ADVERTISEMENT

ಪೌರ ಕಾರ್ಮಿಕರ ಆರೋಗ್ಯ ತಪಾಸಣೆ ಅಕ್ರಮದ ತನಿಖೆ: ಆರೋಪಿಯೇ ತನಿಖಾಧಿಕಾರಿ!

ಪೌರ ಕಾರ್ಮಿಕರ ಆರೋಗ್ಯ ತಪಾಸಣೆ ಅಕ್ರಮದ ತನಿಖೆ

​ಪ್ರಜಾವಾಣಿ ವಾರ್ತೆ
Published 29 ಮೇ 2023, 14:01 IST
Last Updated 29 ಮೇ 2023, 14:01 IST
ಸಾಂರ್ಭಿಕ ಚಿತ್ರ
ಸಾಂರ್ಭಿಕ ಚಿತ್ರ   

ತುಮಕೂರು: ಮಹಾನಗರ ಪಾಲಿಕೆಯ ಪೌರ ಕಾರ್ಮಿಕರ ಸಮಗ್ರ ಆರೋಗ್ಯ ತಪಾಸಣೆಯಲ್ಲಿ ನಡೆದಿರುವ ಅಕ್ರಮದ ತನಿಖೆಗೆ ಪಾಲಿಕೆ ತಂಡ ರಚಿಸಿದ್ದು, ಪ್ರಕರಣದ ಆರೋಪಿ, ಪಾಲಿಕೆಯ ಕಾರ್ಯನಿರ್ವಾಹಕ ಎಂಜಿನಿಯರ್‌ ಬಿ.ಕೆ.ಆಶಾ ಅವರನ್ನೇ ತನಿಖಾಧಿಕಾರಿಯಾಗಿ ನೇಮಿಸಲಾಗಿದೆ!

ಪಾಲಿಕೆಯಲ್ಲಿ ಕೆಲಸ ಮಾಡುತ್ತಿರುವ ಪೌರ ಕಾರ್ಮಿಕರ ಆರೋಗ್ಯ ತಪಾಸಣೆಯ ಸಮಯದಲ್ಲಿ ಪುರುಷ ಕಾರ್ಮಿಕರಿಗೂ ಸ್ತನ ಕ್ಯಾನ್ಸರ್‌ ಪರೀಕ್ಷೆ ನಡೆಸಿರುವುದಾಗಿ ಬಿಲ್‌ ಸೃಷ್ಟಿಸಿ, ಲಕ್ಷಾಂತರ ರೂಪಾಯಿ ಹಣ ಪಡೆದಿರುವುದು ಬೆಳಕಿಗೆ ಬಂದಿತ್ತು. ಈ ಸಂಬಂಧ ‘ಪ್ರಜಾವಾಣಿ’ಯಲ್ಲಿ ವಿಶೇಷ ವರದಿ ಪ್ರಕಟವಾಗಿತ್ತು. ಮಾಹಿತಿ ಹಕ್ಕು ಕಾರ್ಯಕರ್ತ ಇ್ರಮಾನ್‌ ಪಾಷಾ ಅವರು ಪಡೆದ ಮಾಹಿತಿಯಿಂದ ಅಕ್ರಮ ನಡೆದಿರುವುದು ಗೊತ್ತಾಗಿತ್ತು. ಈ ಹಿನ್ನೆಲೆಯಲ್ಲಿ ತನಿಖೆಗೆ ತಂಡ ರಚಿಸಲಾಗಿದೆ.

ಪಾಲಿಕೆಯ ಆಡಳಿತ ಶಾಖೆಯ ಉಪ ಆಯುಕ್ತ ಗಿರೀಶ್‌, ಆರೋಗ್ಯಾಧಿಕಾರಿ ಡಾ.ಮದಕರಿ ನಾಯಕ ಮತ್ತು ಆಶಾ ಅವರ ನೇತೃತ್ವದ ತಂಡ ತನಿಖೆ ನಡೆಸಲಿದೆ.

ADVERTISEMENT

ಅಕ್ರಮದ ಪ್ರಕರಣದ ಆರೋಪಿ ಆಶಾ ಅವರನ್ನು ತನಿಖಾ ತಂಡದಲ್ಲಿ ಸೇರಿಸಿದ್ದು, ತನಿಖೆ ಎಷ್ಟು ಪ್ರಾಮಾಣಿಕವಾಗಿ ನಡೆಯುತ್ತದೆ. ಇದು ‘ಕಳ್ಳರ ಕೈಗೆ ಮನೆ ಬೀಗ’ ಕೊಟ್ಟಂತಾಗಿದೆ ಎಂಬ ಆರೋಪಗಳು ಪಾಲಿಕೆ ಅಂಗಳದಲ್ಲಿ ಕೇಳಿ ಬರುತ್ತಿವೆ. ತನಿಖಾ ತಂಡದಲ್ಲಿ ಆರೋಪಿ ಅಧಿಕಾರಿಯೊಬ್ಬರು ಇರುವುದಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

‘ತನಿಖೆ ನಡೆಸಿ, ವರದಿ ನೀಡಲು ಒಂದು ವಾರ ಗಡುವು ನೀಡಲಾಗಿದೆ. ಆರೋಗ್ಯ ಶಾಖೆಯಿಂದ ಆಶಾ ಅವರನ್ನು ತನಿಖಾ ತಂಡಕ್ಕೆ ಸೇರಿಸಲಾಗಿದೆ. ತನಿಖೆಯ ನಂತರ ಸತ್ಯಾಂಶ ತಿಳಿಯಲಿದೆ’ ಎಂದು ಪಾಲಿಕೆ ಆಯುಕ್ತ ಎಚ್‌.ವಿ.ದರ್ಶನ್‌ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.