ತುಮಕೂರು: ತುಮಕೂರು ಮಹಾನಗರ ಪಾಲಿಕೆಯಾದ ನಂತರವೂ ಅಭಿವೃದ್ಧಿ ದೃಷ್ಟಿಯಿಂದ ಒಂದು ದೊಡ್ಡ ಹಳ್ಳಿಯಂತೆ ಕಾಣುತಿತ್ತು. ಈ ಹಳ್ಳಿಗೆ ನಗರದ ಸ್ವರೂಪ ಕೊಡುವ ಸಲುವಾಗಿ ಹಾಗೂ ಮುಂದಿನ ದಿನಗಳಲ್ಲಿ ಬೆಂಗಳೂರಿನ ಉಪನಗರವಾಗಿ ನಿರ್ಮಿಸುವ ದೂರದೃಷ್ಟಿ ಇಟ್ಟುಕೊಂಡು ‘ಸ್ಮಾರ್ಟ್ ಸಿಟಿ’ ಯೋಜನೆಯ ವ್ಯಾಪ್ತಿಗೆ ತರಲಾಗಿದೆ.
ಸ್ಮಾರ್ಟ್ ಸಿಟಿ ಯೋಜನೆಗೆ ಆಯ್ಕೆಯಾಗಿ, ಕಾರ್ಯಕ್ರಮಗಳು ರೂಪುಗೊಂಡ ಸಮಯದಲ್ಲಿ ತುಮಕೂರು ಸುಂದರ ನಗರವಾಗುತ್ತದೆ. ‘ಸ್ಮಾರ್ಟ್’ ಸ್ವರೂಪ ತಾಳುತ್ತದೆ. ರಸ್ತೆಗಳೆಲ್ಲ ಹೊಳೆಯುತ್ತವೆ, ಹೊಸದೊಂದು ನಗರವೇ ಸೃಷ್ಟಿಯಾಗುತ್ತದೆ. ಬೆಂಗಳೂರು, ಮೈಸೂರು ನಗರಗಳ ಮಾದರಿಯಲ್ಲಿ ಒಂದಷ್ಟು ಹೊಸ ರೂಪ ಸಿಗಬಹುದು– ಒಟ್ಟಾರೆ ತುಮಕೂರು ಬದಲಾಗುತ್ತದೆ ಎಂಬೆಲ್ಲ ನಗರದ ಜನರು ಕನಸು ಕಂಡಿದ್ದರು.
ದೊಡ್ಡಳ್ಳಿಯ ಜನರಲ್ಲಿ ಮೂಡಿದ್ದ ಕನಸು ಈಗ ನಿಧಾನವಾಗಿ ಕರಗಲಾರಂಭಿಸಿದೆ. ಸ್ಮಾರ್ಟ್ ಸಿಟಿ ಎಂದರೆ ನಗರದ ಪ್ರಗತಿ ಹಾಗೂ ಜನರಿಗಾಗಿ ಅಲ್ಲ. ಅದು ‘ಕೆಲವರಿಂದ, ಕೆಲವರಿಗಾಗಿ’ ಮಾತ್ರ. ಕೆಲವರಷ್ಟೇ ‘ಉದ್ಧಾರ’ ಆಗುವ ಯೋಜನೆ ಎಂಬ ಭಾವನೆ ಮೂಡಲಾರಂಭಿಸಿದೆ. ನಗರದ ಯಾವ ಬಡಾವಣೆಗೆ ಕಾಲಿಟ್ಟರೂ ಗುಣಮಟ್ಟದ ಕಾಮಗಾರಿ ಕಾಣದಾಗಿದೆ. ಈ ಯೋಜನೆಗೆ ಕೋಟ್ಯಂತರ ರೂಪಾಯಿ ಹರಿದು ಬಂದಿದೆ. ಇನ್ನೂ ಹರಿದು ಬರುತ್ತಲೇ ಇದೆ. ಆದರೆ ಕಾಮಗಾರಿ ಮಾತ್ರ ಮುಂದೆ ಸಾಗುತ್ತಿಲ್ಲ. ಗುಣಮಟ್ಟ ಖಾತರಿಪಡಿಸುವ ಯಾವ ಕುರುಹುಗಳೂ ಗೋಚರಿಸುತ್ತಿಲ್ಲ. ಇಂತಹ ಅವ್ಯವಸ್ಥೆ ನೋಡಿದ ಜನರಿಗೆ ಯೋಜನೆ, ಆಡಳಿತ ವ್ಯವಸ್ಥೆ ಬಗ್ಗೆ ತೀವ್ರ ಭ್ರಮನಿರಸನಗೊಂಡಿದ್ದಾರೆ. ಸ್ಮಾರ್ಟ್ ಸಿಟಿ ಜಾರಿಯಾಗುತ್ತಿರುವ ಬಗ್ಗೆ ಜನರ ಭಾವನೆಗಳು ಅಸಹನೆಯನ್ನೇ ಧ್ವನಿಸುತ್ತಿವೆ.
