ADVERTISEMENT

ಅಂತರಸನಹಳ್ಳಿ ಮಾರುಕಟ್ಟೆಯಲ್ಲಿ ‘ಮಾಫಿಯಾ’

ಉಪಲೋಕಾಯುಕ್ತ ಬಿ.ವೀರಪ್ಪ ಅಸಮಾಧಾನ; ಬಾಕಿ ಪ್ರಕರಣ ಕುರಿತು ವಿಚಾರಣೆ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2025, 7:07 IST
Last Updated 15 ನವೆಂಬರ್ 2025, 7:07 IST
ತುಮಕೂರು ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣಕ್ಕೆ ಶುಕ್ರವಾರ ಉಪಲೋಕಾಯುಕ್ತ ಬಿ.ವೀರಪ್ಪ ಭೇಟಿ ನೀಡಿ ಪರಿಶೀಲಿಸಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಎನ್‌.ತಿಪ್ಪೇಸ್ವಾಮಿ, ತಹಶೀಲ್ದಾರ್‌ ಪಿ.ಎಸ್‌.ರಾಜೇಶ್ವರಿ ಉಪಸ್ಥಿತರಿದ್ದರು
ತುಮಕೂರು ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣಕ್ಕೆ ಶುಕ್ರವಾರ ಉಪಲೋಕಾಯುಕ್ತ ಬಿ.ವೀರಪ್ಪ ಭೇಟಿ ನೀಡಿ ಪರಿಶೀಲಿಸಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಎನ್‌.ತಿಪ್ಪೇಸ್ವಾಮಿ, ತಹಶೀಲ್ದಾರ್‌ ಪಿ.ಎಸ್‌.ರಾಜೇಶ್ವರಿ ಉಪಸ್ಥಿತರಿದ್ದರು   

ತುಮಕೂರು: ಅಂತರಸನಹಳ್ಳಿ ತರಕಾರಿ ಮಾರುಕಟ್ಟೆಯಲ್ಲಿ ಯಾರು, ಏನು ಬೇಕಾದರೂ ಮಾಡಬಹುದು. ಇದು ಒಂದು ರೀತಿಯಲ್ಲಿ ‘ಮಾಫಿಯಾ’ ಆಗಿದೆ ಎಂದು ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಅಸಮಾಧಾನ ವ್ಯಕ್ತಪಡಿಸಿದರು.

ನಗರದ ಜಿಲ್ಲಾ ಪಂಚಾಯಿತಿಯಲ್ಲಿ ಶುಕ್ರವಾರ ಕುಣಿಗಲ್, ಗುಬ್ಬಿ ತಾಲ್ಲೂಕುಗಳಿಗೆ ಸಂಬಂಧಿಸಿದಂತೆ ಲೋಕಾಯುಕ್ತದಲ್ಲಿ ದಾಖಲಾದ ಪ್ರಕರಣಗಳ ಕುರಿತ ವಿಚಾರಣೆ ಸಭೆಯಲ್ಲಿ ಮಾತನಾಡಿದರು.

ಇಡೀ ಮಾರುಕಟ್ಟೆ ಅಧ್ವಾನ ಆಗಿದೆ. ಇಲ್ಲಿ ರೈತರಿಂದ ಹಣ ಪಡೆಯಲಾಗುತ್ತಿದೆ. ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ಮಾಡಿಲ್ಲ. ರಾಜ್ಯದ ಸುಮಾರು ಜಿಲ್ಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಇಂತಹ ವ್ಯವಸ್ಥೆ ಬೇರೆ ಯಾವುದೇ ಜಿಲ್ಲೆಯಲ್ಲೂ ಇಲ್ಲ. ಯಾವುದೇ ಸೌಲಭ್ಯ ಕಲ್ಪಿಸಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.

