟುಂಬಗಳಿಗೆ ಜೀವನಾಧಾರವಾಗಿತ್ತು.

2005ರಲ್ಲಿ ಎಚ್.ನಿಂಗಪ್ಪ ಶಾಸಕರಾಗಿದ್ದರು. ಉಮಾಶಂಕರ್ ಜಿಲ್ಲಾಧಿಕಾರಿ, ನಾಯಕ್ ಉಪವಿಭಾಗಾಧಿಕಾರಿಯಾಗಿದ್ದ ಅವಧಿಯಲ್ಲಿ ಕುಣಿಗಲ್ ಮತ್ತು ತುಮಕೂರುಗಳಲ್ಲಿ ಹೈಟೆಕ್ ಬಸ್ ನಿಲ್ದಾಣ ನಿರ್ಮಾಣಕ್ಕಾಗಿ ಹಳೇ ನಿಲ್ದಾಣವನ್ನು ತೆರವುಗೊಳಿಸಿದ್ದರು. ಜಿಲ್ಲಾ ಕೇಂದ್ರದಲ್ಲಿಯೂ ತಡವಾಗಿ ಪ್ರಕ್ರಿಯೆಗಳು ಪ್ರಾರಂಭವಾಗಿತ್ತು. ಕುಣಿಗಲ್‌ನಲ್ಲಿ ಈವರೆಗೆ ಪ್ರಕ್ರಿಯೆಗಳೇ ಪ್ರಾರಂಭವಾಗಿರಲ್ಲಿಲ್ಲ.

ADVERTISEMENT

ನಂತರ ಬಂದ ಶಾಸಕರು ಗಮನಹರಿಸದ ಕಾರಣ ಮತ್ತು ಅನುದಾನದ ಕೊರತೆಯಿಂದಾಗಿ ಬಸ್ ನಿಲ್ದಾಣ ಕಾಮಗಾರಿಗೆ ಗ್ರಹಣ ಹಿಡಿದಿತ್ತು. ಮಾಜಿ ಸಂಸದ ಡಿ.ಕೆ.ಸುರೇಶ್, ಶಾಸಕ ಡಾ.ರಂಗನಾಥ್ ಅನುದಾನ ಬಿಡುಗಡೆ ಮಾಡಿಸಿದ್ದು, ಸಂಬಂಧಪಟ್ಟ ಅಧಿಕಾರಿಗಳಿಂದ ಮಂಜೂರಾತಿ ದೊರೆತು ಟೆಂಡರ್ ಪ್ರಕ್ರಿಯೆ ಪ್ರಾರಂಭವಾಗಿದೆ.

₹9.5 ಕೋಟಿ ವೆಚ್ಚದಲ್ಲಿ ನಿರ್ಮಾಣ

ಹೈಟೆಕ್ ಬಸ್ ನಿಲ್ದಾಣ ನಿರ್ಮಾಣದ ಬಗ್ಗೆ ಮಾಹಿತಿ ನೀಡಿದ ಪುರಸಭೆ ಮುಖ್ಯಾಧಿಕಾರಿ ಶಿವಪ್ರಸಾದ್ ಕರ್ನಾಟಕ ಮೂಲ ಸೌಕರ್ಯ ಹಣಕಾಸು ಇಲಾಖೆಯಿಂದ ₹5 ಕೋಟಿ ಪುರಸಭೆ ಐಡಿಎಸ್ಎಂಟಿ ಯೋಜನೆಯ ₹2 ಕೋಟಿ ರಾಜ್ಯಸಭೆ ಸದಸ್ಯ ಲೇಹರ್ ಸಿಂಗ್ ಅವರ ನಿಧಿಯಿಂದ ₹50 ಲಕ್ಷ ಸೇರಿದಂತೆ ಕ್ರೂಢೀಕರಿಸಿದ ₹9.50 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿದೆ. 24 ಮಳಿಗೆ ನಿರ್ಮಾಣ ಸೇರಿದಂತೆ ಮೂಲ ಸೌಕರ್ಯಕ್ಕಾಗಿ ಆದ್ಯತೆ ನೀಡಲಾಗಿದೆ. ಸೆಪ್ಟೆಂಬರ್‌ 21ಕ್ಕೆ ಟೆಂಡರ್ ಕರೆಯಲಾಗಿದ್ದು ಪ್ರಕ್ರಿಯೆಗಳು ಪೂರ್ಣಗೊಂಡ ವರ್ಷದಲ್ಲಿ ಕಾಮಗಾರಿ ಪೂರ್ಣಗೊಳಿಸಿ ಸಾರ್ವಜನಿಕ ಸೇವೆಗೆ ಸಮರ್ಪಿಲಾಗುವುದು ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.