ADVERTISEMENT

ತುಮಕೂರು: ಮಕ್ಕಳಿಗೆ ಜಾಗೃತಿ ಮೂಡಿಸಿದ ನಾಟಕ

​ಪ್ರಜಾವಾಣಿ ವಾರ್ತೆ
Published 12 ಮೇ 2024, 5:27 IST
Last Updated 12 ಮೇ 2024, 5:27 IST
ತುಮಕೂರು ತಾಲ್ಲೂಕು ಮೆಳೆಹಳ್ಳಿಯಲ್ಲಿ ಡಮರುಗ ರಂಗ ಸಂಪನ್ಮೂಲ ಕೇಂದ್ರದಿಂದ ಹಮ್ಮಿಕೊಂಡಿದ್ದ ಚಿಣ್ಣರ ಬಣ್ಣದ ಶಿಬಿರದಲ್ಲಿ ಭಾಗವಹಿಸಿದ್ದ ಮಕ್ಕಳು
ತುಮಕೂರು ತಾಲ್ಲೂಕು ಮೆಳೆಹಳ್ಳಿಯಲ್ಲಿ ಡಮರುಗ ರಂಗ ಸಂಪನ್ಮೂಲ ಕೇಂದ್ರದಿಂದ ಹಮ್ಮಿಕೊಂಡಿದ್ದ ಚಿಣ್ಣರ ಬಣ್ಣದ ಶಿಬಿರದಲ್ಲಿ ಭಾಗವಹಿಸಿದ್ದ ಮಕ್ಕಳು   

ತುಮಕೂರು: ತಾಲ್ಲೂಕಿನ ಮೆಳೆಹಳ್ಳಿಯಲ್ಲಿ ಡಮರುಗ ರಂಗ ಸಂಪನ್ಮೂಲ ಕೇಂದ್ರದಿಂದ ಹಮ್ಮಿಕೊಂಡಿದ್ದ ಚಿಣ್ಣರ ಬಣ್ಣದ ಶಿಬಿರಕ್ಕೆ ಶುಕ್ರವಾರ ತೆರೆ ಬಿತ್ತು. ಸಮಾರೋಪ ಸಮಾರಂಭದಲ್ಲಿ 4 ಕಥೆಗಳ ‘ಕಥಾಲೋಕ’ ಪ್ರಯೋಗ ಗಮನ ಸೆಳೆಯಿತು.

ಮೊದಲ ಕಥೆಯಲ್ಲಿ ದಿನನಿತ್ಯದ ಅಗತ್ಯಗಳಿಗೆ ನಾವು ವಿದೇಶಗಳನ್ನೇ ಅವಲಂಭಿಸಬೇಕಿದ್ದು, ಅವುಗಳಿಲ್ಲದೆ ಜೀವನ ನಡೆಸುವುದೇ ಕಷ್ಟಕರವಾಗಿದೆ. ವಿದೇಶಿ ವ್ಯಾಮೋಹ ಬಿಟ್ಟು ದೇಶೀಯತೆ ಕಡೆಗೆ ವಾಲಬೇಕಿದೆ ಎಂಬ ಸಂದೇಶವುಳ್ಳ ‘ಉದ್ಯಾನವನ’ ಗಮನ ಸೆಳೆಯಿತು. ಆಳುವ ವರ್ಗಗಳು ಯಾವ ವಿಷಯಕ್ಕೆ ಆದ್ಯತೆ ಕೊಡಬೇಕು, ಯಾವುದಕ್ಕೆ ಆದ್ಯತೆ ಕೊಡಬಾರದೆಂಬ ಸಾಮಾನ್ಯ ಜ್ಞಾನವಿಲ್ಲದೆ ಜನರ ಜೀವನ ದುಃಸ್ಥಿತಿಗೆ ಇಳಿದಿದೆ ಎಂಬ ಸಂದೇಶ ಹೊತ್ತ ‘ನ್ಯಾಯಸ್ಥಾನ’ ಮಕ್ಕಳಿಂದ ಮೂಡಿಬಂತು.

ರಕ್ಷಣಾ ಇಲಾಖೆ ಸಾಮಾನ್ಯರ ಜೀವನದಲ್ಲಿ ಯಾಂತ್ರಿಕವಾಗಿ ಸ್ಪಂದಿಸುತ್ತಿದೆ. ಪೊಲೀಸರ ಮೃಗೀಯ ವರ್ತನೆ ಇಲಾಖೆಯ ನಂಬಿಕೆಯನ್ನೇ ಪ್ರಶ್ನಿಸುವಂತಿದೆ. ಅದರಲ್ಲಿ ಒಂದು ಮಗುವಿನ ಮಾತಿನಂತೆ ಮೃಗೀಯ ಮನಸ್ಸಿನ ಮನುಷ್ಯನಿಗಿಂತ, ಮಗುವಿನ ಮನಸ್ಸಿನ ಪ್ರಾಣಿಗಳೇ ಮೇಲು ಎಂಬ ಪ್ರತಿಬಿಂಬ ಹಾಗೂ ಗುಮಾಸ್ತರು ಮನಸ್ಸು ಮಾಡಿದರೆ ಯಾರನ್ನಾದರೂ ಯಾಮಾರಿಸಿ, ಗೊಂದಲ ಸೃಷ್ಟಿಸುತ್ತಾರೆಂಬ ‘ಯಮ ವರ್ಸಸ್ ಗುಮಾಸ್ತ’ ಪ್ರಯೋಗಗಳು ಮನಸೂರೆಗೊಂಡವು. ಮೆಳೇಹಳ್ಳಿ ದೇವರಾಜ್ ರಚಿಸಿ, ನಿರ್ದೇಶಿಸಿದ್ದು, 52 ಮಕ್ಕಳು ಲವಲವಿಕೆಯಿಂದ ಅಭಿನಯಿಸಿದರು.

ADVERTISEMENT

ಶಿಬಿರದ ಸಮಾರೋಪ ಸಮಾರಂಭ ಉದ್ಘಾಟಿಸಿದ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಕೆ.ಟಿ.ತಿಪ್ಪೇಸ್ವಾಮಿ, ‘ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪಠ್ಯೇತರ ಚಟುವಟಿಕೆಗಳು ಬಹಳ ಮುಖ್ಯ. ಡಮರುಗ ಸಂಸ್ಥೆಯು ಗ್ರಾಮೀಣ ಮಕ್ಕಳಿಗೆ ರಂಗಶಿಬಿರ ನಡೆಸಿಕೊಂಡು ಬರುತ್ತಿರುವುದು ಅಭಿನಂದನಾರ್ಹ’ ಎಂದು ಹೇಳಿದರು.

ಕಲಾವಿದರಾದ ಸುಧಾ, ‘ನಾನು ರಂಗ ತಂಡಗಳ ನಿರಂತರ ಸಂಪರ್ಕದಲ್ಲಿ ಇದ್ದುಕೊಂಡೇ ಬಂದಿದ್ದೇನೆ. ಆದರೆ ಗ್ರಾಮೀಣ ಮಟ್ಟದಲ್ಲಿ ಒಂದು ತಿಂಗಳ ಕಾಲ ಪೂರ್ಣಾವಧಿ ರಂಗ ಶಿಬಿರ ಆಯೋಜಿಸಿರುವುದು ತೀರಾ ಅಪರೂಪ. ಅಂತಹ ಕೆಲಸವನ್ನು ಸಂಸ್ಥೆ ಮಾಡಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.