ADVERTISEMENT

ವೃದ್ಧರಿಗೆ ಗೌರವ ನೀಡಲು ಸಲಹೆ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2021, 4:58 IST
Last Updated 18 ಅಕ್ಟೋಬರ್ 2021, 4:58 IST
ಮಧುಗಿರಿ ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾ ಕಾನೂನು ಸೇವಾ ಸಮಿತಿಯಿಂದ ಹಿರಿಯ ನಾಗರಿಕರ ಮತ್ತು ಅಂಗವಿಕಲರ ಹಕ್ಕುಗಳ ಬಗ್ಗೆ ನಡೆದ ಕಾರ್ಯಕ್ರಮವನ್ನು ನ್ಯಾಯಾಧೀಶರಾದ ಎಚ್.ಎ. ಶಿಲ್ಪಾ ಉದ್ಘಾಟಿಸಿದರು
ಮಧುಗಿರಿ ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾ ಕಾನೂನು ಸೇವಾ ಸಮಿತಿಯಿಂದ ಹಿರಿಯ ನಾಗರಿಕರ ಮತ್ತು ಅಂಗವಿಕಲರ ಹಕ್ಕುಗಳ ಬಗ್ಗೆ ನಡೆದ ಕಾರ್ಯಕ್ರಮವನ್ನು ನ್ಯಾಯಾಧೀಶರಾದ ಎಚ್.ಎ. ಶಿಲ್ಪಾ ಉದ್ಘಾಟಿಸಿದರು   

ಮಧುಗಿರಿ: ‘ವೃದ್ಧರು ಸಮಾಜದ ಆಸ್ತಿಯಾಗಿದ್ದು, ಅವರಿಗೆ ಸರ್ಕಾರದಿಂದ ಸೌಲಭ್ಯ ಒದಗಿಸುವ ಕಾರ್ಯವನ್ನು ಎಲ್ಲರೂ ಮಾಡಬೇಕು’ ಎಂದು ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶೆ ಎಚ್.ಎ. ಶಿಲ್ಪಾ ತಿಳಿಸಿದರು.

ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾ ಕಾನೂನು ಸೇವಾ ಸಮಿತಿ, ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಸಿಡಿಪಿಒ ಇಲಾಖೆ, ಕಂದಾಯ ಇಲಾಖೆಯಿಂದ ಏರ್ಪಡಿಸಿದ್ದ ಹಿರಿಯ ನಾಗರಿಕರ ಮತ್ತು ಅಂಗವಿಕಲರ ಹಕ್ಕುಗಳ ಬಗೆಗಿನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ವೃದ್ಧರನ್ನು ಪ್ರತಿಯೊಬ್ಬರೂ ಗೌರವದಿಂದ ಕಾಣಬೇಕು.‌ ಈ ಹಿಂದೆ ನ್ಯಾಯಾಲಯಗಳು ಮತ್ತು ನ್ಯಾಯಾಧೀಶರು ಕಡಿಮೆಯಿದ್ದ ಕಾಲದಲ್ಲಿ ಸೋತವನು ಸತ್ತ- ಗೆದ್ದವನು ಸೋತ ಎಂಬ ಮಾತುಗಳಿದ್ದವು. ಈಗ ಬದಲಾವಣೆಯಾಗಿದ್ದು ಪ್ರಕರಣಗಳು ತ್ವರಿತವಾಗಿ ಇತ್ಯರ್ಥವಾಗುತ್ತಿವೆ ಎಂದರು.

ADVERTISEMENT

ಹಿರಿಯ ನಾಗರಿಕರು ಪ್ರಕರಣ ದಾಖಲಿಸಿ ಉಚಿತ ಕಾನೂನು ಸೇವಾ ಸಮಿತಿಗೆ ಪತ್ರದ ಮುಖೇನ ಜೀವನಾಂಶ ಪಡೆಯಬಹುದು. ಅಂಗವಿಕಲರು ಮತ್ತು ಬುದ್ಧಿಮಾಂದ್ಯರನ್ನು ವಿಕಲಚೇತನ ಮತ್ತು ಮಾನಸಿಕ ವಿಕಲಚೇತನರೆಂದು ಸಮಾಜದಲ್ಲಿ ಗೌರವ ನೀಡಬೇಕು. ಬಸ್ಸುಗಳಲ್ಲಿ ಅವರಿಗೆ ಮೀಸಲಿಟ್ಟಿರುವ ಆಸನಗಳಲ್ಲಿ ಕುಳಿತಿದ್ದರು ಎದ್ದು ಅವರಿಗೆ ಸ್ಥಳಾವಕಾಶ ಮಾಡಿಕೊಡಬೇಕು. ನ್ಯಾಯಾಲಯಗಳಲ್ಲಿ ಅರುವತ್ತೈದು ವರ್ಷ ತುಂಬಿದ ಹಿರಿಯ ನಾಗರಿಕರ ಪ್ರಕರಣಗಳನ್ನು ವಿಶೇಷವಾಗಿ ಪರಿಗಣಿಸಿ ಬೇಗ ಇತ್ಯರ್ಥ ಮಾಡಲಾಗುತ್ತಿದೆ ಎಂದು ತಿಳಿಸಿದರು.

ವಿಕಲಚೇತನರು ಕ್ರೀಡೆ, ಸಂಗೀತದಲ್ಲಿ ಮುಂಚೂಣಿಯಲ್ಲಿರುವುದು ಗಮನಾರ್ಹ. ಕಡ್ಡಾಯ ಶಿಕ್ಷಣ- ಬಾಲ್ಯವಿವಾಹ ನಿಷೇಧ ಕಾಯ್ದೆಯಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ತಂದೆ, ತಾಯಿಯ ಜೊತೆಗೆ ಸಂಬಂಧಿಕರು ಮತ್ತು ಪುರೋಹಿತರನ್ನು ಸಹ ಜೈಲಿಗೆ ಕಳುಹಿಸಬಹುದು. ಇಂತಹ ಪ್ರಕರಣ ಕಂಡುಬಂದಲ್ಲಿ ತಕ್ಷಣವೇ ಸಿಡಿಪಿಒ ಮತ್ತು ಪೊಲೀಸರಿಗೆ ತಿಳಿಸಬೇಕು ಎಂದರು.

ನ್ಯಾಯಾಧೀಶೆ ಎಂ. ಕಾವ್ಯಶ್ರೀ, ತಾಲ್ಲೂಕು ಪಂಚಾಯಿತಿ ಇಒ ಡಿ. ದೊಡ್ಡಸಿದ್ದಯ್ಯ, ವಕೀಲರ ಸಂಘದ ಅಧ್ಯಕ್ಷ ಪಿ.ಸಿ. ಕೃಷ್ಣಾರೆಡ್ಡಿ, ಉಪಾಧ್ಯಕ್ಷ ಮಹೇಶ್, ತಾಲ್ಲೂಕು ವೈದ್ಯಾಧಿಕಾರಿ ಡಾ.ರಮೇಶ್ ಬಾಬು, ಗ್ರೇಡ್-2 ತಹಶೀಲ್ದಾರ್ ಕಮಲಮ್ಮ, ಆರ್‌ಐ ಜಯರಾಮಯ್ಯ, ಸಿಡಿಪಿಒ ಎ. ಅನಿತಾ, ವಕೀಲ ಆನಂದ್, ಸಿಡಿಪಿಒ ಇಲಾಖೆಯ ಮೇಲ್ವಿಚಾರಕಿ ನೇತ್ರಾವತಿ
ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.