ADVERTISEMENT

ಶಿರಾ: ಉದ್ಘಾಟನೆಗೆ ಕಾದಿದೆ ಆಧುನಿಕ ವಧಾಗಾರ

ಎಚ್.ಸಿ.ಅನಂತರಾಮು
Published 24 ಫೆಬ್ರುವರಿ 2025, 7:13 IST
Last Updated 24 ಫೆಬ್ರುವರಿ 2025, 7:13 IST
ಶಿರಾ ತಾಲ್ಲೂಕಿನ ಚೀಲನಹಳ್ಳಿ ಬಳಿ ನಿರ್ಮಾಣವಾಗಿರುವ ಆಧುನಿಕ ವಧಾಗಾರದ ಆಡಳಿತ ಕಚೇರಿ
ಶಿರಾ ತಾಲ್ಲೂಕಿನ ಚೀಲನಹಳ್ಳಿ ಬಳಿ ನಿರ್ಮಾಣವಾಗಿರುವ ಆಧುನಿಕ ವಧಾಗಾರದ ಆಡಳಿತ ಕಚೇರಿ   

ಶಿರಾ: ದಕ್ಷಿಣ ಭಾರತದಲ್ಲಿ ಪ್ರಪ್ರಥಮ ಕುರಿ ಮತ್ತು ಮೇಕೆ ಮಾಂಸ ಉತ್ಪಾದನೆ ಮತ್ತು ಆಧುನಿಕ ಸಂಸ್ಕರಣಾ ಕೇಂದ್ರ (ವಧಾಗಾರ) ತಾಲ್ಲೂಕಿನ ಚೀಲನಹಳ್ಳಿ ಬಳಿ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದಿಂದ ನಿರ್ಮಿಸಲಾಗಿದ್ದು, ಉದ್ಘಾಟನೆಗಾಗಿ ಕಾದು ಕುಳಿತಿದೆ.

ಚೀಲನಹಳ್ಳಿ ಗ್ರಾಮದಲ್ಲಿ 20 ಎಕರೆ ಜಮೀನಿನಲ್ಲಿ ₹46.63 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿದೆ. ಇದರಲ್ಲಿ ಸಿವಿಲ್ ಕಾಮಗಾರಿಗಳಿಗೆ ₹23.53 ಕೋಟಿ ಮತ್ತು ಯಂತ್ರೋಪಕರಣಕ್ಕೆ ₹21.10 ಕೋಟಿ ಖರ್ಚು ಮಾಡಲಾಗಿದೆ.

ರಾಜ್ಯದಲ್ಲಿ ಅತಿ ಹೆಚ್ಚು ಕುರಿ ಮತ್ತು ಮೇಕೆಗಳು ಶಿರಾ ತಾಲ್ಲೂಕಿನಲ್ಲಿರುವುದನ್ನು ಮನಗಂಡ ಹಿಂದೆ ಟಿ.ಬಿ.ಜಯಚಂದ್ರ ಅವರು ಪಶುಸಂಗೋಪನೆ ಸಚಿವರಾಗಿದ್ದ ಸಮಯದಲ್ಲಿ ಅಧುನಿಕ ರೀತಿಯ ವಧಾಗಾರವನ್ನು ಮಂಜೂರು ಮಾಡಿಸಿದರು. ನಂತರ ಇದನ್ನು ಹಾಸನ ಜಿಲ್ಲೆಗೆ ವರ್ಗಾವಣೆ ಮಾಡಲು ಪ್ರಯತ್ನಗಳು ನಡೆದರೂ ಪಟ್ಟು ಬಿಡದೆ ಟಿ.ಬಿ.ಜಯಚಂದ್ರ 2017ರಲ್ಲಿ ಚೀಲನಹಳ್ಳಿ ಸಮೀಪ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು.

ADVERTISEMENT

ರೈತರಿಗೆ ಅನುಕೂಲ: ಶಿರಾ, ಚಿಕ್ಕನಾಯಕನಹಳ್ಳಿ, ಪಾವಗಡ, ಮಧುಗಿರಿ ಹಾಗೂ ಪಕ್ಕದ ಹಿರಿಯೂರು ತಾಲ್ಲೂಕಿನಲ್ಲಿನ ಹೆಚ್ಚಿನ ಸಂಖ್ಯೆಯಲ್ಲಿ ಕುರಿ ಮತ್ತು ಮೇಕೆಗಳಿದ್ದು ವಧಾಗಾರ ಪ್ರಾರಂಭವಾದರೆ ಮಧ್ಯವರ್ತಿಗಳ ಕಾಟವಿಲ್ಲದೆ ಜೀವಂತ ಕುರಿಯ ತೂಕದ ಮೇಲೆ ಬೆಲೆ ನಿಗದಿ ಮಾಡುವುದರಿಂದ ರೈತರಿಗೆ ಹೆಚ್ಚಿನ ಲಾಭ ದೊರೆಯಲಿದೆ. ಜೊತೆಗೆ ಮಾಂಸ ಪ್ರಿಯರಿಗೆ ಆರೋಗ್ಯವಂತ ಕುರಿ ಮತ್ತು ಮೇಕೆಯ ಮಾಂಸ ದೊರೆಯುತ್ತದೆ.

