ADVERTISEMENT

ಕಲುಷಿತ ನೀರು ನಾಲೆ ಸೇರುವ ಆತಂಕ

ಒಳಚರಂಡಿಯ ತ್ಯಾಜ್ಯ ಹೇಮಾವತಿ ನಾಲೆ ಸೇರಿದರೆ ಕುಡಿಯುವ ನೀರಿಗೆ ತೊಂದರೆ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2021, 2:12 IST
Last Updated 11 ಅಕ್ಟೋಬರ್ 2021, 2:12 IST
ಎಸ್‌ಟಿಪಿ ಘಟಕದಿಂದ ಸರಿಯಾಗಿ ಶುದ್ಧೀಕರಣವಾಗದ ನೀರು ಆಚೆ ಬರುತ್ತಿದ್ದು, ನೀರಿನ ಬಣ್ಣ ಬದಲಾಗಿದೆ (ಎಡಚಿತ್ರ), ಹೂವಿನಕಟ್ಟೆಯಲ್ಲಿ ಶೇಖರಣೆಗೊಂಡಿರುವ ನೀರು
ಎಸ್‌ಟಿಪಿ ಘಟಕದಿಂದ ಸರಿಯಾಗಿ ಶುದ್ಧೀಕರಣವಾಗದ ನೀರು ಆಚೆ ಬರುತ್ತಿದ್ದು, ನೀರಿನ ಬಣ್ಣ ಬದಲಾಗಿದೆ (ಎಡಚಿತ್ರ), ಹೂವಿನಕಟ್ಟೆಯಲ್ಲಿ ಶೇಖರಣೆಗೊಂಡಿರುವ ನೀರು   

ತಿಪಟೂರು: ನಗರದ ಒಳಚರಂಡಿಯ ಕಲುಷಿತ ನೀರು ತುಮಕೂರು ಹಾಗೂ ತಿಪಟೂರಿಗೆ ಕುಡಿಯುವ ನೀರು ಸರಬರಾಜು ಮಾಡುವ ಹೇಮಾವತಿ ನಾಲೆ ಹಾಗೂ ಈಚನೂರಿನ ಕೆರೆಯನ್ನು ಸೇರುವ ಆತಂಕ ಎದುರಾಗಿದೆ.

ನಗರದ ತ್ಯಾಜ್ಯ ನೀರನ್ನು ವ್ಯವಸ್ಥಿತವಾಗಿ ಹೊರಹಾಕಲು ₹65 ಕೋಟಿ ವೆಚ್ಚದಲ್ಲಿ ಒಳಚರಂಡಿ ಕಾಮಗಾರಿಯನ್ನು ಮೂರು ಹಂತಗಳಲ್ಲಿ ನಿರ್ಮಾಣ ಮಾಡಲಾಗಿದೆ. ನಗರದಲ್ಲಿ 14,650ಕ್ಕೂ ಹೆಚ್ಚು ಮನೆಗಳಿದ್ದು, 8 ಸಾವಿರ ಮನೆಗಳಿಗೆ ಒಳಚರಂಡಿ ಸಂಪರ್ಕ ಕಲ್ಪಿಸಲಾಗಿದೆ.

ತಾಲ್ಲೂಕಿನ ಕಲ್ಲೇಗೌಡನಪಾಳ್ಯದ ಬಳಿ ನಿರ್ಮಿಸಿರುವ ತ್ಯಾಜ್ಯ ಶುದ್ಧೀಕರಣ ಘಟಕವನ್ನು ‘ಸೆಬ್‍ಕಾಸ್ಟೆಲ್ ಪ್ರೈವೆಟ್ ಲಿಮಿಟೆಡ್ ಕಂಪನಿ’ ನಿರ್ವಹಣೆ ಮಾಡುತ್ತಿದೆ. ನಿತ್ಯ 6 ಸಾವಿರ ದಶಲಕ್ಷ ಲೀಟರ್ ನೀರು ಒಳಚರಂಡಿಯಿಂದ ಉತ್ಪಾದನೆಯಾಗುತ್ತಿದ್ದು, ಅಷ್ಟೇ ಪ್ರಮಾಣದ ನೀರನ್ನು ಶುದ್ಧೀಕರಿಸಿ 5 ವರ್ಷಗಳಿಂದ ಹೂವಿನಕಟ್ಟೆಗೆ ಬಿಡಲಾಗುತ್ತಿದೆ.

