ತುಮಕೂರು: ಹೊಸ ಶಿಕ್ಷಣ ನೀತಿ (ಎನ್‌ಇಪಿ) ಜಾರಿಯಾಗಿ ಐದು ವರ್ಷ ಕಳೆದಿದ್ದು, ದೇಶದಲ್ಲಿ ಮತ್ತಷ್ಟು ಜನರಿಗೆ ಉನ್ನತ ಶಿಕ್ಷಣ ಸಿಗಬೇಕಾದರೆ ಮುಂದಿನ ಹತ್ತು ವರ್ಷಗಳಲ್ಲಿ 500 ವಿಶ್ವವಿದ್ಯಾಲಯ ಆರಂಭಿಸುವ ಅಗತ್ಯವಿದೆ ಎಂದು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್ (ಎಐಸಿಟಿಇ) ಅಧ್ಯಕ್ಷ ಪ್ರೊ.ಟಿ.ಜಿ.ಸೀತಾರಾಮ್ ಪ್ರತಿಪಾದಿಸಿದರು.
ತುಮಕೂರು ವಿಶ್ವವಿದ್ಯಾಲಯದಲ್ಲಿ ಮಂಗಳವಾರ ಹದಿನೆಂಟನೇ ಘಟಿಕೋತ್ಸವ ಭಾಷಣ ಮಾಡಿದರು.
ಕಳೆದ ಎರಡು ದಶಕಗಳಲ್ಲಿ ಉನ್ನತ ಶಿಕ್ಷಣ ಪಡೆಯುವವರ ಪ್ರಮಾಣ ಶೇ 18ರಷ್ಟು ದಾಟಿರಲಿಲ್ಲ. ಎನ್‌ಇಪಿ ಜಾರಿಯ ನಂತರ ಹಲವರು ಉನ್ನತ ಶಿಕ್ಷಣ ಪಡೆಯುವಂತಾಗಿದೆ. ಹಿಂದೆ ಕಲಾ ವಿಭಾಗದವರು ವಿಜ್ಞಾನ ಅಭ್ಯಾಸ ಮಾಡಲು ಅವಕಾಶ ಇರಲಿಲ್ಲ. ಹೊಸ ಶಿಕ್ಷಣ ನೀತಿಯಲ್ಲಿ ಕಲಾ ವಿಭಾಗದವರು ವಿಜ್ಞಾನವನ್ನು, ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಕಲಾ ವಿಭಾಗದ ಪಠ್ಯವನ್ನು ಅಧ್ಯಯನ ಮಾಡಬಹುದಾಗಿದೆ. ಇದು ಶಿಕ್ಷಣ ಕ್ಷೇತ್ರದ ಬಹುದೊಡ್ಡ ಬದಲಾವಣೆ ಎಂದು ಬಣ್ಣಿಸಿದರು.
ಜಗತ್ತಿನಲ್ಲಿ ಭಾರತ ನಾಲ್ಕನೇ ಆರ್ಥಿಕ ಶಕ್ತಿಯಾಗಿ ಬೆಳೆದು ನಿಂತಿದೆ. ಉನ್ನತ ಶಿಕ್ಷಣ ಸಶಕ್ತವಾಗಿ ಇರುವುದರಿಂದಲೇ ದೇಶದ ಆರ್ಥಿಕತೆ ವೃದ್ಧಿಯಾಗಲು ಸಾಧ್ಯವಾಗಿದೆ. 2047ರ ವೇಳೆಗೆ ವಿಕಸಿತ ಭಾರತದ ಗುರಿ ತಲುಪಲು ಉನ್ನತ ಶಿಕ್ಷಣದ ಮೂಲಕ ಸಾಧ್ಯ ಎಂಬ ವಿಚಾರವನ್ನು ತಿಳಿಯಪಡಿಸಬೇಕಿದೆ ಎಂದರು.
ವಿಜ್ಞಾನ, ತಂತ್ರಜ್ಞಾನ ಕ್ಷೇತ್ರದಲ್ಲಿನ ಪ್ರಗತಿಯನ್ನು ಮೆಲುಕು ಹಾಕುತ್ತಲೇ ಬಾಹ್ಯಾಕಾಶ ಕ್ಷೇತ್ರದಲ್ಲಿನ ಸಾಧನೆ, ರಕ್ಷಣಾ ತಂತ್ರಜ್ಞಾನ, ವೈದ್ಯಕೀಯ ಕ್ಷೇತ್ರ, ಡಿಜಿಟಲ್ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತದ ಮುನ್ನಡೆಯನ್ನು ಸ್ಮರಿಸಿದರು. ಇತ್ತೀಚೆಗೆ ಪಾಕಿಸ್ತಾನದ ಮೇಲೆ ಭಾರತ ನಡೆಸಿದ ದಾಳಿಯ ಯಶಸ್ಸಿಗೂ ತಂತ್ರಜ್ಞಾನದ ಬಳಕೆ ಕಾರಣ ಎಂದು ನೆನಪು ಮಾಡಿಕೊಂಡರು.