ಆಧುನಿಕ ವಧಾಗಾರದಲ್ಲಿ ಪ್ರತಿನಿತ್ಯ 1,500ಕ್ಕೂ ಹೆಚ್ಚು ಕುರಿ ಮತ್ತು ಮೇಕೆಗಳನ್ನು ವಧೆ ಮಾಡಿ ಉತ್ಕೃಷ್ಟವಾದ ಮಾಂಸವನ್ನು ಬೆಂಗಳೂರು ಸೇರಿದಂತೆ ರಾಜ್ಯ, ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಾರುಕಟ್ಟೆಗೆ ಸರಬರಾಜು ಮಾಡಲು ಉದ್ದೇಶಿಸಲಾಗಿದೆ.

ಉದ್ಘಾಟನೆ ಬಾಕಿ: ಸುಸಜ್ಜಿತವಾದ ಕಟ್ಟಡ ನಿರ್ಮಾಣವಾಗಿ, ಯಂತ್ರೋಪಕರಣ ಜೋಡಣೆ ಸಹ ಮುಗಿದಿದೆ. ಉದ್ಘಾಟನೆ ಬಾಕಿ ಉಳಿದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಖುದ್ದು ವೀಕ್ಷಣೆ ಮಾಡಿ ಉದ್ಘಾಟನೆ ಮಾಡುವುದಾಗಿ ಹೇಳಿರುವ ಹಿನ್ನೆಲೆಯಲ್ಲಿ ಅವರ ಬರುವಿಕೆಗಾಗಿ ಕಾಯಬೇಕಿದೆ. ಈಗಾಗಲೇ ಪಶು ಸಂಗೋಪನಾ ಸಚಿವ ವೆಂಕಟೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿ ಮುಖ್ಯಮಂತ್ರಿಯನ್ನು ಕರೆತಂದು ಉದ್ಘಾಟನೆ ಮಾಡುವುದಾಗಿ ಹೇಳಿ ಹೋಗಿ ತಿಂಗಳು ಕಳೆದಿದೆ.

ಚರ್ಮ ಸಂಸ್ಕರಣೆ ಘಟಕ: ಆಧುನಿಕ ವಧಾಗಾರ ನಿರ್ಮಾಣವಾಗುತ್ತಿರುವುದರಿಂದ ಇಲ್ಲಿಯೇ ₹2 ಕೋಟಿ ವೆಚ್ಚದಲ್ಲಿ ಚರ್ಮ ಸಂಸ್ಕರಣಾ ಘಟಕ ಪ್ರಾರಂಭಿಸಲು ತೀರ್ಮಾನಿಸಲಾಗಿದೆ. ರಾಜ್ಯದಲ್ಲಿ ಪ್ರಾರಂಭವಾಗುತ್ತಿರುವ ಮೊದಲ ಚರ್ಮ ಸಂಸ್ಕರಣ ಘಟಕ ಎನ್ನುವ ಹೆಗ್ಗಳಿಕೆ ಸಹ ಹೊಂದಿದ್ದು ಕಾಮಗಾರಿ ಪ್ರಾರಂಭವಾಗಬೇಕಿದೆ.

ಖಾಸಗಿ ಸಹಭಾಗಿತ್ವ: ಯಂತ್ರೋಪಕರಣಗಳನ್ನು ಆಳವಡಿಸಿ ಘಟಕವನ್ನು ಸಂಪೂರ್ಣಗೊಳಿಸಲು ಸರ್ಕಾರ ಅನುದಾನ ನೀಡಿದ ಕಾರಣ ಖಾಸಗಿ ಸಹಭಾಗಿತ್ವದಲ್ಲಿ (ಪಿ.ಪಿ.ಪಿ) ಉಳಿದ ಕಾಮಗಾರಿ ಕೈಗೊಳ್ಳಲಾಗಿದೆ. ಖಾಸಗಿ ಸಂಸ್ಥೆಯ ಸಹಯೋಗದಲ್ಲಿ ಯಂತ್ರೋಪಕರಣಗಳ ಜೋಡಣೆ ಮಾಡಲಾಗಿದೆ.

