ADVERTISEMENT

ಅಂಗನವಾಡಿ ವಹಿವಾಟು ಸ್ಥಗಿತಗೊಳಿಸಿ ಮುಷ್ಕರ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2019, 2:28 IST
Last Updated 8 ಡಿಸೆಂಬರ್ 2019, 2:28 IST
ತುಮಕೂರು ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಶನಿವಾರ ನಡೆದ ಕಾರ್ಮಿಕರ ಜಿಲ್ಲಾ ಸಮಾವೇಶದಲ್ಲಿ ಭಾಗವಹಿಸಿದ್ದ ಪ್ರಮುಖರು.
ತುಮಕೂರು ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಶನಿವಾರ ನಡೆದ ಕಾರ್ಮಿಕರ ಜಿಲ್ಲಾ ಸಮಾವೇಶದಲ್ಲಿ ಭಾಗವಹಿಸಿದ್ದ ಪ್ರಮುಖರು.   

ತುಮಕೂರು: ಅಗತ್ಯ ವಸ್ತುಗಳ ಬೆಲೆ ಏರಿಕೆ ನಿಯಂತ್ರಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಜ.8 ರಂದು ತುಮಕೂರು ನಗರದಲ್ಲಿ ಮುಷ್ಕರ ನಡೆಸಲು ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಸದಸ್ಯರು ನಿರ್ಧರಿಸಿದ್ದಾರೆ.

ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಶನಿವಾರ ಎಐಟಿಯುಸಿ, ಸಿಐಟಿಯು, ಎಐಯುಟಿಯುಸಿ, ಬ್ಯಾಂಕ್ ಅಂಚೆ, ವಿಮಾ ನೌಕರರ ಸಂಘಟನೆ ಜಂಟಿಯಾಗಿ ಹಮ್ಮಿಕೊಂಡಿದ್ದ ಕಾರ್ಮಿಕರ ಜಿಲ್ಲಾ ಸಮಾವೇಶದಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು.

ಸರ್ಕಾರ ದುಡಿಯುವ ಜನರಿಗೆ ಕನಿಷ್ಠ ಕೂಲಿ ₹21 ಸಾವಿರ ನಿಗದಿಗೊಳಿಸಬೇಕು. ಕೃಷಿ ಬಿಕ್ಕಟ್ಟನ್ನು ಬಗೆಹರಿಸಲು ಡಾ.ಸ್ವಾಮಿನಾಥನ್ ಆಯೋಗದ ಶಿಫಾರಸುಗಳನ್ನು ಜಾರಿಗೊಳಿಸಬೇಕು. ಗುತ್ತಿಗೆ ನೌಕರರನ್ನು ಕಾಯಂಗೊಳಿಸಬೇಕು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಜ.8ರಂದು ಅಂಗನವಾಡಿ ವಹಿವಾಟು ಮತ್ತು ಶಾಲಾ ಕಾಲೇಜುಗಳನ್ನು ಬಂದ್ ಮಾಡುವ ಮೂಲಕ ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ನೀಡಿರುವ ಅಖಿಲ ಭಾರತ ಸಾರ್ವತ್ರಿಕ ಮುಷ್ಕರದ ಕರೆಗೆ ಬೆಂಬಲ ನೀಡಲು ನಿರ್ಧರಿಸಲಾಗಿದೆ.

ಸಮಾವೇಶದಲ್ಲಿ ಎಐಟಿಯುಸಿ ರಾಜ್ಯ ಕಾರ್ಯದರ್ಶಿ ಶೇಷಾದ್ರಿ ಮಾತನಾಡಿ, ‘ಕೇಂದ್ರ ಸರ್ಕಾರ ರಾಷ್ಟ್ರೀಯ ಸಂಪತ್ತನ್ನು ಬಂಡವಾಳಗಾರರಿಗೆ ಆರು ಕಾಸು ಮೂರು ಕಾಸಿಗೆ ಮಾರುತ್ತಿದೆ. ಪ್ರಸಕ್ತ ಕೇಂದ್ರ, ರಾಜ್ಯದಲ್ಲಿರುವ ಸರ್ಕಾರಗಳು ಕಾರ್ಮಿಕರ ಹಕ್ಕುಗಳನ್ನು ಮೊಟುಕುಗೊಳಿಸುತ್ತಿವೆ’ ಎಂದು ಆಪಾದಿಸಿದರು.

ADVERTISEMENT

ಸಿಐಟಿಯು ರಾಜ್ಯ ಕಾರ್ಯದರ್ಶಿ ಕೆ.ಎನ್.ಉಮೇಶ್ ಮಾತನಾಡಿ, ‘ಅಗತ್ಯ ವಸ್ತುಗಳ ಬೆಲೆಗಳು ಆಕಾಶಕ್ಕೆ ಮುಟ್ಟಿರುವಾಗಜನರ ಬದುಕನ್ನು ರಕ್ಷಣೆ ಮಾಡಲು ಈ ಹೋರಾಟ ಅನಿವಾರ್ಯವಾಗಿದೆ’ ಎಂದರು.

ಎಐಯುಟಿಯುಸಿ ಮುಖಂಡ ಮಂಜುನಾಥ್, ಜೀವ ವಿಮಾ ನೌಕರರ ಸಂಘಟನೆಯ ಜಿಲ್ಲಾಧ್ಯಕ್ಷ ನಂಜುಂಡಸ್ವಾಮಿ, ಸಿಐಟಿಯು ಜಿಲ್ಲಾಧ್ಯಕ್ಷ ಸೈಯದ್ ಮುಜೀಬ್, ಎಐಟಿಯುಸಿ ಕಾರ್ಯದರ್ಶಿ ಗಿರೀಶ್, ಎಐಯುಟಿಯಿಸಿಯ ಮಂಜುಳ, ಕಂಬೇಗೌಡ, ಎನ್.ಕೆ.ಸುಬ್ರಮಣ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.