ADVERTISEMENT

ಮುಷ್ಕರ ಹತ್ತಿಕ್ಕಲು ರಾಜ್ಯ ಸರ್ಕಾರ ಯತ್ನ: ರಾಜಕೀಯ ಮುಖಂಡರಿಂದ ವಾಗ್ದಾಳಿ

ಬಿಎಸ್‌ಎನ್‌ಎಲ್ ಕಚೇರಿ ಮುಂದೆ ಬಹಿರಂಗ ಸಭೆ

​ಪ್ರಜಾವಾಣಿ ವಾರ್ತೆ
Published 8 ಜನವರಿ 2020, 12:09 IST
Last Updated 8 ಜನವರಿ 2020, 12:09 IST
ಟೌನ್‌ಹಾಲ್‌ನಿಂದ ಬಿಎಸ್‌ಎನ್‌ಎಲ್ ಕಚೇರಿಯತ್ತ ಹೊರಟ ವಿವಿಧ ಕಾರ್ಮಿಕ ಸಂಘಟನೆಗಳ ಸದಸ್ಯರು
ಟೌನ್‌ಹಾಲ್‌ನಿಂದ ಬಿಎಸ್‌ಎನ್‌ಎಲ್ ಕಚೇರಿಯತ್ತ ಹೊರಟ ವಿವಿಧ ಕಾರ್ಮಿಕ ಸಂಘಟನೆಗಳ ಸದಸ್ಯರು   

ತುಮಕೂರು: ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿ ಮತ್ತು ನಿರ್ಧಾರಗಳ ವಿರುದ್ಧ ಕಾರ್ಮಿಕ ಸಂಘಟನೆಗಳು ದೇಶವ್ಯಾಪಿ ಕರೆ ನೀಡಿದ್ದ ಮುಷ್ಕರದ ಹಿನ್ನೆಲೆಯಲ್ಲಿ ನಗರದಲ್ಲಿಯೂ ಕಾರ್ಮಿಕರು ಜಾಥಾ ನಡೆಸಿದರು. ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಹಕ್ಕೊತ್ತಾಯ ಮಂಡಿಸಿದರು.

ಬೆಳಿಗ್ಗೆ 9.30ರಿಂದಲೇ ಕಾರ್ಮಿಕ ಸಂಘಟನೆಗಳ ಮುಖಂಡರು ಟೌನ್‌ಹಾಲ್ ಬಳಿ ಸೇರಿದರು. ಹಂತ ಹಂತವಾಗಿ ಕಾರ್ಮಿಕರು ಜಮಾವಣೆಗೊಂಡರು. ಬೇರೆ ಬೇರೆ ಕಡೆಗಳಿಂದ ಬೈಕ್ ರ‍್ಯಾಲಿಯಲ್ಲಿ ಸಂಘಟನೆಗಳ ಕಾರ್ಯಕರ್ತರು ಬಂದರು. ಪೊಲೀಸರು ಟೌನ್‌ಹಾಲ್ ಬಳಿ ಬಂದೋಬಸ್ತ್ ಕೈಗೊಂಡಿದ್ದರು.

ಜಿಲ್ಲೆಯಲ್ಲಿ ಸಮಗ್ರವಾಗಿ ನೀರಾವರಿ ಯೋಜನೆ ಜಾರಿಗೊಳ್ಳಬೇಕು, ಕಾರ್ಮಿಕರ ಹಕ್ಕುಗಳನ್ನು ಸಂರಕ್ಷಿಸಬೇಕು, ಕೇಂದ್ರ ಸರ್ಕಾರವು ಕಾರ್ಮಿಕರ ಕಾನೂನುಗಳಲ್ಲಿ ಬದಲಾವಣೆ ತರಬಾರದು, ಕನಿಷ್ಠ ಕೂಲಿಯನ್ನು 21,000ಕ್ಕೆ ಹೆಚ್ಚಿಸಬೇಕು, ಅಗತ್ಯ ವಸ್ತುಗಳ ಬೆಲೆ ಹೆಚ್ಚಳ ನಿಯಂತ್ರಿಸಬೇಕು ಹೀಗೆ ಹಲವು ಬೇಡಿಕೆಗಳನ್ನು ಈಡೇರಿಸಬೇಕು ಎಂದು ಘೋಷಣೆಗಳನ್ನು ಕೂಗಿದರು.

ADVERTISEMENT

ನಂತರ ಅಲ್ಲಿಂದ ಬಿಎಸ್‌ಎನ್‌ಎಲ್ ಕಚೇರಿಯನ್ನು ಪ್ರತಿಭಟನಕಾರರು ತಲುಪಿದರು. ಜಿಲ್ಲೆಯಲ್ಲಿ ಮುಷ್ಕರವನ್ನು ಹತ್ತಿಕ್ಕಲು ರಾಜ್ಯ ಸರ್ಕಾರವು ಪೊಲೀಸ್ ಇಲಾಖೆಯ ಮೂಲಕ ವಿವಿಧ ಸಂಘಟನೆಗಳ ನಾಯಕರನ್ನು ಬೆದರಿಸುತ್ತಿದೆ. ಮುಚ್ಚಳಿಕೆ ಪತ್ರ ಬರೆಸಿಕೊಳ್ಳುತ್ತಿದೆ ಎಂದು ಇಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