ಸ್ಥಳೀಯರಿಗೆ ಒತ್ತು ನೀಡಿ: ಆಧುನಿಕ‌ ವಧಾಗಾರದಲ್ಲಿ ಹೊರಗಿನವರನ್ನು ಕರೆ ತಂದು ಉದ್ಯೋಗ ನೀಡುವ ಬದಲು ಸ್ಥಳೀಯರಿಗೆ ಉದ್ಯೋಗಾವಕಾಶ ನೀಡುವಂತೆ ಸ್ಥಳೀಯವಾಗಿ ಕೂಗು ಪ್ರಾರಂಭವಾಗಿದೆ. ಜೊತೆಗೆ ವಧಾಗಾರ ಪ್ರಾರಂಭಕ್ಕೆ ಮೊದಲು ಸ್ಥಳೀಯ ಕುರಿ ಮತ್ತು ಮೇಕೆ ಸಾಕಾಣಿಕೆದಾರರ ಸಭೆ ನಡೆಸಿ ಜೀವಂತ ಕುರಿ, ಮೇಕೆಗೆ ತೂಕದ ಆಧಾರದ ಮೇಲೆ ದರ ನಿಗದಿಮಾಡಿ ಸ್ಥಳೀಯ ಸಾಕಾಣಿಕೆದಾರರಿಗೆ ಹೆಚ್ಚಿನ ಆದ್ಯತೆ ನೀಡುವಂತೆ ರೈತರು ಒತ್ತಾಯಿಸುತ್ತಾರೆ.

ವಧಾಗಾರದಲ್ಲಿರುವ ಯಂತ್ರೋಪಕರಣ

ಕುರಿಗಾಹಿಗಳ ಬದುಕಿನಲ್ಲಿ ಹೊಸ ತಿರುವು

ಶಿರಾ ತಾಲ್ಲೂಕಿನಲ್ಲಿ ಅತಿ ಹೆಚ್ಚು ಕುರಿಗಾಹಿಗಳಿದ್ದು ಹಲವಾರು ರೀತಿಯಲ್ಲಿ ಶೋಷಣೆಗೆ ಗುರಿಯಾಗುತ್ತಿದ್ದರು. ಈ ಹಿನ್ನೆಲೆಯಲ್ಲಿ ಮಧ್ಯವರ್ತಿಗಳ ಕಾಟವಿಲ್ಲದೆ ಅವರಿಗೆ ಅನುಕೂಲವಾಗುವಂತೆ ಮಾರುಕಟ್ಟೆ ಕಲ್ಪಿಸಿಕೊಡಲು ಆಧುನಿಕ ವಧಾಗಾರ ನಿರ್ಮಿಸಲಾಗಿದೆ. ಇದು ಕುರಿಗಾಹಿಗಳ ಬದುಕಿನಲ್ಲಿ ಹೊಸ ತಿರುವು ನೀಡಲಿದೆ. ಶೀಘ್ರವಾಗಿ ಮುಖ್ಯಮಂತ್ರಿಯನ್ನು ಕರೆಸಿ ಉದ್ಘಾಟನೆ ಮಾಡಲಾಗುವುದು.

ಟಿ.ಬಿ.ಜಯಚಂದ್ರ ಶಾಸಕ

ಕುರಿಗಾಹಿಗಳಿಗೆ ಹೆಚ್ಚಿನ ಅನುಕೂಲ

ಆಧುನಿಕ ವಧಾಗಾರದಿಂದ ಕುರಿಗಾಹಿಗಳಿಗೆ ಹೆಚ್ಚಿನ ಅನುಕೂಲವಾಗುತ್ತದೆ.  ಕುರಿಗಾಹಿಗಳಿಂದ ನೇರವಾಗಿ ಜೀವಂತ ಕುರಿ ಮತ್ತು ಮೇಕೆಗಳನ್ನು ತೂಕದ ಮೇಲೆ ಖರೀದಿ ಮಾಡುವುದರಿಂದ ಅವರಿಗೆ ಉತ್ತಮ ಬೆಲೆ ದೊರೆತು ಅವರು ಆರ್ಥಿಕವಾಗಿ ಸದೃಢರಾಗಲು ಅನುಕೂಲ.