ADVERTISEMENT

ಬಸ್‌ ನಿಲ್ದಾಣದ ಮಳಿಗೆಗಳಲ್ಲಿ ಅವಧಿ ಮೀರಿದ ಆಹಾರ ಪದಾರ್ಥ ಮಾರಾಟ ಮಾಡಲಾಗುತ್ತಿದೆ. ಆಹಾರ ಗುಣಮಟ್ಟ ಅಧಿಕಾರಿಗಳು ಏನು ಮಾಡುತ್ತಿದ್ದಾರೆ? ಎಂಬುವುದು ಗೊತ್ತಾಗುತ್ತಿಲ್ಲ ಎಂದು ಕುಟುಕಿದರು.

ಕರ್ತವ್ಯದ ಜತೆಗೆ ಹಕ್ಕು ಕೇಳಬೇಕು. ಅನ್ಯಾಯದ ವಿರುದ್ಧ ಧ್ವನಿ ಎತ್ತುವುದು ನಮ್ಮ ಹಕ್ಕು. ಮನುಷ್ಯ ಸ್ವಾರ್ಥ ಬಿಡಬೇಕು. ಬೇರೆಯವರ ಸಂಪತ್ತಿಗೆ ದುರಾಸೆಪಡುವುದು ತಪ್ಪು. ಹಣ ಪಡೆಯದೆ ಮತ ಚಲಾವಣೆ ಮಾಡಿದಾಗ ಸಮಾಜ ಬದಲಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಸುಳ್ಳು ದೂರ ಬೇಡ: ಸುಳ್ಳು ದೂರು ನೀಡುವುದು ಜಾಸ್ತಿಯಾಗುತ್ತಿದೆ. ಅಧಿಕಾರಿಗಳು ಈ ದೂರಿನ ಬೆನ್ನತ್ತಿ ಹೋದರೆ ನಿಜವಾದ ಪ್ರಕರಣ ಸತ್ತು ಹೋಗುತ್ತದೆ. ದೂರುದಾರ ಕೇವಲ ಸ್ವಹಿತಾಸಕ್ತಿಗಾಗಿ ದೂರು ಸಲ್ಲಿಸಬೇಡಿ. ಅಧಿಕಾರಿಗಳು ಸಮರ್ಪಕವಾಗಿ ಕರ್ತವ್ಯ ನಿರ್ವಹಿಸದಿದ್ದರೆ ಕ್ರಮ ವಹಿಸಲಾಗುವುದು. ವಿದ್ಯಾವಂತರು ಮೋಸಗಾರರಾದರೆ ಕಷ್ಟ ಎಂದರು.‌

ಇದುವರೆಗೆ ಬಡವರಿಗೆ ಸ್ವಾತಂತ್ರ್ಯ ಸಿಕ್ಕಿಲ್ಲ. ಅಧಿಕಾರಸ್ಥರಿಗೆ, ದರ್ಪ ತೋರುವವರಿಗೆ ಮಾತ್ರ ಸ್ವಾತಂತ್ರ್ಯ ಇದೆ. ನಾವು ತಿನ್ನುವ ಅನ್ನ ನಮ್ಮ ದುಡಿಮೆಯಿಂದ ಆಗಿರಬೇಕು. ಬೇರೆಯವರ ಅನ್ನವಾದರೆ‌ ಅದು ವಿಷವಾಗುತ್ತದೆ. ಅನ್ಯಾಯದ ಹಣಕ್ಕೆ ಕೈಯೊಡ್ಡಿದರೆ ಅಧಿಕಾರಿ ಸತ್ತಂತೆ ಎಂದು ಹೇಳಿದರು.

ಲೋಕಾಯುಕ್ತ ಉಪನಿಬಂಧಕ ಎನ್‌.ವಿ.ಅರವಿಂದ, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿ.ಪಂ ಸಿಇಒ ಜಿ.ಪ್ರಭು, ಎಸ್ಪಿ ಕೆ.ವಿ.ಅಶೋಕ್, ಮಹಾನಗರ ಪಾಲಿಕೆ ಆಯುಕ್ತೆ ಬಿ.ವಿ.ಅಶ್ವಿಜ, ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ ಎ.ವಿ.ಲಕ್ಷ್ಮಿನಾರಾಯಣ, ಹೆಚ್ಚುವರಿ ಜಿಲ್ಲಾಧಿಕಾರಿ ಎನ್‌.ತಿಪ್ಪೇಸ್ವಾಮಿ ಹಾಜರಿದ್ದರು.