ಅಧ್ಯಕ್ಷತೆ ವಹಿಸಿದ್ದ ರಾಜ್ಯಪಾಲ ಥಾವರಚಂದ್ ಗೆಹಲೋತ್, ‘ಶಿಕ್ಷಣದ ಮೂಲಕ ಸುಶಿಕ್ಷಿತ ರಾಷ್ಟ್ರ ನಿರ್ಮಾಣ ಮಾಡಬೇಕಿದೆ. ಎಲ್ಲರಿಗೂ ಶಿಕ್ಷಣ ಸಿಗುವಂತೆ ಮಾಡುವ ಮೂಲಕ ವಿಕಸಿತ ಭಾರತ ನಿರ್ಮಾಣಕ್ಕೆ ಮುಂದಾಗಬೇಕು’ ಎಂದು ಹೇಳಿದರು.
ವಿ.ವಿ ಪದವಿ ಕಾಲೇಜಿನಲ್ಲಿ ಮಧ್ಯಾಹ್ನದ ಬಿಸಿ ಊಟ ನೀಡುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಕೆಲಸ ಇತರೆ ವಿಶ್ವವಿದ್ಯಾಲಯಗಳಿಗೆ ಮಾದರಿ, ಪ್ರೇರಣೆಯಾಗಿದೆ ಎಂದು ತಿಳಿಸಿದರು.
ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ವಾರ್ಷಿಕ ವರದಿ ಮಂಡಿಸಿದರು. ಕುಲಸಚಿವ (ಆಡಳಿತ– ಪ್ರಭಾರ) ಪ್ರೊ.ಎಂ.ಕೊಟ್ರೇಶ್, ಕುಲಸಚಿವ (ಪರೀಕ್ಷಾಂಗ) ಪ್ರೊ.ಎನ್.ಸತೀಶ್‌ಗೌಡ ಉಪಸ್ಥಿತರಿದ್ದರು.
ಎಐ ಮೂಲಕ ಕ್ರಾಂತಿ
ದೇಶ ನಾಲ್ಕನೇ ಕೈಗಾರಿಕಾ ಕ್ರಾಂತಿಯ ಹೊಸ್ತಿಲಲ್ಲಿ ನಿಂತಿದ್ದು ಕೃತಕ ಬುದ್ಧಿಮತ್ತೆ (ಎಐ) ಮೆಷಿನ್ ಲರ್ನಿಂಗ್ ಕ್ವಾಂಟಂ ಕಂಪ್ಯೂಟಿಂಗ್ ಹಾಗೂ ಸೈಬರ್ ಸುರಕ್ಷತೆಯಂತಹ ತಂತ್ರಜ್ಞಾನಗಳು ಜಗತ್ತಿನ ಭವಿಷ್ಯ ರೂಪಿಸಲಿವೆ ಎಂದು ಎಐಸಿಟಿಇ ಅಧ್ಯಕ್ಷ ಪ್ರೊ.ಟಿ.ಜಿ.ಸೀತಾರಾಮ್ ತಿಳಿಸಿದರು. ಕೃತಕ ಬುದ್ಧಿಮತ್ತೆ ಶಕ್ತಿಶಾಲಿಯಾಗಿದ್ದರೂ ಸಹಾನುಭೂತಿ ಮೌಲ್ಯಗಳು ನೈತಿಕತೆ ವಿವೇಚನೆ ಇರುವುದಿಲ್ಲ. ಇಂತಹ ಮಾನವೀಯ ಮೌಲ್ಯಗಳನ್ನು ಮನುಷ್ಯರಲ್ಲಿ ಮಾತ್ರ ಕಾಣಲು ಸಾಧ್ಯ. ಅಂತಹ ಗುಣಗಳನ್ನು ಹೊಂದುವುದು ಅಗತ್ಯವಿದೆ ಎಂದು ಕಿವಿಮಾತು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.