ಪಾವಗಡ: ತಾಲ್ಲೂಕಿನ ಕೋಟಗುಡ್ಡ ಶಾಖೆ ವ್ಯಾಪ್ತಿಯಲ್ಲಿ ವಿದ್ಯುತ್ ಪರಿವರ್ತಕಗಳ ಕಳವು ವಿಚಾರವಾಗಿ ನಡೆಯುತ್ತಿರುವ ತನಿಖೆ ಆಮೆಗತಿಯಲ್ಲಿ ಸಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಇಲ್ಲಿನ ಸುಮಾರು 11 ಗ್ರಾಮಗಳಲ್ಲಿ ಕುಡಿಯುವ ನೀರಿನ ಪಂಪ್‌ಸೆಟ್‌ಗೆ ಅಳವಡಿಸಿದ್ದ 16 ಪರಿವರ್ತಕಗಳು ಕಳುವಾಗಿರುವ ಬಗ್ಗೆ ದೂರು ನೀಡಲಾಗಿತ್ತು. ಈ ಬಗ್ಗೆ ಉನ್ನತ ಅಧಿಕಾರಿಗಳು ನಿಯೋಜಿಸಿರುವ ತಂಡ ತನಿಖೆಯನ್ನು ತ್ವರಿತವಾಗಿ ಮುಗಿಸುವ ಅಗತ್ಯವಿದೆ. ಇಲ್ಲದಿದ್ದಲ್ಲಿ ಸಾಕ್ಷ್ಯ ನಾಶಪಡಿಸಿ ತನಿಖೆ ದಿಕ್ಕು ತಪ್ಪಿಸುವ ಸಾಧ್ಯತೆ ಇದೆ ಎನ್ನುವುದು ಸಾರ್ವಜನಿಕರ ಆರೋಪ.
ಪರಿವರ್ತಕಗಳನ್ನು ಕಳವು ಮಾಡಿದ್ದ ಕೆಲ ಸ್ಥಳಗಳಲ್ಲಿ ಕೆಲಸ ಮಾಡದ, ಹಳೆಯ ಪರಿವರ್ತಕ ಅಳವಡಿಸಿ ದಿಕ್ಕು ತಪ್ಪಿಸುವ ಹುನ್ನಾರ ನಡೆಯುತ್ತಿದೆ ಎಂಬ ದೂರುಗಳು ಕೇಳಿಬಂದಿವೆ.
ಈ ಬಗ್ಗೆ ದೂರುದಾರ ಎನ್. ರಾಮಾಂಜಿನಪ್ಪ ಪ್ರತಿಕ್ರಿಯಿಸಿ, ತನಿಖೆ ಹಂತದಲ್ಲಿದ್ದಾಗ ಕಳವಾಗಿರುವ ಸ್ಥಳಗಳಲ್ಲಿ ವಿದ್ಯುತ್ ಪರಿವರ್ತಕ ಅಳವಡಿಸಲು ಎಲ್‌ಸಿ (ಲೈನ್ ಕ್ಲಿಯರೆನ್ಸ್) ನೀಡಿರುವುದು ಕಾನೂನು ಬಾಹಿರ. ತಾಲ್ಲೂಕು, ಶಾಖಾ ಹಂತದಲ್ಲಿರುವ ಅಧಿಕಾರಿಗಳು ಪ್ರಕರಣದ ದಿಕ್ಕು ತಪ್ಪಿಸಲು ತಪ್ಪಿತಸ್ಥರ ಜೊತೆ ಶಾಮೀಲಾಗಿರುವ ಶಂಕೆ ಇದೆ ಎಂದು ಆರೋಪಿಸಿದರು.
16 ಪರಿವರ್ತಕಗಳ ಕಳವು ಇಲಾಖೆಯಲ್ಲಿ ನಡೆಯುತ್ತಿರುವ ಅವ್ಯವಹಾರಗಳಿಗೆ ನಿದರ್ಶನವಷ್ಟೇ. ತಾಲ್ಲೂಕಿನಾದ್ಯಂತ ಇಂತಹ ಸಾಕಷ್ಟು ಪ್ರಕರಣಗಳು ನಡೆದಿವೆ. ಗಂಗಾ ಕಲ್ಯಾಣ, ಅಕ್ರಮ ಸಕ್ರಮ, ಸಣ್ಣ ನೀರಾವರಿ ಇಲಾಖೆ ಯೋಜನೆ, ಬಡಾವಣೆಗಳಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸುವುದೂ ಸೇರಿದಂತೆ ವಿವಿಧೆಡೆ ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆಯುತ್ತಿದೆ ಎಂಬ ದೂರುಗಳು ಕೇಳಿಬರುತ್ತಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.