ADVERTISEMENT

ತುಮಕೂರು: ಅಂಬೇಡ್ಕರ್ ಜೀವನ ಮಾದರಿ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2021, 8:33 IST
Last Updated 9 ಅಕ್ಟೋಬರ್ 2021, 8:33 IST
ತುಮಕೂರಿನ ಕೆಎಸ್ಇಎಫ್ ಶಿಕ್ಷಣ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ‘ಅಂಬೇಡ್ಕರ್ ಓದು’ ಕಾರ್ಯಕ್ರಮವನ್ನು ತುಮಕೂರು ವಿ.ವಿ ಕುಲಪತಿ ಪ್ರೊ.ವೈ.ಎಸ್.ಸಿದ್ದೇಗೌಡ ಉದ್ಘಾಟಿಸಿದರು. ಅಂಬೇಡ್ಕರ್ ಅಧ್ಯಯನ ಕೇಂದ್ರದ ನಿರ್ದೇಶಕ ಪ್ರೊ.ಜಿ.ಬಸವರಾಜು, ಪ್ರಾಂಶುಪಾಲರಾದ ಬಿ.ಸುಕನ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೆ.ಶ್ರೀನಿವಾಸ್ ಭಾಗವಹಿಸಿದ್ದರು
ತುಮಕೂರಿನ ಕೆಎಸ್ಇಎಫ್ ಶಿಕ್ಷಣ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ‘ಅಂಬೇಡ್ಕರ್ ಓದು’ ಕಾರ್ಯಕ್ರಮವನ್ನು ತುಮಕೂರು ವಿ.ವಿ ಕುಲಪತಿ ಪ್ರೊ.ವೈ.ಎಸ್.ಸಿದ್ದೇಗೌಡ ಉದ್ಘಾಟಿಸಿದರು. ಅಂಬೇಡ್ಕರ್ ಅಧ್ಯಯನ ಕೇಂದ್ರದ ನಿರ್ದೇಶಕ ಪ್ರೊ.ಜಿ.ಬಸವರಾಜು, ಪ್ರಾಂಶುಪಾಲರಾದ ಬಿ.ಸುಕನ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೆ.ಶ್ರೀನಿವಾಸ್ ಭಾಗವಹಿಸಿದ್ದರು   

ತುಮಕೂರು: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಜೀವನ ಚರಿತ್ರೆ ಇಂದಿನ ಯುವ ಸಮುದಾಯಕ್ಕೆ ಮಾದರಿಯಾಗಬೇಕು ಎಂದು ತುಮಕೂರು ವಿಶ್ವವಿದ್ಯಾನಿಲಯ ಕುಲಪತಿ ಪ್ರೊ.ವೈ.ಎಸ್.ಸಿದ್ದೇಗೌಡ ಹೇಳಿದರು.

ತುಮಕೂರು ವಿಶ್ವವಿದ್ಯಾನಿಲಯ, ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಕೇಂದ್ರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಕೆಎಸ್ಇಎಫ್ ಶಿಕ್ಷಣ ಮಹಾವಿದ್ಯಾಲಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ‘ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಓದು’ ಕಾರ್ಯಕ್ರಮ ಉದ್ಘಾಟಿಸಿಮಾತನಾಡಿದರು.

ಅಂಬೇಡ್ಕರ್ ಶಿಕ್ಷಣಕ್ಕೆ ಒತ್ತು ನೀಡುವ ಮೂಲಕ ದೇಶದಲ್ಲಿ ಸಾಮಾಜಿಕ ಸುಧಾರಣೆಗೆ ಶ್ರಮಿಸಿದರು. ಅವರ ಶ್ರಮದಿಂದಾಗಿ ಶೋಷಿತ ಸಮುದಾಯಗಳು, ಮಹಿಳೆಯರು, ಕಾರ್ಮಿಕರು, ಅಲಕ್ಷಿತ ವರ್ಗಗಳ ಶೈಕ್ಷಣಿಕ ಪ್ರಗತಿ ಸಾಧ್ಯವಾಗಿದೆ. ಅವರು ನಡೆದ ದಾರಿಯಲ್ಲಿ ನಾವೆಲ್ಲರೂ ಸಾಗುವುದು ಅತ್ಯವಶ್ಯಕವಾಗಿದೆ ಎಂದು ಸಲಹೆ ಮಾಡಿದರು.

