ADVERTISEMENT

ತುಮಕೂರು: ‘ಆಪರೇಷನ್ ಸಿಂಧೂರ’ ಯಶಸ್ವಿಗೆ ನುಡಿ ನಮನ

ದೇಶದಲ್ಲೇ ಮೊದಲ ಬಾರಿಗೆ ‘ಆಪರೇಷನ್ ಸಿಂಧೂರ’ ವಿಜಯೋತ್ಸವ ಆಚರಣೆ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2025, 7:33 IST
Last Updated 31 ಆಗಸ್ಟ್ 2025, 7:33 IST
ತುಮಕೂರಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ಆಪರೇಷನ್ ಸಿಂಧೂರ’ ವಿಜಯೋತ್ಸವವನ್ನು ಮೇಘಾಲಯ ರಾಜ್ಯಪಾಲ ಸಿ.ಎಚ್.ವಿಜಯಶಂಕರ್ ಉದ್ಘಾಟಿಸಿದರು. ನಿರ್ಮಲಾನಂದನಾಥ ಸ್ವಾಮೀಜಿ, ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಸಿದ್ಧಲಿಂಗ ಸ್ವಾಮೀಜಿ, ಮಾಜಿ ಸಚಿವ ಸೊಗಡು ಶಿವಣ್ಣ, ಶಾಸಕರಾದ ಬಿ.ಸುರೇಶ್‌ಗೌಡ, ಎಂ.ಟಿ.ಕೃಷ್ಣಪ್ಪ ಇತರರು ಭಾಗವಹಿಸಿದ್ದರು
ತುಮಕೂರಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ಆಪರೇಷನ್ ಸಿಂಧೂರ’ ವಿಜಯೋತ್ಸವವನ್ನು ಮೇಘಾಲಯ ರಾಜ್ಯಪಾಲ ಸಿ.ಎಚ್.ವಿಜಯಶಂಕರ್ ಉದ್ಘಾಟಿಸಿದರು. ನಿರ್ಮಲಾನಂದನಾಥ ಸ್ವಾಮೀಜಿ, ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಸಿದ್ಧಲಿಂಗ ಸ್ವಾಮೀಜಿ, ಮಾಜಿ ಸಚಿವ ಸೊಗಡು ಶಿವಣ್ಣ, ಶಾಸಕರಾದ ಬಿ.ಸುರೇಶ್‌ಗೌಡ, ಎಂ.ಟಿ.ಕೃಷ್ಣಪ್ಪ ಇತರರು ಭಾಗವಹಿಸಿದ್ದರು   

ತುಮಕೂರು: ‘ಆಪರೇಷನ್ ಸಿಂಧೂರ’ ಯಶಸ್ಸಿಗೆ ಕಾರಣಕರ್ತರಾದವರನ್ನು ಸ್ಮರಿಸುವ ಮೂಲಕ ವಿಜಯೋತ್ಸವ ಆಚರಿಸಲಾಯಿತು. ಸೈನಿಕರು, ವಿಜ್ಞಾನಿಗಳು ಹಾಗೂ ಕಾರ್ಯಾಚರಣೆಯಲ್ಲಿ ಭಾಗಿಯಾದವರಿಗೆ ನಮನ ಸಲ್ಲಿಸಲಾಯಿತು.

ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ಶನಿವಾರ ‘ಆಪರೇಷನ್ ಸಿಂಧೂರ ವಿಜಯೋತ್ಸವ ಸಮಿತಿ’ ನೇತೃತ್ವದಲ್ಲಿ ದೇಶದಲ್ಲೇ ಮೊದಲ ಬಾರಿಗೆ ವಿಜಯೋತ್ಸವ ಹಮ್ಮಿಕೊಳ್ಳಲಾಗಿತ್ತು. ವಿಜ್ಞಾನಿಗಳು, ಮಾಜಿ ಸೈನಿಕರು, ಮಠಾಧೀಶರು, ಸಚಿವರು, ರಾಜಕಾರಣಿಗಳು, ವಿದ್ಯಾರ್ಥಿಗಳು ಹಾಗೂ ದೇಶಾಭಿಮಾನಿಗಳು ವಿಜಯೋತ್ಸವ ಸಾಕ್ಷೀಕರಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಮೇಘಾಲಯ ರಾಜ್ಯಪಾಲ ಸಿ.ಎಚ್.ವಿಜಯಶಂಕರ್, ‘ಆಪರೇಷನ್ ಸಿಂಧೂರ ಕಾರ್ಯಾಚರಣೆ ಐತಿಹಾಸಿಕ ಯಶಸ್ಸು ಕಂಡಿದೆ. ದೇಶದ ಏಕತೆ, ದೇಶಭಕ್ತಿಯ ಪ್ರತೀಕವಾಗಿ ಕಾಣುತ್ತಿದೆ. ದೇಶದಲ್ಲೇ ಮೊದಲ ಬಾರಿಗೆ ವಿಜಯೋತ್ಸವ ಆಚರಿಸುತ್ತಿರುವುದು ಹೆಮ್ಮೆಯ ಸಂಗತಿ. ಆ ಮೂಲಕ ಅಪರೂಪದ ಸಂದೇಶ ರವಾನೆಯಾಗಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ADVERTISEMENT