ಈಗಿನ ಕಾಮಗಾರಿಗಳ ಸ್ಥಿತಿ ಗಮನಿಸಿದರೆ ಎಂತಹವರಿಗೂ ಸಿಟ್ಟು ಬರುತ್ತದೆ, ಆಕ್ರೋಶ ವ್ಯಕ್ತವಾಗುತ್ತದೆ. ರಸ್ತೆಗೆ ಡಾಂಬರು ಹಾಕಿದ ನಂತರ ಪೈಪ್‌ಲೈನ್ ಕಾಮಗಾರಿಗೆ ರಸ್ತೆ ಅಗೆಯಲಾಗುತ್ತಿದೆ. ಮತ್ತೆ ಕಾಮಗಾರಿಮಾಡಿ ರಸ್ತೆ ಸರಿಪಡಿಸಿದ ನಂತರ ವಿದ್ಯುತ್ ಕಂಬ ನೆಡಲು ಗುಂಡಿ ತೋಡಲಾಗುತ್ತಿದೆ. ಆ ಗುಂಡಿ ಮುಚ್ಚಿಸಿದರೆ ಮತ್ತೊಮ್ಮೆ ದೂರವಾಣಿ ಕೇಬಲ್‌ನವರು, ಇನ್ನೊಮ್ಮೆ ನೀರು ಸೋರಿಕೆ ಸರಿಪಡಿಸಲು ಅಗೆಯುವ ಸಾಮಾನ್ಯದೃಶ್ಯ ನಗರದಲ್ಲಿ ಕಂಡುಬರುತ್ತದೆ. ಮನೆ ಕಟ್ಟುವುದು, ಬೀಳಿಸುವುದು, ಮತ್ತೆ ಕಟ್ಟುವುದು– ಒಂದು ರೀತಿ ಮಕ್ಕಳ ಆಟದಂತೆ ಕಂಡುಬರುತ್ತಿದೆ. ಸಮನ್ವಯದಿಂದ ಕೆಲಸ ಮಾಡಬೇಕು ಎಂಬ ಕಾರಣಕ್ಕೆ ವಿವಿಧ ಇಲಾಖೆಗಳ ಮುಖ್ಯಸ್ಥರನ್ನು ಒಳಗೊಂಡ ಸಮಿತಿ ಇದ್ದರೂ ಯಾವ ಇಲಾಖೆ ನಡುವೆಯೂ ಸಮನ್ವಯತೆ ಕಾಣುತ್ತಿಲ್ಲ. ಹಾಗಾಗಿ ಕೆಲಸ ಮಾಡಿದ ನಂತರ ಮತ್ತೆಮತ್ತೆ ಅಗೆಯಲಾಗುತ್ತಿದೆ.