ADVERTISEMENT

ಪ್ರಾರಂಭದಲ್ಲಿ 12 ಸಾವಿರ ದಶಲಕ್ಷ ಲೀಟರ್ ಸಾಮರ್ಥ್ಯದ ತ್ಯಾಜ್ಯ ನೀರು ಶುದ್ಧೀಕರಣ ಘಟಕ ನಿರ್ಮಾಣಕ್ಕೆ ಯೋಜನೆ ರೂಪಿಸಿದ್ದು, 6 ಎಂಎಲ್‌ಡಿ ಸಾಮರ್ಥ್ಯದ ಘಟಕ ನಿರ್ಮಾಣ ಮಾಡಲಾಗಿದೆ. ಈ ಘಟಕದಲ್ಲಿ ನೀರು ಶುದ್ಧೀಕರಣ ಸಂದರ್ಭದಲ್ಲಿ ಘನ ಪದಾರ್ಥ ಸಂಗ್ರಹವಾಗುತ್ತದೆ. ಅದನ್ನು ನಗರಸಭೆ ಹರಾಜು ಪ್ರಕ್ರಿಯೆಯಲ್ಲಿ ನೀಡಿದ್ದರೂ, ಈವರೆಗೆ ತೆಗೆದುಕೊಂಡು ಹೋಗಿಲ್ಲ. ಕಲುಷಿತ ನೀರು ಸಮರ್ಪಕವಾಗಿ ಶುದ್ಧೀಕರಣವಾಗದೆ ಘನ ತ್ಯಾಜ್ಯ ಸೇರಿ ಹೂವಿನಕಟ್ಟೆಗೆ ವಾಸನೆ, ನೊರೆಯಿಂದ ಕೂಡಿದ ಬಣ್ಣ ಬಣ್ಣದ ನೀರು ಆಚೆ ಬರುತ್ತಿದೆ. ಸುತ್ತಲಿನ ಪ್ರದೇಶ ಕೆಟ್ಟ ವಾಸನೆಯಿಂದ ಕೂಡಿದೆ.

ಕೆರೆಗೆ ಬರುವ ನೀರನ್ನು ರೈತರು ತಮ್ಮ ನೂರಾರು ಎಕರೆ ಜಮೀನಿಗೆ ಪಂಪ್‍ಸೆಟ್‍ ಮೂಲಕ ಹರಿಸಿಕೊಳ್ಳುತ್ತಿದ್ದರು. ಇತ್ತೀಚೆಗೆ ತ್ಯಾಜ್ಯಯುಕ್ತ ನೀರು ಹೊರ ಬರುತ್ತಿರುವುದರಿಂದ ರೈತರು ಈ ನೀರಿನ ಬಳಕೆಯನ್ನು ಕಡಿಮೆ ಮಾಡಿದ್ದಾರೆ. ಹಾಗಾಗಿ ಈ ನೀರು ಹರಿದು ಹಿಂಡಿಸ್ಕೆರೆ ಕೆರೆ ಸೇರುತ್ತಿದೆ. ಹಿಂಡಿಸ್ಕೆರೆ ಗ್ರಾಮಸ್ಥರು ಈಚನೂರು ಕೆರೆಯಿಂದ ಹೇಮಾವತಿ ನೀರನ್ನು ಹಿಂಡಿಸ್ಕೆರೆ ಕೆರೆಗೆ ಹರಿಸಲು ಉತ್ಸುಕರಾಗಿದ್ದು, ಎಸ್‍ಟಿಪಿ ಘಟಕದ ನೀರನ್ನು ಹರಿಸದಂತೆ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ. ಅಧಿಕಾರಿಗಳು ಸ್ಥಳಕ್ಕೆ ತೆರಳಿ ನೀರನ್ನು ಪರೀಕ್ಷಿಸಲು ಲ್ಯಾಬ್‍ಗೆ ಕಳುಹಿಸಿದ್ದಾರೆ.

ಹಿಂಡಿಸ್ಕೆರೆ ತುಂಬಿ ಈಚನೂರು ಕಡೆಗೆ ನೀರು ಸಾಗಿದರೆ ಹತ್ತಿರದಲ್ಲಿಯೇ ಇರುವ ಹೇಮಾವತಿ ನಾಲೆಗೂ ನೀರು ಸೇರುವ ಅಪಾಯವಿದ್ದು, ಜನರು ಆತಂಕಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.