ADVERTISEMENT

ಹುಳಿಯಾರು: ಅರಣ್ಯ ಒತ್ತುವರಿ ತೆರವು ಅಂತ್ಯವಲ್ಲ, ಆರಂಭ

ಅಂಬಾರಪುರ: 300 ಎಕರೆ ಪ್ರದೇಶದಲ್ಲಿ 80 ಸಾವಿರ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 10 ಜುಲೈ 2025, 18:10 IST
Last Updated 10 ಜುಲೈ 2025, 18:10 IST
ಹುಳಿಯಾರು ಹೋಬಳಿ ಅಂಬಾರಪುರ ಬಳಿಯ ಅರಣ್ಯ ಪ್ರದೇಶದಲ್ಲಿ ಗುರುವಾರ ಉಪ ಲೋಕಾಯುಕ್ತ ಬಿ.ವೀರಪ್ಪ ವನಮಹೋತ್ಸವ ಚಾಲನೆ ನೀಡಿದರು 
ಹುಳಿಯಾರು ಹೋಬಳಿ ಅಂಬಾರಪುರ ಬಳಿಯ ಅರಣ್ಯ ಪ್ರದೇಶದಲ್ಲಿ ಗುರುವಾರ ಉಪ ಲೋಕಾಯುಕ್ತ ಬಿ.ವೀರಪ್ಪ ವನಮಹೋತ್ಸವ ಚಾಲನೆ ನೀಡಿದರು    

ಹುಳಿಯಾರು: ಬುಕ್ಕಾಪಟ್ಟಣ ಅರಣ್ಯ ವ್ಯಾಪ್ತಿಯ ಅಂಬಾರಪುರ ಬಳಿ 300 ಎಕರೆ ಅರಣ್ಯ ಒತ್ತುವರಿ ತೆರವು ಮಾಡಿಸಿ 80 ಸಾವಿರ ಸಸಿ ನೆಡಲು ಉದ್ದೇಶಿಸಿರುವುದು ಒತ್ತುವರಿ ತೆರವು ಅಂತ್ಯವಲ್ಲ, ಆರಂಭ ಎಂಬುದನ್ನು ಒತ್ತುವರಿದಾರರಿಗೆ ಮನವರಿಕೆ ಮಾಡುವ ಸಂದೇಶವಾಗಿದೆ ಎಂದು ಎಂದು ಉಪಲೋಕಾಯುಕ್ತ ಬಿ.ವೀರಪ್ಪ ತಿಳಿಸಿದರು.

ಅಂಬಾರಪುರದಲ್ಲಿ ಅರಣ್ಯ ಇಲಾಖೆಯಿಂದ ಗುರುವಾರ ನಡೆದ ವನಮಹೋತ್ಸವದಲ್ಲಿ ಮಾತನಾಡಿದರು.

300 ಎಕರೆ ಒತ್ತುವರಿ ತೆರವು ಮಾಡಿಸಿ ಸಸಿ ನೆಡುತ್ತಿರುವುದು 10 ವರ್ಷಗಳ ಹೋರಾಟದ ಫಲ. ಇಡೀ ರಾಜ್ಯದಲ್ಲಿ ಮೊದಲು. ಅರಣ್ಯ ಭೂಮಿಯನ್ನು ಉಳಿಸದೆ ಹೋದರೆ ನಮಗೆ ಉಳಿಗಾಲವಿಲ್ಲ. ಮುಂದಿನ ಪೀಳಿಗೆ ಉಳಿಯಲು ಇಂತಹ ಕಠಿಣ ನಿರ್ಧಾರ ತೆಗೆದುಕೊಳ್ಳುವುದು ಅನಿವಾರ್ಯ ಎಂದರು.