ಪಿಡಿಒ ಅಮಾನತು

ಒಂದೇ ಕುಟುಂಬಕ್ಕೆ ಎರಡು ಮನೆ ಮಂಜೂರು ಮಾಡಿದ್ದ ಕುಣಿಗಲ್‌ ತಾಲ್ಲೂಕಿನ ಮಡಿಕೆಹಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸರಿತಾ ಅವರನ್ನು ಅಮಾನತು ಮಾಡಲಾಗಿದೆ. ಅವರಿಂದ ₹60 ಸಾವಿರ ಹಣ ವಸೂಲಿ ಮಾಡಲಾಗಿದೆ ಎಂದು ಉಪಲೋಕಾಯುಕ್ತ ಬಿ.ವೀರಪ್ಪ ಹೇಳಿದರು. ಬೋರೇಗೌಡನಪಾಳ್ಯದ ರಾಮಕೃಷ್ಣಯ್ಯ ಈ ಕುರಿತು ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು. ಉಪಲೋಕಾಯುಕ್ತರು ಇದರ ವಿಚಾರಣೆ ನಡೆಸಿದರು. ಪ್ರಕರಣದ ಕುರಿತು ತನಿಖೆ ನಡೆಯುತ್ತಿದೆ ಎಂದು ತಿಳಿಸಿದರು. ಕುಣಿಗಲ್‌ನ ಶಿವರಾಂಪುರದ ಎಸ್.ವಿ.ಮಾರಯ್ಯ ಅವರ ಜಮೀನಿಗೆ ಪೋಡಿ ಮಾಡಿಕೊಡದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ‘ಯಾಕೆ ಕೆಲಸ ಮಾಡಿಲ್ಲ. ಉಡಾಫೆ ತೋರಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಮುಂದಿನ ಎರಡು ತಿಂಗಳಲ್ಲಿ ಸಮಸ್ಯೆಗೆ ಮುಕ್ತಿ ಕಾಣಿಸಬೇಕು’ ಎಂದು ತಹಶೀಲ್ದಾರ್‌ ರಶ್ಮಿ ಅವರಿಗೆ ಗಡುವು ನೀಡಿದರು. ದುರುದ್ದೇಶದಿಂದ ಲೋಕಾಯುಕ್ತದಲ್ಲಿ ದೂರು ಸಲ್ಲಿಸಿದವರಿಗೆ ತಿಳಿ ಹೇಳಿದರು. ಕುಣಿಗಲ್‌ನ ಅನಿಲ್‌ಕುಮಾರ್ ‘8 ಗುಂಟೆ ಜಮೀನಿನಲ್ಲಿ ಕಾನೂನು ಬಾಹಿರವಾಗಿ ವಿದ್ಯುತ್ ಪರಿವರ್ತಕ ಅಳವಡಿಸಿದ್ದಾರೆ. ಟಿ.ಸಿ ತೆರವುಗೊಳಿಸಬೇಕು’ ಎಂದು ಕೋರಿ ದೂರು ಸಲ್ಲಿಸಿದ್ದರು. 8 ಗುಂಟೆ ಜಾಗ ನಿಮ್ಮದು ಎನ್ನುವುದಕ್ಕೆ ದಾಖಲೆ‌ ಎಲ್ಲಿದೆ? ಮೊದಲು ಕಂದಾಯ ಇಲಾಖೆಗೆ ಅರ್ಜಿ ಸಲ್ಲಿಸಿ ದಾಖಲೆ ತರಿಸಿಕೊಳ್ಳಬೇಕು. ನಂತರ ನಮ್ಮಲ್ಲಿ ಅರ್ಜಿ ಸಲ್ಲಿಸಬೇಕು. ಬುದ್ದಿ ಬೇಡವೇ? ಏನು ಓದಿದ್ದೀಯಾ? ವಿದ್ಯಾವಂತರೇ ಮೋಸಗಾರರಾದರೆ ಹೀಗೆ ಆಗೋದು. ಮೊದಲು ಪೋಡಿ ಮಾಡಿಸಿ 8 ಗುಂಟೆ ನಿಮಗೆ ಸೇರಿದ್ದರೆ ನಂತರ ಅರ್ಜಿ ಸಲ್ಲಿಸಿ ಎಂದು ಸೂಚಿಸಿದರು.