ಪ್ರಾಮಾಣಿಕರಿಗೆ ಉಳಿಗಾಲವಿಲ್ಲ:ಸ್ಮಾರ್ಟ್ ಸಿಟಿ ಎಂಬ ಹುಲ್ಲುಗಾವಲಿನಲ್ಲಿ ಯಾರು ಎಷ್ಟು ಮೇವು ಹೊತ್ತೊಯ್ದರೂ ಯಾರಿಗೂ ಕಾಣುತ್ತಿಲ್ಲ. ಇಂತಹದಕ್ಕೆಲ್ಲ ಸ್ವಲ್ಪ ಮಟ್ಟಿಗೆ ತಡೆ ಹಾಕಿದ್ದ ಸ್ಮಾರ್ಟ್ ಸಿಟಿ ಸಿಇಒ ಆಗಿದ್ದ ಟಿ.ಭೂಬಾಲನ್ ಅವರನ್ನು ಎತ್ತಂಗಡಿ ಮಾಡಿಸಲಾಯಿತು. ತೀವ್ರ ವಿರೋಧ ವ್ಯಕ್ತವಾದ ನಂತರ ಅದೇ ಜಾಗಕ್ಕೆ ನಿಯೋಜಿಸಲಾಯಿತು. ಈಗ ಮತ್ತೊಮ್ಮೆ ವರ್ಗಾವಣೆ ಮಾಡಲಾಗಿದೆ. ಹಾಗಾಗಿ ಅವರ ಬಯಕೆ ಈಡೇರಿದಂತಾಗಿದೆ. ಈ ಯೋಜನೆ ಒಂದು ರೀತಿಯಲ್ಲಿ ಹಿಡಿತಕ್ಕೆ ಸಿಗದಾಗಿದೆ. ಈಗ ಎಲ್ಲವೂ ‘ಅಂದುಕೊಂಡಂತೆ’ ನಡೆಯುತ್ತಿದೆ.
ಚೆನ್ನಾಗಿರುವ ರಸ್ತೆಯನ್ನೇ ಅಗೆದು ಮತ್ತೊಮ್ಮೆ ನಿರ್ಮಿಸಲಾಗುತ್ತಿದೆ. ಕಲ್ಲು ಹಾಸಿನಿಂದ ಮಾಡಿದ್ದ ಪಾದಚಾರಿ ಮಾರ್ಗವನ್ನು ಕಿತ್ತು ಟೈಲ್ಸ್ ಅಳವಡಿಸಲಾಗುತ್ತಿದೆ. ಈ ಕಲ್ಲು ಚಪ್ಪಡಿಗಳನ್ನು ಏನು ಮಾಡಲಾಗುತ್ತಿದೆ ಎಂಬುದಕ್ಕೆ ಯಾರಿಂದಲೂ ಉತ್ತರವಿಲ್ಲ. ಚರಂಡಿಗೆ ಹಾಕಿದ್ದ ಕಲ್ಲುಗಳನ್ನೇ ಕಿತ್ತು ಮತ್ತೊಮ್ಮೆ ಜೋಡಿಸಿ, ಸಿಮೆಂಟ್ ಮೆತ್ತಿ ಹೊಸದಾಗಿ ಕೆಲಸ ಮಾಡಿದಂತೆ ತೋರಿಸಲಾಗುತ್ತಿದೆ. ಇದಾವುದಕ್ಕೂ ಲೆಕ್ಕವಿಲ್ಲ. ನಗರವನ್ನು ಒಂದು ಸುತ್ತುಹಾಕಿದರೆ ಇಂತಹ ಕಾಮಗಾರಿಗಳೇ ಕಣ್ಣಿಗೆ ರಾಚುತ್ತವೆ. ಹಳೆ ಕಲ್ಲಿನ ಮೇಲೆ ಸಿಮೆಂಟ್ ಹಾಕುವುದೇ ‘ಸ್ಮಾಟ್’ ಎಂಬ ಟೀಕೆಗಳು ಜನರಿಂದ ವ್ಯಕ್ತವಾಗುತ್ತಿವೆ.
ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ನಡೆಯುತ್ತಿರುವ ಕಾಮಗಾರಿಗಳು ತೀರ ಕಳಪೆಯಾಗಿವೆ ಎಂಬ ಆರೋಪ ಸಾಮಾನ್ಯವಾಗಿದೆ. ಈ ಬಗ್ಗೆ ಸಂಘ ಸಂಸ್ಥೆಗಳ ಪ್ರಮುಖರು, ನಗರದ ಬಗ್ಗೆ ಕಾಳಜಿ ಹೊಂದಿದವರು ಪ್ರಸ್ತಾಪಿಸಿದ್ದಾರೆ. ಆರೋಪ, ಟೀಕೆಗಳು ಕೇಳಿಬಂದ ಸಮಯದಲ್ಲಿ ಸರಿಪಡಿಸುತ್ತೇವೆ ಎನ್ನುವ ಭರವಸೆ ಸಿಗುತ್ತದೆ. ಅಧಿಕಾರಿಗಳ ಸಭೆನಡೆಸಿ ಕ್ರಮಕೈಗೊಳ್ಳುವ ಹೇಳಿಕೆಗಳು, ಎಚ್ಚರಿಕೆ ಮಾತುಗಳು ವ್ಯಕ್ತವಾಗುತ್ತವೆ. ಅಲ್ಲಿಗೆ ಈ ಕೆಲಸ ಮುಗಿಯಿತು. ಮತ್ತೆ ಅದೇ ಕಳಪೆ ಕಾಮಗಾರಿ ಮುಂದುವರಿಯುತ್ತದೆ. ಕೋಟ್ಯಂತರ ರೂಪಾಯಿ ಹಣ ಪೋಲಾಗುತ್ತಿದೆ. ಈ ಯೋಜನೆಯ ಗುಣಮಟ್ಟ ಹಾಗೂ ಅಕ್ರಮಗಳ ಬಗ್ಗೆ ಸಮಗ್ರ ತನಿಖೆ ನಡೆಯಬೇಕು ಎಂಬ ಕೂಗು ಜೋರಾಗುತ್ತಿದೆ. ಮೂರನೇ ವ್ಯಕ್ತಿಯಿಂದ ಅಥವಾ ವಿಶ್ವಾಸಾರ್ಹ ಸಂಸ್ಥೆಯಿಂದ ತನಿಖೆ ನಡೆಸಬೇಕು ಎಂಬ ಒತ್ತಾಯ ಕೇಳಿಬಂದಿದೆ.
ತಡವಾದ ಕೆಲಸ: 2016ರಲ್ಲೇ ಕಾಮಗಾರಿಗಳು ಆರಂಭವಾಗಿದ್ದು, 2020ಕ್ಕೆ ಪೂರ್ಣಗೊಳ್ಳಬೇಕಿತ್ತು. ಕಾಮಗಾರಿಗಳ ವೇಗ ಗಮನಿಸಿದರೆ ಇನ್ನೂ ಮೂರುನಾಲ್ಕು ವರ್ಷಗಳು ಬೇಕಾಗಬಹುದು. ನಾಲ್ಕು ವರ್ಷಗಳಲ್ಲಿ ಮುಗಿಯಬೇಕಾದ ಕೆಲಸ ಏಳೆಂಟು ವರ್ಷಗಳು ತೆಗೆದುಕೊಳ್ಳುತ್ತಿದೆ.
ಯೋಜನೆ ಮೊತ್ತ: ಈವರೆಗೆ ₹920 ಕೋಟಿ ಹರಿದು ಬಂದಿದೆ. ₹100 ಕೋಟಿಗೂ ಹೆಚ್ಚು ಮೊತ್ತದಲ್ಲಿ ರಸ್ತೆ ಕಾಮಗಾರಿ ಮುಗಿದಿದೆ. ಒಟ್ಟಾರೆ ₹170 ಕೋಟಿ ಮೊತ್ತದ 67 ಕಾಮಗಾರಿಗಳು ಪೂರ್ಣಗೊಂಡಿವೆ. ₹686 ಕೋಟಿ ಮೊತ್ತದ 72 ಕೆಲಸಗಳು ಪ್ರಗತಿಯಲ್ಲಿವೆ. ಇನ್ನೂ ₹35 ಕೋಟಿಯ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ಆರಂಭವಾಗಬೇಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.