ADVERTISEMENT

ತುಮಕೂರು | ‘ಸ್ಮಾರ್ಟ್‌ ಸಿಟಿ’ಯಲ್ಲಿ ಶೌಚಾಲಯಕ್ಕೂ ಪರದಾಟ

ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 12 ಶೌಚಾಲಯ; ನಾಲ್ಕು ಕಟ್ಟಡಗಳಿಗೆ ಬೀಗ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2025, 3:09 IST
Last Updated 30 ಆಗಸ್ಟ್ 2025, 3:09 IST
ತುಮಕೂರಿನ ಬನಶಂಕರಿ ವೃತ್ತದ ಬಳಿ ಶೌಚಾಲಯಕ್ಕೆ ಬೀಗ ಹಾಕಿರುವುದು
ತುಮಕೂರಿನ ಬನಶಂಕರಿ ವೃತ್ತದ ಬಳಿ ಶೌಚಾಲಯಕ್ಕೆ ಬೀಗ ಹಾಕಿರುವುದು   

ತುಮಕೂರು: ನಗರ ‘ಸ್ಮಾರ್ಟ್‌ ಸಿಟಿ’ ಎಂಬ ಹಿರಿಮೆಗೆ ಪಾತ್ರವಾಗಿದೆ. ಮಹಾನಗರ ಪಾಲಿಕೆ ವ್ಯಾಪ್ತಿಗೆ ಮತ್ತಷ್ಟು ಹಳ್ಳಿ ಸೇರಿಸಲು ಪ್ರಯತ್ನ ಆರಂಭವಾಗಿದೆ. ದಿನದಿಂದ ದಿನಕ್ಕೆ ನಗರ ಬೆಳೆಯುತ್ತಲೇ ಸಾಗಿದ್ದರೂ ಶೌಚಾಲಯಕ್ಕೆ ಪರದಾಡುವುದು ಮಾತ್ರ ತಪ್ಪಿಲ್ಲ.

35 ವಾರ್ಡ್‌ ಹೊಂದಿರುವ ನಗರದಲ್ಲಿ ಸಾರ್ವಜನಿಕ ಶೌಚಾಲಯಗಳು ಸಮರ್ಪಕವಾಗಿಲ್ಲ. ಕನಿಷ್ಠ ವಾರ್ಡ್‌ಗೆ ಒಂದರಂತೆ ಶೌಚಾಲಯಗಳಿಲ್ಲ. ಪಾಲಿಕೆಯಿಂದ 12 ಶೌಚಾಲಯ ನಿರ್ಮಿಸಿದ್ದು, ಎರಡು ಕಡೆ ಬೀಗ ಜಡಿಯಲಾಗಿದೆ. ಉಳಿದ ಕಡೆಗಳಲ್ಲಿ ನಿರ್ವಹಣೆ ಕೊರತೆಯಿಂದ ತಿಂಗಳಿಗೆ 15 ದಿನ ಬಾಗಿಲು ಹಾಕಿರುತ್ತವೆ.

ಬಿ.ಎಚ್.ರಸ್ತೆ, ಕಾಲ್‌ಟೆಕ್ಸ್‌, ಟೌನ್‌ಹಾಲ್‌ ಸೇರಿ ಪ್ರಮುಖ ವೃತ್ತ, ರಸ್ತೆ ಹೊರತು ಪಡಿಸಿದರೆ ಉಳಿದ ಯಾವುದೇ ಕಡೆಗಳಲ್ಲಿ ಶೌಚಾಲಯದ ಸೌಲಭ್ಯ ಇಲ್ಲ. ಕುಣಿಗಲ್‌ ರಸ್ತೆಯಲ್ಲೂ ಇದೇ ಸಮಸ್ಯೆ. ಬಹುತೇಕ ಕಡೆಗಳಲ್ಲಿ ಬಯಲೇ ಗತಿಯಾಗಿದೆ. ಸ್ಮಾರ್ಟ್‌ ಸಿಟಿ ಯೋಜನೆಯಡಿ ನಗರದ ವಿವಿಧೆಡೆ ನಿರ್ಮಿಸಿದ ಶೌಚಾಲಯ ಬಂದ್‌ ಮಾಡಲಾಗಿದೆ.