ಎಐಟಿಯುಸಿ ಮುಖಂಡ ಎನ್.ಶಿವಣ್ಣ, ರಾಜ್ಯ ಸರ್ಕಾರ ಹೋರಾಟ ಹತ್ತಿಕ್ಕಲು ಪೊಲೀಸರ ಮೂಲಕ ಪ್ರಯತ್ನಿಸುತ್ತಿದೆ. ಇದು ಖಂಡನೀಯ. ಸರ್ಕಾರ ಪ್ರತಿಭಟನೆಗಳನ್ನು ಹತ್ತಿಕ್ಕುವ ಬದಲು ಸಮಸ್ಯೆಗಳನ್ನು ಪರಿಹರಿಸಲು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಎಐಯುಟಿಯುಸಿ ನಾಯಕಿ ಮಂಜುಳಾ, ಕೊಳೆಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ ಅಧ್ಯಕ್ಷ ಎ.ನರಸಿಂಹಮೂರ್ತಿ, ಪರಿಸರವಾದಿ ಸಿ.ಯತಿರಾಜು ಮಾತನಾಡಿ, ‘ಕಾರ್ಮಿಕರ ಸಮಸ್ಯೆಗಳ ಇತ್ಯರ್ಥಕ್ಕೆ ಸರ್ಕಾರ ಮುಂದಾಗಬೇಕು. ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ತಂದಿರುವ ಪೌರತ್ವ (ತಿದ್ದುಪಡಿ) ಕಾಯ್ದೆ ದೇಶವನ್ನು ವಿಭಜಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಕಾರ್ಮಿಕರಲ್ಲಿ ರಾಜಕೀಯ ಪ್ರಜ್ಞೆ ಬಾರದಿದ್ದರೆ ಹೋರಾಟ ಸಾರ್ಥಕತೆ ಪಡೆಯುವುದಿಲ್ಲ’ ಎಂದರು.

ಜಾತ್ಯತೀತ ಜನತಾದಳದ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಸಿ.ಆಂಜಿನಪ್ಪ, ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಎನ್.ಕೆ.ಸುಬ್ರಹ್ಮಣ್ಯ, ಸಿಪಿಐ ಮುಖಂಡ ಕಂಬೇಗೌಡ, ತಾಜುದ್ದೀನ್ ಷರೀಫ್, ಎಐಟಿಯುಸಿ ಗಿರೀಶ್, ಎಸ್‍ಎಫ್‍ಐ ಈ. ಶಿವಣ್ಣ, ಎಐಡಿಎಸ್‍ಒ ಅಶ್ವಿನಿ ಮಾತನಾಡಿದರು.

ಸಭೆಯಲ್ಲಿ ಸಿಐಟಿಯು ತಾಲ್ಲೂಕು ಘಟಕದ ಅಧ್ಯಕ್ಷ ಷಣ್ಮುಖಪ್ಪ, ಕಾಯದರ್ಶಿ ರಂಗಧಾಮಯ್ಯ, ಖಜಾಂಚಿ ಪುಟ್ಟೇಗೌಡ, ಅಂಗನವಾಡಿ ನೌಕರರ ಸಂಘಟನೆ ಗಂಗಾ, ಪ್ರೇಮಾ, ಆಟೊ ಚಾಲಕರ ಸಂಘದ ಇಂತು, ಕಟ್ಟಡ ಕಾರ್ಮಿಕರ ಸಂಘದ ಗೋವಿಂದರಾಜು, ಎಐಟಿಯುಸಿಯ ಆಶ್ವತ್ಥನಾರಾಯಣ್, ಡಿವೈಎಫ್‍ಐ ದರ್ಶನ್, ಜೀವವಿಮಾ ನೌಕರರ ಸಂಘಟನೆಯ ನಂಜುಂಡಸ್ವಾಮಿ, ಕಲ್ಯಾಣಿ, ಸಿಪಿಎಂ ನಗರ ಕಾರ್ಯದರ್ಶಿ ಎಸ್.ರಾಘವೇಂದ್ರ, ಮುಖಂಡರಾದ ಕಾಂತರಾಜು, ಶಂಕರಪ್ಪ, ವೆಂಕಟೇಶ ಇದ್ದರು.

ಉದ್ಯೋಗ ಕಳೆದ ಸರ್ಕಾರ

ಸಿಐಟಿಯು ಜಿಲ್ಲಾ ಘಟಕದ ಅಧ್ಯಕ್ಷ ಸೈಯದ್ ಮುಜೀಬ್ ಮಾತನಾಡಿ, ಆರ್ಥಿಕ ಬೆಳವಣಿಗೆ ಕುಂಠಿತಗೊಳ್ಳಲು ಸರ್ಕಾರದ ನೀತಿಗಳೇ ಕಾರಣ. ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಸುವ ಬದಲು ಪ್ರತಿದಿನ ಸಾವಿರಾರು ಉದ್ಯೋಗಗಳನ್ನು ಕಳೆಯುವ ನೀತಿಯನ್ನು ಸರ್ಕಾರ ಜಾರಿಗೊಳಿಸಿದೆ ಎಂದು ಟೀಕಿಸಿದರು.

ದೇಶದಲ್ಲಿ ಕಾರ್ಮಿಕ ಸಂಘಟನೆಗಳಿಂದ ಶೇ 6ರಷ್ಟು ಮಾತ್ರ ಕಾರ್ಖಾನೆಗಳು ಬಾಗಿಲು ಮುಚ್ಚಿವೆ. ಉಳಿದ 94ರಷ್ಟು ಕಾರ್ಖಾನೆಗಳು ಮಾಲೀಕರ ಆಂತರಿಕ ಜಗಳ, ಸರ್ಕಾರದ ನೀತಿಗಳು ಮತ್ತು ಸಬ್ಸಿಡಿ ಪಡೆಯುವ ಬಂಡವಾಳಶಾಹಿಗಳ ಕೂಟದಿಂದ ಬಂದ್ ಆಗಿವೆ ಎಂದು ಆಪಾದಿಸಿದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.