ಡಾ.ನಾಗೇಶ್ ಕುಮಾರ್ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಉಪನಿರ್ದೇಶಕ 

ಸ್ಥಳೀಯರಿಗೆ ಆದ್ಯತೆ ನೀಡಿ

ಬಯಲು ಸೀಮೆಯ ಶಿರಾದ ಕುರಿಗಳಿಗೆ ಹೆಚ್ಚಿನ ಬೇಡಿಕೆ ಇದೆ. ಸೂಕ್ತ ಮಾರುಕಟ್ಟೆ ದೊರೆಯುವುದರಿಂದ ಕುರಿಗಾಹಿಗಳು ಇನ್ನು ಹೆಚ್ಚು ಆರ್ಥಿಕವಾಗಿ ಸಬಲರಾಗಬಹುದು. ಇದರಿಂದಾಗಿ ಸ್ಥಳೀಯವಾಗಿ ಉದ್ಯೋಗಾವಕಾಶ ದೊರೆಯುತ್ತವೆ. ಕುರಿಗಾಹಿಗಳಿಗೆ ಮೊದಲ ಆದ್ಯತೆ ನೀಡಿದರೆ ಹೆಚ್ಚು ಅನುಕೂಲ.

ಸುದರ್ಶನ್ ತಾ.ಪಂ ಮಾಜಿ ಸದಸ್ಯ

ಹೆಮ್ಮೆಯ ವಿಷಯ

ಸರ್ಕಾರಿ ಸ್ವಾಮ್ಯದಿಂದ ದೇಶದಲ್ಲಿ ಪ್ರಾರಂಭವಾಗುತ್ತಿರುವ ಮೊದಲ ಆಧುನಿಕ ವಧಾಗಾರ ಇದಾಗಿರುವುದು ಈ ಭಾಗಕ್ಕೆ ಹೆಮ್ಮೆಯ ವಿಷಯವಾಗಿದೆ. ಶಿರಾ ಸೀಮೆಯ ಕುರಿ ಮತ್ತು ಮೇಕೆಯ ಮಾಂಸ ಉತ್ತಮ ಗುಣಮಟ್ಟದಿಂದ ಕೂಡಿದ್ದು ರುಚಿಕರವಾಗಿರುವುದಕ್ಕೆ ಬೇಡಿಕೆ ಹೆಚ್ಚಿದೆ. ದೇಶ ವಿದೇಶಗಳಲ್ಲಿ ಸಹ ಮುಂದಿನ ದಿನಗಳಲ್ಲಿ ಹೆಚ್ಚು ಬೇಡಿಕೆ ದೊರೆಯುವುದು ಖಚಿತ.

ಶಿವು ಚಂಗಾವರ ರೈತ ಮುಖಂಡ

ಕುರಿಗಾಹಿಗಳ ಸಭೆ ನಡೆಸಿ

ಕೋಟ್ಯಂತರ ರೂಪಾಯಿ ಸರ್ಕಾರದ ಅನುದಾನ ಬಳಕೆ ಮಾಡಿ ನಿರ್ಮಾಣವಾದ ವಧಾಗಾರದ ಉದ್ಘಾಟನೆ ವಿಳಂಬವಾಗುತ್ತಿರುವುದು ನೋವಿನ ಸಂಗತಿ. ಈಗಾಗಲೇ ಮಾರುಕಟ್ಟೆಯಲ್ಲಿ ಮಧ್ಯವರ್ತಿಗಳಿಂದಾಗಿ ಕುರಿಗಾಹಿಗಳು ಮೋಸ ಹೋಗುತ್ತಿದ್ದಾರೆ. ಇಲ್ಲಿ ಮಧ್ಯವರ್ತಿಗಳಿಗೆ ಕಡಿವಾಣ ಹಾಕಿ ನೇರವಾಗಿ ಕುರಿಗಾಹಿಗಳಿಂದ ಖರೀದಿ ಮಾಡಿದರೆ ಲಾಭ ದೊರೆಯುತ್ತದೆ. ಜೊತೆಗೆ ಇಲ್ಲಿ ಕುರಿ ಮತ್ತು ಮೇಕೆಗೆ ಯಾವ ರೀತಿ ದರ ನಿಗದಿ ಮಾಡುತ್ತಾರೆ ಎನ್ನುವ ಕುತೂಹಲ ಇದೆ. ಮೊದಲು ಕುರಿಗಾಹಿಗಳ ಸಭೆ ನಡೆಸಿ ಅವರ ಅನುಮಾನಗಳಿಗೆ ಪರಿಹಾರ ದೊರಕಿಸಿಕೊಡುವ ಕೆಲಸವಾಗಬೇಕು.

ನಾದೂರು ಕೆಂಚಪ್ಪ ರೈತ ಸಂಘದ ಪ್ರಧಾನ ಕಾರ್ಯದರ್ಶಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.