ADVERTISEMENT

ಶಿರಾ | ಮುಖ್ಯಶಿಕ್ಷಕರ ವರ್ತನೆಗೆ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2023, 8:13 IST
Last Updated 19 ಮಾರ್ಚ್ 2023, 8:13 IST
ಮುಖ್ಯಶಿಕ್ಷಕ ಉಮೇಶ್ ನಡವಳಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿರುವ ಗ್ರಾಮಸ್ಥರು
ಮುಖ್ಯಶಿಕ್ಷಕ ಉಮೇಶ್ ನಡವಳಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿರುವ ಗ್ರಾಮಸ್ಥರು   

ಶಿರಾ: ತಾಲ್ಲೂಕಿನ ಬುಕ್ಕಾಪಟ್ಟಣ ಹೋಬಳಿಯ ಕುಂಬಾರಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಮುಖ್ಯಶಿಕ್ಷಕ ಉಮೇಶ್ ಅವರ ವರ್ತನೆಗೆ ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಉಮೇಶ್ ಪ್ರತಿನಿತ್ಯ ಶಾಲೆಗೆ ತಡವಾಗಿ ಬರುತ್ತಿದ್ದು ಬೇಗ ಶಾಲೆಯಿಂದ ಹೋಗುತ್ತಿದ್ದಾರೆ. ಈ ಬಗ್ಗೆ ಗ್ರಾಮಸ್ಥರು ಹಲವಾರು ಬಾರಿ ಅವರಿಗೆ ಹೇಳಿದರೂ ತಮ್ಮ ವರ್ತನೆಯಲ್ಲಿ ಬದಲಾವಣೆ ಮಾಡಿಕೊಂಡಿರಲಿಲ್ಲ. ಇದರಿಂದ ಬೇಸತ್ತು ಕ್ಷೇತ್ರ ಶಿಕ್ಷಣಾಧಿಕಾರಿಗೆ ದೂರು ನೀಡಿದ್ದರು.

ಶಿಕ್ಷಣಾಧಿಕಾರಿ ಅವರಿ ಶಾಲೆಗೆ ಬಂದ ಸಮಯದಲ್ಲಿ ಮುಖ್ಯಶಿಕ್ಷಕ ಶಾಲೆಯಲ್ಲಿ ಇಲ್ಲದಿರುವ ಕಾರಣ ನೋಟಿಸ್ ಜಾರಿ ಮಾಡಿದ್ದರು.

ADVERTISEMENT

ಉಮೇಶ್ ಶನಿವಾರ ಸಹ ಬೆಳಿಗ್ಗೆ 7.40ಕ್ಕೆ ಬರಬೇಕಿದ್ದು 8.40ಕ್ಕೆ ಶಾಲೆಗೆ ಬಂದಿದ್ದಾರೆ. ಆಗ ಗ್ರಾಮ ಪಂಚಾಯಿತಿ ಅಧ್ಯಕ್ಷ ಶಾಂತರಾಜು, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಪಾತಯ್ಯ, ಗ್ರಾಮಸ್ಥರಾದ ಗಂಗಾಧರ್, ಜಯಣ್ಣ, ಗಿರೀಶ, ಕೃಷ್ಣಮೂರ್ತಿ, ಭದ್ರಣ್ಣ, ಮಂಜುನಾಥ್ ಮುಂತಾದವರು ಅವರನ್ನು ಶಾಲೆಯ ಒಳಗೆ ಹೋಗದಂತೆ ಕೆಲಕಾಲ ತಡೆದು ನಿಲ್ಲಿಸಿದರು.

ನಂತರ ಶಾಲೆಯ ಒಳಗೆ ತೆರಳಿ ಮಕ್ಕಳಿಗೆ ನೀಡಿದ ಹಾಲಿನ ಪಾಕೆಟ್‌ಗಳನ್ನು ಪರಿಶೀಲಿಸಿದರು. ಅವುಗಳ ಅವಧಿ ಮುಗಿದಿದ್ದು ಮಕ್ಕಳಿಗೆ ನೀಡದಂತೆ ತಡೆದು ಮೇಲಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಸ್ಥಳಕ್ಕೆ ಸಿಆರ್‌ಪಿ ರವಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

‘ಮುಖ್ಯಶಿಕ್ಷಕರ ವಿರುದ್ಧ ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ಶಾಲೆಗೆ ಭೇಟಿ ನೀಡಿದಾಗ ಅವರು ಶಾಲೆಯಲ್ಲಿ ಇರಲಿಲ್ಲ. ಈ ಬಗ್ಗೆ ಕಾರಣ ಕೇಳಿ ನೋಟಿಸ್ ನೀಡಲಾಗಿದೆ. ಈ ದಿನ ನಡೆದ ಘಟನೆ ಬಗ್ಗೆ ಸಿಆರ್‌ಪಿ ಮೂಲಕ ಮಾಹಿತಿ ಪಡೆದಿದ್ದು ಕ್ರಮ ಕೈಗೊಳ್ಳುವಂತೆ ಉಪ ನಿರ್ದೇಶಕರಿಗೆ ಪತ್ರ ಬರೆಯಲಾಗುವುದು’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಪ್ಪ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.