ADVERTISEMENT

ಪಾಲಿಕೆಗೆ ಕೂಗಳತೆ ದೂರದ ಜೂನಿಯರ್‌ ಕಾಲೇಜು ಮೈದಾನದಲ್ಲಿರುವ ಕಟ್ಟಡ ಪಾಳು ಬಿದ್ದಿದೆ. ನಿರ್ಮಾಣವಾದ ದಿನದಿಂದ ಇದನ್ನು ಬಳಕೆಗೆ ನೀಡಿಲ್ಲ. ಅಶೋಕ ನಗರದ ಹೈಟೆಕ್‌ ಶೌಚಾಲಯ ಸ್ಥಿತಿಯೂ ಹೀಗೆ ಇದೆ. ಮಿನಿ ಮಾರುಕಟ್ಟೆ, ಗ್ರಂಥಾಲಯ, ಮುಖ್ಯರಸ್ತೆ, ಸ್ಮಶಾನಕ್ಕೆ ಹೊಂದಿಕೊಂಡಂತೆ ಕಟ್ಟಡ ನಿರ್ಮಿಸಲಾಗಿತ್ತು. ಇದು ಕೇವಲ ನೋಡುವುದಕ್ಕೆ ಸೀಮಿತವಾಗಿದೆ.

‘ಎರಡೂ ಶೌಚಾಲಯ ನಿರ್ವಹಣೆಗಾಗಿ ಟೆಂಡರ್‌ ಕರೆಯಲಾಗಿತ್ತು. ಎರಡು ಬಾರಿ ಟೆಂಡರ್‌ ಆಹ್ವಾನಿಸಿದರೂ ಯಾರೊಬ್ಬರೂ ಭಾಗವಹಿಸಿರಲಿಲ್ಲ. ಅದೇ ಕಾರಣಕ್ಕೆ ಉಪಯೋಗಕ್ಕೆ ನೀಡಲು ಆಗುತ್ತಿಲ್ಲ’ ಎಂದು ಮಹಾನಗರ ಪಾಲಿಕೆ ಪರಿಸರ ಎಂಜಿನಿಯರ್‌ ನಿಖಿತಾ ಪ್ರತಿಕ್ರಿಯಿಸಿದರು.

‘ಟೆಂಡರ್‌ನಲ್ಲಿ ಯಾರೂ ಪಾಲ್ಗೊಳ್ಳದಿದ್ದರೆ ಪಾಲಿಕೆಯಿಂದ ನಿರ್ವಹಿಸಬಹುದು. ಅಧಿಕಾರಿಗಳಿಗೆ ಇಚ್ಛಾಶಕ್ತಿಯ ಕೊರತೆ. ಹೀಗಾಗಿ ಕಟ್ಟಡಗಳು ಉದ್ಘಾಟನೆಯ ಭಾಗ್ಯ ಕಂಡಿಲ್ಲ’ ಎಂದು ಅಶೋಕ ನಗರದ ಮಂಜುನಾಥ್‌ ಅಸಮಾಧಾನ ವ್ಯಕ್ತಪಡಿಸುತ್ತಾರೆ.

ಸಂಚಾರಿ ಶೌಚಾಲಯ ರಸ್ತೆಗೆ: ಸುಮಾರು ₹15 ಲಕ್ಷ ವೆಚ್ಚದಲ್ಲಿ ಖರೀದಿಸಿದ್ದ ‘ಸಂಚಾರಿ’ ಶೌಚಾಲಯ ಜನರ ಬಳಕೆಗೆ ಸಿಗುತ್ತಿದೆ. ಜನರು ಹೆಚ್ಚಾಗಿ ಸೇರುವ ಜಯನಗರದ ಮಿನಿ ಮಾರುಕಟ್ಟೆ, ಶೆಟ್ಟಿಹಳ್ಳಿ ಭಾಗದಲ್ಲಿ ವಾಹನ ನಿಲ್ಲಿಸಲಾಗುತ್ತಿದೆ. ಇದರಿಂದ ಈ ಭಾಗದಲ್ಲಿ ಸಮಸ್ಯೆ ಸ್ವಲ್ಪ ತಗ್ಗಿದೆ.

