ADVERTISEMENT

ವಾರ್ಡ್‌ ಸಭೆ: ಅಧಿಕಾರಿಗಳಿಗೆ ಘೇರಾವ್‌

ಗುರುವಾಪುರ, ಸೋಮನಹಳ್ಳಿ ಗ್ರಾಮಗಳಲ್ಲಿ ಹೆಚ್ಚು ಫಲಾನುಭವಿಗಳ ಆಯ್ಕೆಗೆ ಪಟ್ಟು

​ಪ್ರಜಾವಾಣಿ ವಾರ್ತೆ
Published 10 ಜೂನ್ 2025, 4:15 IST
Last Updated 10 ಜೂನ್ 2025, 4:15 IST
ಹುಳಿಯಾರು ಹೋಬಳಿ ಗುರುವಾಪುರದಲ್ಲಿ ಸೋಮವಾರ ವಾರ್ಡ್‌ಸಭೆ ನಡೆಯಿತು
ಹುಳಿಯಾರು ಹೋಬಳಿ ಗುರುವಾಪುರದಲ್ಲಿ ಸೋಮವಾರ ವಾರ್ಡ್‌ಸಭೆ ನಡೆಯಿತು   

ಹುಳಿಯಾರು: ಗಾಣಧಾಳು ಗ್ರಾಮ ಪಂಚಾಯಿತಿಯ ಗುರುವಾಪುರದಲ್ಲಿ ಗಣಿ ದಂಡದ ಹಣದಿಂದ ವಸತಿ ರಹಿತರಿಗೆ ಮನೆಗಳ ಆಯ್ಕೆಗೆ ವಾರ್ಡ್‌ ಸಭೆ ಸೋಮವಾರ ನಡೆಯಿತು.

ಗಣಿಬಾಧಿತ ಪ್ರದೇಶವಾಗಿರುವ ಗುರುವಾಪುರ ಹಾಗೂ ಸೋಮನಹಳ್ಳಿ ಗ್ರಾಮಗಳಿಗೆ ಹೆಚ್ಚಿನ ಆದ್ಯತೆ ನೀಡುವಂತೆ ಒತ್ತಾಯಿಸಿದ ಗ್ರಾಮಸ್ಥರು ಅಧಿಕಾರಿಗಳು ಬೇರೆಡೆ ಸಭೆ ನಡೆಸಲು ಹೋಗುವುದನ್ನು ತಡೆದು ಸಂಜೆವರೆಗೆ ಘೇರಾವ್‌ ಹಾಕಿದರು.

ಗುರುವಾಪುರದಲ್ಲಿ ಮೇ 26ರಂದು ಗಾಣಿಬಾಧಿತ ಪ್ರದೇಶ ಮನೆಗಳ ಫಲಾನುಭವಿಗಳ ಆಯ್ಕೆಗೆ ವಾರ್ಡ್‌ ಸಭೆ ನಿಗದಿಪಡಿಸಲಾಗಿತ್ತು. ಆದರೆ ಸಭೆಯಲ್ಲಿ ಹೆಚ್ಚು ಗಲಾಟೆ ಆಗಿ ಸಭೆ ಮುಂದಕ್ಕೆ ಹೋಗಿತ್ತು. ಇದರಂತೆ ಸೋಮವಾರ ಅಧ್ಯಕ್ಷ ಬಾಪು ಗಿರೀಶ್‌, ನೋಡಲ್‌ ಅಧಿಕಾರಿ ಪಶು ವೈದ್ಯಕೀಯ ಇಲಾಖೆ ನಿರ್ದೇಶಕ ರೆ.ಮಾ.ನಾಗಭೂಷಣ್‌, ಪಿಡಿಒ ಕೋಕಿಲಾ, ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯ ಜಿ.ಎಸ್.ಶ್ರೀನಿವಾಸ್‌‌ ಸೇರಿದಂತೆ ಗ್ರಾಮಸ್ಥರ ಉಪಸ್ಥಿತಿಯಲ್ಲಿ ಸಭೆ ನಡೆಯಿತು.