- ಬದುಕು ಹಾಳು ಮಾಡಬೇಡ

‘ನೀನು ಬದುಕು; ಬೇರೆಯವರ ಬದುಕು ಹಾಳು ಮಾಡಬೇಡ ಜನರು ಹಾಳಾಗಿ ಹೋಗಿ ನಾನು ಚೆನ್ನಾಗಿದ್ದರೆ ಸಾಕು ಎಂದರೆ ದೇವರು ಒಪ್ಪಲ್ಲ’ ಎಂದು ಉಪಲೋಕಾಯುಕ್ತ ಬಿ.ವೀರಪ್ಪ ಅಂಗಡಿ ಮಳಿಗೆ ಮಾಲೀಕರಿಗೆ ಎಚ್ಚರಿಸಿದರು. ನಗರದ‌‌ ಕೆಎಸ್ಆರ್‌ಟಿಸಿ ಖಾಸಗಿ ಬಸ್ ನಿಲ್ದಾಣಕ್ಕೆ ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮಳಿಗೆಗಳಲ್ಲಿ ಅವಧಿ ಮೀರಿದ ಆಹಾರ ಪದಾರ್ಥ ಮಾರಾಟ ಮಾಡುತ್ತಿರುವುದು ಕಂಡು ಬಂತು. ಇಂತಹ ತಿಂಡಿ-ತಿನಿಸು ಮಾರಾಟ ಮಾಡಿ ಜನರನ್ನೇಕೆ ಸಾಯಿಸುತ್ತೀರಿ? ಎಂದು ಸಿಡಿಮಿಡಿಗೊಂಡರು. ಕೂಡಲೇ ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಅಂತರಸನಹಳ್ಳಿ ಮಾರುಕಟ್ಟೆಯ ಅವ್ಯವಸ್ಥೆ ಕಂಡು ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ‘ಏನಮ್ಮಾ ಇದು ಯಾಕೆ ಇಷ್ಟು ಗಲೀಜು ಸ್ವಚ್ಛಗೊಳಿಸಿ. ರಸ್ತೆಯಲ್ಲಿ ಕಸ ಎಸೆಯದಂತೆ ನೋಡಿಕೊಳ್ಳಿ. ಎಲ್ಲಿ ನಿಮ್ಮ ಆಯುಕ್ತರು ಕೂಡಲೇ ಸ್ಥಳಕ್ಕೆ ಬರಲು ಹೇಳಿ’ ಎಂದು ಮಹಾನಗರ ಪಾಲಿಕೆ ಪರಿಸರ ಎಂಜಿನಿಯರ್‌ ಪೂರ್ಣಿಮಾ ಅವರನ್ನು ತರಾಟೆಗೆ ತೆಗೆದುಕೊಂಡರು. ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದರು. ‘ಪ್ರತಿ ಕೋಣೆಗೆ ಸೂಚನಾ ಫಲಕ ಅಳವಡಿಸಬೇಕು. ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಆಸ್ಪತ್ರೆಗೆ ಬರುವ ರೋಗಿಗಳಿಗೆ ಹೊರಗಡೆಯಿಂದ ಔಷಧ ತರುವಂತೆ ಹೇಳಬಾರದು’ ಎಂದು ನಿರ್ದೇಶಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.