2024ರ ಮೇ ತಿಂಗಳಲ್ಲಿ ಖರೀದಿಸಿ, ಸುಮಾರು ಏಳು ತಿಂಗಳು ಕಾಲ ಪಾಲಿಕೆ ಆವರಣದಲ್ಲಿ ನಿಲ್ಲಿಸಲಾಗಿತ್ತು. ಕಳೆದ ಕೆಲ ದಿನಗಳಿಂದ ಸಾರ್ವಜನಿಕರ ಉಪಯೋಗಕ್ಕೆ ನೀಡಲಾಗುತ್ತಿದೆ. ಸಭೆ, ಬೃಹತ್‌ ಕಾರ್ಯಕ್ರಮಗಳು ನಡೆದ ಸಮಯದಲ್ಲಿ ಸಂಚಾರಿ ಶೌಚಾಲಯಕ್ಕೆ ನೆರವಾಗಿದೆ.

ತುಮಕೂರು ಜೂನಿಯರ್‌ ಕಾಲೇಜು ಮೈದಾನದ ಶೌಚಾಲಯ ಮುಚ್ಚಿರುವುದು

6 ಹೊಸ ಶೌಚಾಲಯ

ಜನ ಸಂದಣಿ ಹೆಚ್ಚಿರುವ ಕಡೆಗಳಲ್ಲಿ ಹೊಸದಾಗಿ 6 ಶೌಚಾಲಯ ನಿರ್ಮಿಸಲು ಪಾಲಿಕೆ ಯೋಜನೆ ರೂಪಿಸಿದೆ. ಇದಕ್ಕಾಗಿ ₹48 ಲಕ್ಷ ವೆಚ್ಚ ಮಾಡುತ್ತಿದೆ. ವಿಶ್ವವಿದ್ಯಾಲಯ ಮುಂಭಾಗ ಎನ್‌ಇಪಿಎಸ್‌ ಠಾಣೆ ಬಳಿ ಜೆ.ಸಿ.ರಸ್ತೆ ಎಪಿಎಂಸಿ ಮಾರುಕಟ್ಟೆ ಬಳಿ ಕಟ್ಟಡಗಳು ನಿರ್ಮಾಣದ ಹಂತದಲ್ಲಿವೆ. ಶಿರಾ ಗೇಟ್‌ ಮತ್ತು ಆರ್‌ಟಿಒ ಕಚೇರಿ ಹತ್ತಿರ ಎರಡು ಶೌಚಾಲಯಕ್ಕೆ ಜಾಗ ಗುರುತಿಸಲಾಗಿದೆ. ಎಲ್ಲ ಕಡೆಗಳಲ್ಲಿ ಶೌಚಾಲಯ ನಿರ್ಮಾಣಕ್ಕೆ ಫುಟ್‌ಪಾತ್‌ ಆಕ್ರಮಿಸಿಕೊಂಡಿದ್ದು ಸಾರ್ವಜನಿಕ ವಲಯದಿಂದ ಆಕ್ರೋಶ ವ್ಯಕ್ತವಾಗುತ್ತಿದೆ. ಎನ್‌ಇಪಿಎಸ್‌ ಠಾಣೆ ಬಳಿ ಪಾದಚಾರಿಗಳು ಮುಖ್ಯರಸ್ತೆಯಲ್ಲಿ ಓಡಾಡಬೇಕಾದ ಪರಿಸ್ಥಿತಿ ಸೃಷ್ಟಿಯಾಗಿದೆ.

-ಶೌಚಾಲಯ ಆರಂಭಕ್ಕೆ ದೇಗುಲ ಅಡ್ಡಿ?

ನಗರದ ಉಪ್ಪಾರಹಳ್ಳಿ 60 ಅಡಿ ರಸ್ತೆಯ 1ನೇ ಅಡ್ಡ ರಸ್ತೆ ಬಳಿ ಬನಶಂಕರಿ ವೃತ್ತದ ಹತ್ತಿರ ಇರುವ ಶೌಚಾಲಯಗಳಿಗೆ ಬೀಗ ಹಾಕಲಾಗಿದೆ. ಬನಶಂಕರಿ ಶೌಚಾಲಯ ಐದಾರು ವರ್ಷಗಳಿಂದ ಬಾಗಿಲು ತೆಗೆದಿಲ್ಲ. ಮಹಾನಗರ ಪಾಲಿಕೆಯಿಂದ ಕಟ್ಟಡ ನಿರ್ಮಿಸಿದ್ದು ಜನರ ಬಳಕೆಗೆ ಸಿಗುತ್ತಿಲ್ಲ. ‘ಇದರ ಪಕ್ಕದಲ್ಲಿಯೇ ಬನಶಂಕರಿ ದೇವಾಲಯ ಇದ್ದು ಶೌಚಾಲಯ ಆರಂಭಕ್ಕೆ ದೇಗುಲದವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ’ ಎಂದು ಪಾಲಿಕೆ ಪರಿಸರ ಎಂಜಿನಿಯರ್‌ ನಿಖಿತಾ ಹೇಳುತ್ತಾರೆ. ಉಪ್ಪಾರಹಳ್ಳಿ ಶೌಚಾಲಯಕ್ಕೆ ವಿದ್ಯುತ್‌ ಸಂಪರ್ಕ ಕಲ್ಪಿಸುವುದು ವಿಳಂಬವಾಗಿದ್ದು ಬಳಕೆ ಸಾಧ್ಯವಾಗುತ್ತಿಲ್ಲ.