ADVERTISEMENT

ಸಭೆಯಲ್ಲಿ ಕರ್ನಾಟಕ ಗಣಿ ಪರಿಸರ ಪುನಶ್ಚೇತನ ನಿಗಮ ನಿಗದಿ ಪಡಿಸಿರುವ ಐದು ಕಿ.ಮೀ ವ್ಯಾಪ್ತಿಗೆ ಒಳಗೊಂಡಂತೆ ಗಾಣಧಾಳು ಗ್ರಾಮ ಪಂಚಾಯಿತಿಗೆ 53 ಮನೆಗಳನ್ನು ನಿಗದಿಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು. ಆದರೆ ಗ್ರಾಮಸ್ಥರು ಗುರುವಾಪುರ ಹಾಗೂ ಸೋಮನಹಳ್ಳಿ ಗ್ರಾಮಗಳಲ್ಲಿ ಹೆಚ್ಚು ಫಲಾನುಭವಿಗಳನ್ನು ಆಯ್ಕೆ ಮಾಡುವಂತೆ ಪಟ್ಟು ಹಿಡಿದರು. ಗುರುವಾಪುರ ಗ್ರಾಮಕ್ಕೆ 25 ಮನೆಗಳನ್ನು ನೀಡುವಂತೆ ಒತ್ತಾಯಿಸಿದರು.

ನಿಯಮ ಮೀರಿ ಆಯ್ಕೆ ಮಾಡಲು ಸಾಧ್ಯವಿಲ್ಲ ಎಂದು ನೋಡೆಲ್‌ ಅಧಿಕಾರಿ ತಿಳಿಸಿದರು. ಸ್ಥಳಕ್ಕೆ ತಾಲ್ಲೂಕು ಪಂಚಾಯಿತಿ ವ್ಯವಸ್ಥಾಪಕರು ತೆರಳಿ ಮಾಹಿತಿ ನೀಡಿದರೂ ಒಪ್ಪದ ಗ್ರಾಮಸ್ಥರು ಅಧಿಕಾರಿಗಳಿಗೆ ಘೇರಾವ್‌ ಹಾಕಿದರು. ಸಂಜೆ ವೇಳೆಗೆ ಪರಿಸ್ಥಿತಿ ಬಿಗಾಡಾಯಿಸುವುದನ್ನು ಅರಿತು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದರು. ಅಧಿಕಾರಿಗಳಿಗೂ ಹಾಗೂ ಗ್ರಾಮಸ್ಥರ ನಡುವೆ ವಾಗ್ವಾದ ನಡೆಯಿತು.

ತುರ್ತು ಕೆಲಸಗಳಿಗೆ ತೊಂದರೆ

ನೋಡಲ್‌ ಅಧಿಕಾರಿಗಳಾಗಿ ಪ್ರತಿ ಗ್ರಾಮ ಪಂಚಾಯಿತಿಗಳಿಗೆ ತಾಲ್ಲೂಕು ಮಟ್ಟದ ಅಧಿಕಾರಿಗಳನ್ನು ನೇಮಿಸುತ್ತಾರೆ. ಅದೇ ರೀತಿ ನನ್ನನ್ನು ಗಾಣಧಾಳು ಗ್ರಾಮ ಪಂಚಾಯಿತಿಗೆ ನಿಯೋಜಿಸಿದ್ದಾರೆ. ಬೆಳಗ್ಗೆಯಿಂದ ಇಲ್ಲಿಯೇ ಕೂಡಿ ಹಾಕಿದ್ದಾರೆ. ಮುಖ್ಯವಾಗಿ ಪಶುಪಾಲನೆ ಇಲಾಖೆಯಲ್ಲಿ ಒತ್ತಡದ ಕೆಲಸಗಳಿರುತ್ತವೆ. ಅಲ್ಲದೆ ರಾಸುಗಳಿಗೆ ತುರ್ತು ಚಿಕಿತ್ಸೆ ನೀಡಬೇಕಾಗುತ್ತದೆ. ಇದರಿಂದ ತುರ್ತು ಸೇವೆ ಒದಗಿಸುವ ಇಲಾಖೆಗಳ ಅಧಿಕಾರಿಗಳನ್ನು ಇದರಿಂದ ಹೊರಗಿಡಬೇಕು. ರೆ.ಮಾ.ನಾಗಭೂಷಣ ಪಶುಪಾಲನಾ ಇಲಾಖೆ ಸಹಾಯಕ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.