ಭಾರತೀಯರು ಒಟ್ಟಾಗಿರುವುದೇ ಸೇನೆಯ ಶಕ್ತಿಯನ್ನು ಹೆಚ್ಚಿಸಿದೆ. ದೇಶ, ಭಾರತ ಮಾತೆಗೆ ಅಪಮಾನವಾದರೆ ಸಹಿಸುವುದಿಲ್ಲ ಎಂಬ ಸಂದೇಶ ನೀಡಲಾಗಿದೆ. ಭಾರತದ ಮೇಲೆ ಕಣ್ಣಿಟ್ಟರೆ ತಕ್ಕ ಉತ್ತರ ಕೊಡುವ ಶಕ್ತಿ ಇದೆ ಎಂಬುದನ್ನು ತೋರಿಸಿ ಕೊಡಲಾಗಿದೆ. ಎಂತಹುದೇ ಸಂದರ್ಭ ಎದುರಾದರೂ ತಕ್ಕ ಉತ್ತರ ಸಿಗಲಿದೆ ಎಂದು ಎಚ್ಚರಿಸಿದರು.

ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ‘ಸೇನೆ ಮಾಡಿದ ಸಾಧನೆ ಅಪೂರ್ವವಾದದ್ದು. ವೈರಿ ರಾಷ್ಟ್ರದ ಮೇಲೆ ದಾಳಿ ನಡೆಸಿ ಅಲ್ಲಿನ ನಾಗರಿಕರಿಗೆ ತೊಂದರೆಯಾಗದಂತೆ ಕೇವಲ ಉಗ್ರರ ನೆಲೆಗಳನ್ನು ನಾಶಪಡಿಸುವಂತಹ ಸಾಮರ್ಥ್ಯ ನಮ್ಮ ಸೇನೆಗಿದೆ ಎಂಬುದನ್ನು ತೋರಿಸಿಕೊಟ್ಟಿದೆ. ಯಾವುದೇ ದೇಶದಲ್ಲಿ ಕ್ರಾಂತಿಯಾದರೆ ಅದು ಯುವ ಶಕ್ತಿಯಿಂದ ಎಂಬುದನ್ನು ಮರೆಯಬಾರದು’ ಎಂದು ಹೇಳಿದರು.

ಸಿದ್ಧಲಿಂಗ ಸ್ವಾಮೀಜಿ, ‘ಪಾಕಿಸ್ತಾನದ ವಿರುದ್ಧ ಭಾರತ ಯುದ್ಧ ಮಾಡಿಲ್ಲ. ಭಯೋತ್ಪಾದಕರು, ದೇಶದ್ರೋಹಿಗಳ ವಿರುದ್ಧ ಯುದ್ಧ ನಡೆದಿದೆ. ಪಾಕಿಸ್ತಾನ ನಮ್ಮ ಮೇಲೆ ಯುದ್ಧಕ್ಕೆ ಬಂದರೂ ಭಾರತ ಒಳ್ಳೆಯದನ್ನೇ ಬಯಸಿದೆ. ಇತ್ತೀಚೆಗೆ ಹವಾಮಾನ ಮಾಹಿತಿ ನೀಡಿದ್ದರಿಂದ ಪಾಕ್‌ನಲ್ಲಿ 1.50 ಲಕ್ಷ ಜನರ ರಕ್ಷಣೆ ಸಾಧ್ಯವಾಗಿದೆ. ಭಾರತ ಸದಾ ವಿಶ್ವಕ್ಕೆ ಶಾಂತಿ ಬಯಸುವ ರಾಷ್ಟ್ರವಾಗಿದೆ’ ಎಂದು ಅಭಿಪ್ರಾಯಪಟ್ಟರು.

ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ, ‘ಯಾವುದೇ ದೇಶ ನಮ್ಮ ವಿರುದ್ಧ ಪರಮಾಣು ಬೆದರಿಕೆ ಹಾಕುವುದನ್ನು ಸಹಿಸುವುದಿಲ್ಲ. ಭಯೋತ್ಪಾದನೆಗೂ ಅವಕಾಶ ನೀಡುವುದಿಲ್ಲ. ರಕ್ತ ಹಾಗೂ ನೀರು ಒಟ್ಟಿಗೆ ಹರಿಯಲು ಸಾಧ್ಯವಿಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದೇವೆ’ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಾರ್ವಜನಿಕರು

ವಿಜಯೋತ್ಸವ ಸಮಿತಿ ಅಧ್ಯಕ್ಷ ಸೊಗಡು ಶಿವಣ್ಣ ಸೇನೆಯ ಸಾಧನೆ ಸ್ಮರಿಸಿದರು.

ಸಂಸದ ಡಾ.ಸಿ.ಎನ್.ಮಂಜುನಾಥ್, ಶಾಸಕರಾದ ಬಿ.ಸುರೇಶ್‌ಗೌಡ, ಎಂ.ಟಿ.ಕೃಷ್ಣಪ್ಪ, ವಿಜಯೋತ್ಸವ ಸಮಿತಿ ಪ್ರಮುಖರಾದ ಸಂಪಿಗೆ ಜಗದೀಶ್, ಡಾ.ಎಸ್.ಪರಮೇಶ್, ಆಶಾ ಪ್ರಸನ್ನಕುಮಾರ್, ಪ್ರಭಾಕರ್, ಎನ್.ಬಿ.ಪ್ರದೀಪ್‌ ಕುಮಾರ್, ಮುಖಂಡರಾದ ಡಾ.ಎಂ.ಆರ್.ಹುಲಿನಾಯ್ಕರ್, ಚಿದಾನಂದ್, ನಾಡಗೌಡ, ಆರ್.ಸಿ.ಆಂಜನಪ್ಪ ಮೊದಲಾದವರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು

‘ಆರ್ಥಿಕ ಯುದ್ಧ’ ಆರಂಭ

‘ಆಪರೇಷನ್ ಸಿಂಧೂರ’ ನಂತರ ಪರೋಕ್ಷವಾಗಿ ಬೇರೆ ರೀತಿಯಲ್ಲಿ ಯುದ್ಧಗಳು ಆರಂಭವಾಗಿದ್ದು ಭಾರತದ ಮೇಲೆ ‘ಆರ್ಥಿಕ ಯುದ್ಧ’ ನಡೆಯುತ್ತಿದೆ ಎಂದು ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು. ರಕ್ಷಣಾ ಕ್ಷೇತ್ರದಲ್ಲಿ ದೇಶ ಸದೃಢವಾಗಿದೆ. ಯುದ್ಧಮಾಡಿ ಗೆಲ್ಲಲು ಸಾಧ್ಯವಿಲ್ಲದವರು ಬೇರೆ ರೀತಿಯ ಯುದ್ಧ ಆರಂಭಿಸಿದ್ದಾರೆ. ಹಿಂದೆ ಚೀನಾ ಹಾಗೂ ಭಾರತದ ಆರ್ಥಿಕತೆಯಲ್ಲಿ ಹೆಚ್ಚಿನ ವ್ಯತ್ಯಾಸ ಇರಲಿಲ್ಲ. ಆದರೆ ಈಗ ಚೀನಾ ಆರ್ಥಿಕವಾಗಿ ಸಾಕಷ್ಟು ಮುಂದೆ ಸಾಗಿದೆ. ನಾವೂ ಅಂತಹುದೇ ಪ್ರಯತ್ನದಲ್ಲಿ ಮುನ್ನಡೆಯಬೇಕಿದೆ ಎಂದು ಸಲಹೆ ಮಾಡಿದರು.