ADVERTISEMENT

ಯಾವುದೇ ಅಧಿಕಾರಿಗಳು ಯಾವುದೋ ಮುಲಾಜಿಗೆ ಒಳಗಾಗಿ ಅರಣ್ಯ ಭೂಮಿ ಒತ್ತುವರಿಗೆ ಕಾರಣರಾಗಿದ್ದಾರೆ. ಅರಣ್ಯ, ಕಂದಾಯ ಹಾಗೂ ಪೊಲೀಸ್‌ ಇಲಾಖೆ ಅಧಿಕಾರಿಗಳು ಅರಣ್ಯ ಉಳಿಸಲು ಯೋಧರಂತೆ ಕೆಲಸ ಮಾಡಬೇಕು. ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಿಸಲು ಅವರಿಗೆ ಸಂಸ್ಕಾರ ನೀಡಬೇಕು ಎಂದರು.

ಕಾರ್ಯಕ್ರಮದಲ್ಲಿ ಡಿಆರ್‌ಇ ಅರವಿಂದ್‌, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಏಡುಕುಂಡಲ, ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ (ಪ್ರಾದೇಶಿಕ ಅರಣ್ಯ) ಶಶಿಧರ್‌, ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ (ಸಾಮಾಜಿಕ ಅರಣ್ಯ) ದೇವರಾಜು, ಜಿಲ್ಲಾ ಲೋಕಾಯುಕ್ತ ಎಸ್‌ಪಿ ಸಂತೋಷ್‌ಕುಮಾರ್‌, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಡಿ.ಭರತ್‌, ತಿಪಟೂರು ವಿಭಾಗ ಉಪವಿಭಾಗಾಧಿಕಾರಿ ಕೆ.ಸಪ್ತಶ್ರೀ, ಡಿವೈಎಸ್‌ಪಿ ವಿನಾಯಕ ಶಟಗೇರಿ, ತಹಶೀಲ್ದಾರ್‌ ಕೆ.ಪುರದಂರ, ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಸ್.ಕಾಂತರಾಜು, ಸಿಪಿಐ ನಾದಾಫ್‌, ಪಿಎಸ್‌ಐ ಧರ್ಮಾಂಜಿ, ವಲಯ ಅರಣ್ಯಾಧಿಕಾರಿ ಚಂದನ್‌ ಹಾಜರಿದ್ದರು.

ಲೋಪವಾಗಿದ್ದರೆ ಪರ್ಯಾಯ ಜಮೀನು  ಉಪಲೋಕಾಯುಕ್ತ ಬಿ.ವೀರಪ್ಪ ಒತ್ತುವರಿ ಅರಣ್ಯ ತೆರವು ಪ್ರದೇಶಕ್ಕೆ ಭೇಟಿ ನೀಡಿದ್ದ ವೇಳೆ ರೈತರು ತಮಗೆ ಆಗಿರುವ ಅನ್ಯಾಯ ಸರಿಪಡಿಸುವಂತೆ ಮನವಿ ಮಾಡಿದರು. ರೈತರ ಮನವಿಗೆ ಸ್ಪಂದಿಸಿ  ಒಂದು ವೇಳೆ ಅಧಿಕಾರಿಗಳ ತಪ್ಪಿನಿಂದ ಅರಣ್ಯ ಭೂಮಿ ರೈತರಿಗೆ ಮಂಜೂರು ಮಾಡಿದ್ದರೆ ಅಂತಹ ದಾಖಲೆಗಳನ್ನು ಪರಿಶೀಲಿಸಿ ಗೋಮಾಳ ಸೇರಿದಂತೆ ಲಭ್ಯವಿರುವ ಕಡೆ ಪರ್ಯಾಯ ಜಮೀನು ನೀಡುವಂತೆ ಸ್ಥಳದಲ್ಲಿದ್ದ ಕಂದಾಯ ಇಲಾಖೆ ಉಪವಿಭಾಗಾಧಿಕಾರಿಗೆ ಉಪ ಲೋಕಾಯುಕ್ತರು ತಾಕೀತು ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.