ADVERTISEMENT

ಆಮ್ ಆದ್ಮಿ ಪಾರ್ಟಿ ಪದಾಧಿಕಾರಿ ಬಿಜೆಪಿ ಸೇರಿಲ್ಲ: ಎಚ್.ಎ.ಜಯರಾಮಯ್ಯ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2024, 4:51 IST
Last Updated 21 ಏಪ್ರಿಲ್ 2024, 4:51 IST

ತುಮಕೂರು: ಜಿಲ್ಲೆಯ ಆಮ್ ಆದ್ಮಿ ಪಾರ್ಟಿಯ ಯಾವೊಬ್ಬ ಪದಾಧಿಕಾರಿಯೂ ಬಿಜೆಪಿ ಸೇರ್ಪಡೆಯಾಗಿಲ್ಲ ಎಂದು ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಎ.ಜಯರಾಮಯ್ಯ ಸ್ಪಷ್ಟಪಡಿಸಿದ್ದಾರೆ.

ರಾಷ್ಟ್ರ ಮಟ್ಟದಲ್ಲಿ ಆಗಿರುವ ‘ಇಂಡಿಯಾ’ ಮಹಾ ಘಟ್ ಬಂದನ್ ಮೈತ್ರಿ ಕೂಟದಲ್ಲಿ ಆಮ್ ಆದ್ಮಿ ಪಾರ್ಟಿ ಕೂಡ ಪ್ರಮುಖ ಪಕ್ಷವಾಗಿದೆ. ಈ ಮೈತ್ರಿ ಧರ್ಮದಂತೆ ಜಿಲ್ಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ ಆಮ್ ಆದ್ಮಿ ಪಾರ್ಟಿಯ ಪದಾಧಿಕಾರಿಗಳು, ಕಾರ್ಯಕರ್ತರು ಶ್ರಮಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಸೋಲಿನ ಭೀತಿಯಲ್ಲಿರುವ ಬಿಜೆಪಿಯು ಕಳೆದ ಹತ್ತು ವರ್ಷಗಳ ಹಿಂದೆ ನಮ್ಮ ಪಕ್ಷದಲ್ಲಿದ್ದು, ನಂತರ ಹೊರಗೆ ಹೋಗಿದ್ದ ಮುನಿಯಪ್ಪ ಅವರನ್ನು ಜಿಲ್ಲಾ ಎಎಪಿ ಖಜಾಂಚಿ ಎಂದು ಬಿಂಬಿಸಿ, ಪಕ್ಷ ಸೇರ್ಪಡೆ ಆಗಿದ್ದಾರೆ ಎಂದು ಮಾಧ್ಯಮಗಳಿಗೆ ತಪ್ಪು ಮಾಹಿತಿ ನೀಡಿದೆ. ಇದು ಸತ್ಯಕ್ಕೆ ದೂರ. ಎಎಪಿ ಜಿಲ್ಲಾ ಘಟಕದಲ್ಲಿ ಈವರೆಗೆ ಖಜಾಂಚಿ ಹುದ್ದೆಯೇ ಇಲ್ಲ ಎಂದು ಹೇಳಿದ್ದಾರೆ.

ADVERTISEMENT

ಪಕ್ಷದ ನಾಯಕರಾದ ಅರವಿಂದ್ ಕೇಜ್ರಿವಾಲ್ ಅವರನ್ನು ಜೈಲಿನಲ್ಲಿಟ್ಟು, ಲೋಕಸಭಾ ಚುನಾವಣೆ ನಡೆಸುತ್ತಿರುವ ಕೇಂದ್ರ ಬಿಜೆಪಿ ಸರ್ಕಾರದ ನಡೆಯನ್ನೇ ಬಿಜೆಪಿ ಜಿಲ್ಲಾ ಘಟಕದ ಮುಖಂಡರು ಅನುಸರಿಸುತ್ತಿದ್ದಾರೆ. ನಮ್ಮ ಪಕ್ಷದ ಬಗ್ಗೆ ಅಪಪ್ರಚಾರ ಮಾಡುತ್ತಿರುವುದು ಕಿಡಿಗೇಡಿತನದ ಪರಮಾವಧಿ ಎಂದು ಖಂಡಿಸಿದ್ದಾರೆ.

ಜಿಲ್ಲಾ ವ್ಯಾಪ್ತಿಯ ಮೂರು ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬೆಂಬಲಿಸಲಾಗಿದೆ. ತುಮಕೂರಿನಲ್ಲಿ ಎಸ್.ಪಿ.ಮುದ್ದಹನುಮೇಗೌಡ, ಚಿತ್ರದುರ್ಗದಲ್ಲಿ ಬಿ.ಎನ್.ಚಂದ್ರಪ್ಪ, ಬೆಂಗಳೂರು ಗ್ರಾಮಾಂತರದಲ್ಲಿ ಡಿ.ಕೆ.ಸುರೇಶ್ ಗೆಲುವಿಗೆ ನಮ್ಮ ಪಕ್ಷದ ಮುಖಂಡರು, ಕಾರ್ಯಕರ್ತರು ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.