ಯಶಸ್ಸಿಗೆ ಆಕಾಶ್ ಬ್ರಹ್ಮೋಸ್ ಕಾರಣ

‘ಆಪರೇಷನ್ ಸಿಂಧೂರ’ ಯಶಸ್ಸಿಗೆ ಆಕಾಶ್ ಹಾಗೂ ಬ್ರಹ್ಮೋಸ್ ಕ್ಷಿಪಣಿಗಳು ಕಾರಣ ಎಂದು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಮಾಜಿ ನಿರ್ದೇಶಕ ಪ್ರಹಲ್ಲಾದ್‌ ರಾಮ್‌ರಾವ್ ಬಣ್ಣಿಸಿದರು. ಆಕಾಶ್ ಕ್ಷಿಪಣಿ ದೇಶದ ಒಳಕ್ಕೆ ಯಾರೂ ನುಗ್ಗದಂತೆ ತಡೆದು ದೇಶ ರಕ್ಷಣೆ ಮಾಡಿದರೆ ಬ್ರಹ್ಮೋಸ್ ಕ್ಷಿಪಣಿ ಪಾಕಿಸ್ತಾನಕ್ಕೆ ಹೋಗಿ ದಾಳಿಮಾಡಿ ಶತ್ರುಗಳನ್ನು ನಾಶಮಾಡಿದೆ. ಈ ಕ್ಷಿಪಣಿಗಳನ್ನು ದೇಶದಲ್ಲೇ ನಿರ್ಮಾಣ ಮಾಡಿದ್ದು ಇದಕ್ಕೆ 5 ಸಾವಿರ ಯುವ ವಿಜ್ಞಾನಿಗಳು ಕಾರಣರಾಗಿದ್ದಾರೆ. ಈ ಎರಡೂ ಕ್ಷಿಪಣಿಗಳಿಂದ ದೇಶಕ್ಕೆ ಹೆಮ್ಮೆ ಬಂದಿದೆ. ಶಕ್ತಿ ತಂದುಕೊಟ್ಟಿವೆ. ಇದರಿಂದಾಗಿ ಭಾರತವೆಂದರೆ ಜಗತ್ತಿನಲ್ಲಿ ಭಯವಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮಾಜಿ ಅಧ್ಯಕ್ಷ ಎ.ಎಸ್.ಕಿರಣ್ ಕುಮಾರ್ ‘ಬಾಹ್ಯಾಕಾಶ ಕ್ಷೇತ್ರದಲ್ಲಿನ ಸಾಧನೆಯಿಂದಾಗಿ ಸೇನೆಗೆ ಬೇಕಾದ ಉಪಕರಣ ಹಾಗೂ ಮಾಹಿತಿ ಒದಗಿಸಲು ಸಾಧ್ಯವಾಯಿತು. ಇದರಿಂದಾಗಿ ‘ಆಪರೇಷನ್ ಸಿಂಧೂರ’ ಯಶಸ್ವಿ ಕಾರ್ಯಾಚರಣೆ ನಡೆಸಲಾಯಿತು. ಆ ಮೂಲಕ ದೇಶದ ಸಾಮರ್ಥ್ಯ ಏನೆಂಬುದನ್ನು ತೋರಿಸಿ ಕೊಡಲಾಗಿದೆ’ ಎಂದು ಹೇಳಿದರು. ಸೇನೆ ಹಾಗೂ ತಾಂತ್ರಿಕ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆ (ಎಐ) ಬಳಕೆಯ ಪ್ರಯತ್ನ ನಡೆದಿದೆ. ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆಯಲ್ಲಿ ಸಾಮಾನ್ಯ ನಾಗರಿಕರಿಗೆ ತೊಂದರೆಯಾಗದಂತೆ ಉಗ್ರರನ್ನು ದಮನ ಮಾಡಲಾಯಿತು. ಇದು ರಕ್ಷಣಾ ಕ್ಷೇತ್ರದಲ್ಲಿನ ತಂತ್ರಜ್ಞಾನ ಅಳವಡಿಕೆಯಿಂದ ಸಾಧ್ಯವಾಯಿತು ಎಂದು ತಿಳಿಸಿದರು. ವೈಮಾನಿಕ ಅಭಿವೃದ್ಧಿ ಸಂಸ್ಥೆ ಮಾಜಿ ನಿರ್ದೇಶಕ ಸಿ.ಡಿ.ಬಾಲಾಜಿ ತಮ್ಮ ಅನುಭವ ಹಂಚಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.