ಬಂಕ್‌ನಲ್ಲಿಯೂ ಬೀಗ

ಕುಣಿಗಲ್‌ ರಸ್ತೆಯಲ್ಲಿ ಎಲ್ಲಿಯೂ ಒಂದು ಸಾರ್ವಜನಿಕ ಶೌಚಾಲಯವಿಲ್ಲ. ಮೂತ್ರ ವಿಸರ್ಜನೆಗಾಗಿ ಅರ್ಧ ಕಿ.ಮೀ ದೂರ ಹೋಗಬೇಕಾಗಿದೆ. ಪೆಟ್ರೋಲ್‌ ಬಂಕ್‌ನಲ್ಲಿಯೂ ಬೀಗ ಹಾಕಿರುತ್ತಾರೆ. ಸ್ಮಾರ್ಟ್‌ ಸಿಟಿಯಲ್ಲಿ ಜನರ ಪರದಾಟ ತಪ್ಪುತ್ತಿಲ್ಲ. ಅಜ್ಮೀರ್ ಆಟೊ ಚಾಲಕ ** 5 ವರ್ಷ ಕಳೆಯಿತು ಬನಶಂಕರಿಯ ಶೌಚಾಲಯಕ್ಕೆ ಬೀಗ ಹಾಕಿ 5 ವರ್ಷ ಕಳೆಯಿತು. ಪ್ರಾರಂಭದ ಸ್ವಲ್ಪ ದಿನ ತೆಗೆದಿದ್ದರು ನಂತರ ಬಳಕೆಗೆ ನೀಡಲಿಲ್ಲ. ಮನೆಯಿಂದ ಹೊರ ಬಂದವರು ಅನ್ಯ ಕಾರ್ಯದ ನಿಮಿತ್ತ ಬೇರೆ ಕಡೆಗೆ ಹೋಗುವವರಿಗೆ ತೊಂದರೆಯಾಗುತ್ತದೆ. ಗೋವಿಂದು ಬನಶಂಕರಿ ** ಸ್ಪಂದನೆ ಇಲ್ಲ ಶೌಚಾಲಯ ಆರಂಭಕ್ಕೆ ಸಂಬಂಧಿಸಿದಂತೆ ಮಹಾನಗರ ಪಾಲಿಕೆ ಕಚೇರಿಯಲ್ಲಿ ಹಲವು ಬಾರಿ ಮನವಿ ಸಲ್ಲಿಸಲಾಗಿದೆ. ಅಧಿಕಾರಿಗಳಿಂದ ಸೂಕ್ತ ಸ್ಪಂದನೆ ದೊರೆಯುತ್ತಿಲ್ಲ. ಮೂರ್ತಿ ಬನಶಂಕರಿ ** ತೆರಿಗೆ ಹಣ ವ್ಯಯ ನಗರದ ವಿವಿಧೆಡೆ ಸಾರ್ವಜನಿಕರ ತೆರಿಗೆ ಹಣದಲ್ಲಿ ಲಕ್ಷಾಂತರ ರೂಪಾಯಿ ವೆಚ್ಚಮಾಡಿ ಶೌಚಾಲಯ ನಿರ್ಮಿಸಲಾಗಿದೆ. ನಿರ್ವಹಣೆಗೆ ಅಧಿಕಾರಿಗಳು ಆಸಕ್ತಿ ತೋರುತ್ತಿಲ್ಲ. ಕಟ್ಟಡ ಕಟ್ಟಿದರೂ ಯಾರಿಗೂ ಉಪಯೋಗಕ್ಕೆ ಬರುತ್ತಿಲ್ಲ. ಕಿರಣ್ ತುಮಕೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.