ADVERTISEMENT

ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಕೇಂದ್ರದ ನಿರ್ದೇಶಕ ಪ್ರೊ.ಜಿ.ಬಸವರಾಜು, ‘ಜಾತ್ಯತೀತ ಮೌಲ್ಯಗಳು ವಿದ್ಯಾರ್ಥಿಗಳಲ್ಲಿ ಮೂಡಬೇಕು. ಪ್ರಜಾಸತ್ತಾತ್ಮಕ ಗುಣಗಳು ತರಗತಿಗಳಲ್ಲಿ ಅಂತರ್ಗತಗೊಂಡು, ಪ್ರಯೋಗಾತ್ಮಕವಾಗಿ ಸಮಾಜದಲ್ಲಿ ಬೆಳೆಯಬೇಕು. ಶಿಸ್ತುಬದ್ಧ ಜೀವನ ರೂಢಿಸಿಕೊಂಡು ಉತ್ತಮ ರಾಷ್ಟ್ರ ನಿರ್ಮಾಣ ಮಾಡಬೇಕು’ ಎಂದು ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೆ.ಶ್ರೀನಿವಾಸ್, ‘ವಿದ್ಯಾರ್ಥಿಗಳ ಜ್ಞಾನ ವಿಸ್ತಾರಗೊಳಿಸಲು ಸರ್ಕಾರವು ಅಂಬೇಡ್ಕರ್ ಓದು ಕಾರ್ಯಕ್ರಮ ಅನುಷ್ಠಾನ ಮಾಡಿದೆ’ ಎಂದರು.

ವಿ.ವಿ ಸಂಶೋಧನಾ ಸಹಾಯಕ ಕೆ.ಎನ್‌.ಲಕ್ಷ್ಮಿರಂಗಯ್ಯ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಕೆಎಸ್ಇಎಫ್ ಶಿಕ್ಷಣ ಮಹಾವಿದ್ಯಾಲಯ ಪ್ರಾಂಶುಪಾಲರಾದ ಬಿ.ಸುಕನ್ಯ ಅಧ್ಯಕ್ಷತೆ ವಹಿಸಿದ್ದರು. ಸಹಾಯಕ ಪ್ರಾಧ್ಯಾಪಕರಾದ ಕುಮಾರಸ್ವಾಮಿ, ಬಿ.ಕೆ.ರಾಜೇಶ್, ಎಸ್‌.ಎನ್‌.ದರ್ಶನ್ ಭಾಗವಹಿಸಿದ್ದರು. ಸಹಾಯಕ ಪ್ರಾಧ್ಯಾಪಕ ಹರೀಶ್ ನಿರೂಪಿಸಿದರು.

ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಪ್ರಯುಕ್ತ ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಪಿ.ಆರ್‌.ನವೀನ್ ಕುಮಾರ್ (ಪ್ರಥಮ), ಕೆ.ಎನ್‌.ಪಾವನ (ದ್ವಿತೀಯ), ಸಿ.ಬೃಂದಾ (ತೃತೀಯ), ಸಿ.ರಶ್ಮಿ, ಜಿ.ರಾಜಮ್ಮ, ಆರ್‌.ಶಿಲ್ಪ, ಕಾಂತಮಣಿ, ಆರ್‌.ಟಿ.ರಕ್ಷಿತಾ (ಸಮಾಧಾನಕರ) ಅವರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೇಲ್ವಿಚಾರಕ ಸುರೇಶ್ ಕುಮಾರ್ ಬಹುಮಾನ ವಿತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.