ADVERTISEMENT

ಕುಣಿಗಲ್ | ಕುಕ್ಕರ್ ಕೇಳಿದ ವೃದ್ಧೆಗೆ ಹಲ್ಲೆ!

ಮತದಾರರಿಗೆ ಹಂಚಲು ತಂದಿದ್ದ ಉಡುಗೊರೆ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2024, 22:59 IST
Last Updated 20 ಮಾರ್ಚ್ 2024, 22:59 IST
   

ಕುಣಿಗಲ್ (ತುಮಕೂರು): ಮತದಾರರಿಗೆ ಹಂಚಲಾದ ಕುಕ್ಕರ್‌ ತನಗೆ ಸಿಕ್ಕಿಲ್ಲ ಎಂದು ಕೇಳಿದ ವೃದ್ಧೆಯ ಮೇಲೆ ಕಾಂಗ್ರೆಸ್‌ ಪಕ್ಷದ ಸ್ಥಳೀಯ ಮುಖಂಡ ಬುಧವಾರ ಹಲ್ಲೆ ನಡೆಸಿದ್ದಾನೆ ಎಂದು ದೂರಲಾಗಿದೆ. 

ಹಲ್ಲೆಗೆ ಒಳಗಾಗಿದ್ದಾರೆ ಎಂದು ಹೇಳಲಾದ ಉಜ್ಜನಿ ಗ್ರಾಮದ ಗಂಗಚಂದ್ರಮ್ಮ(75) ಅವರ ಮಗ ಶಿವಕುಮಾರ್, ಸ್ಥಳೀಯ ಕಾಂಗ್ರೆಸ್ ಮುಖಂಡ ನಾರಾಯಣ ಎಂಬುವರ ವಿರುದ್ಧ ಹುಲಿಯೂರುದುರ್ಗ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ.

ಹದಿನೈದು ದಿನದ ಹಿಂದೆ ಚುನಾವಣೆ ನೀತಿ ಸಂಹಿತೆ ಜಾರಿಯಾಗುವ ಮುನ್ನ ಉಜ್ಜನಿ ಗ್ರಾಮದಲ್ಲಿ ಮತದಾರರಿಗೆ ಕುಕ್ಕರ್ ಹಂಚಲಾಗಿತ್ತು. ಆಗ ಮಗಳ ಮನೆಗೆ ಹೋಗಿದ್ದ ಗಂಗಚಂದ್ರಮ್ಮ ಹದಿನೈದು ದಿನದ ಬಳಿಕ ಗ್ರಾಮಕ್ಕೆ ಮರಳಿದ್ದರು. ಬುಧವಾರ ಮನೆಯ ಮುಂದೆ ಕುಳಿತಿದ್ದ ಅವರು, ಬೈಕ್‌ನಲ್ಲಿ ಹೊರಟಿದ್ದ ಮುಖಂಡನನ್ನು ‘ನನಗೆ ಯಾಕೆ ಕುಕ್ಕರ್ ನೀಡಿಲ್ಲ’ ಎಂದು ಪ್ರಶ್ನಿಸಿದ್ದಾರೆ. 

ADVERTISEMENT

ಇದರಿಂದ ಕೋಪಗೊಂಡ ಆತ ಕಪಾಳಕ್ಕೆ ಹೊಡೆದು, ಹಲ್ಲೆ ಮಾಡಿದ್ದಾನೆ. ಸ್ಥಳೀಯರು ನನ್ನ ತಾಯಿಯನ್ನು ರಕ್ಷಿಸಿದ್ದಾರೆ ಎಂದು ಶಿವಕುಮಾರ್‌ ದೂರಿನಲ್ಲಿ ಹೇಳಿದ್ದಾರೆ. ಹುಲಿಯೂರುದುರ್ಗ ಪ್ರಾಥಮಿಕ ಆರೋಗ್ಯ ಕೇಂದ್ರಲ್ಲಿ ಚಂದ್ರಗಂಗಮ್ಮನವರಿಗೆ ಚಿಕಿತ್ಸೆ ಕೊಡಿಸಲಾಗಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.