ADVERTISEMENT

ಲಿಡ್ಕರ್‌ ಉತ್ಪನ್ನ ಬಳಕೆಗೆ ನಿರಾಸಕ್ತಿ

12 ಗಂಟೆಯಾದರೂ ಬಾಗಿಲು ತೆಗೆಯದ ಲಿಡ್ಕರ್‌ ಮಳಿಗೆ, ಸಿಬ್ಬಂದಿ ಕೊರತೆ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2024, 7:08 IST
Last Updated 19 ಸೆಪ್ಟೆಂಬರ್ 2024, 7:08 IST
ತುಮಕೂರಿನಲ್ಲಿ ಬುಧವಾರ ಮಧ್ಯಾಹ್ನ ಬಾಗಿಲು ಮುಚ್ಚಿದ್ದ ಲಿಡ್ಕರ್‌ ಮಳಿಗೆ
ತುಮಕೂರಿನಲ್ಲಿ ಬುಧವಾರ ಮಧ್ಯಾಹ್ನ ಬಾಗಿಲು ಮುಚ್ಚಿದ್ದ ಲಿಡ್ಕರ್‌ ಮಳಿಗೆ   

ತುಮಕೂರು: ಲಿಡ್ಕರ್‌ ಉತ್ಪನ್ನ ಬಳಕೆಗೆ ಜಿಲ್ಲೆಯ ಜನರು ನಿರಾಸಕ್ತಿ ತೋರುತ್ತಿದ್ದು, ಉತ್ಪನ್ನ ಖರೀದಿ ಕುಸಿತ ಕಂಡಿದೆ.

2022-23ನೇ ಸಾಲಿನಲ್ಲಿ 641 ಉತ್ಪನ್ನಗಳು ಮಾರಾಟವಾಗಿದ್ದು, ₹7.51 ಲಕ್ಷ ಆದಾಯ ಸಂಗ್ರಹವಾಗಿದೆ. 2023-24ರಲ್ಲಿ 1,377 ಉತ್ಪನ್ನಗಳನ್ನು ಜನ ಖರೀದಿಸಿದ್ದು, ₹16.43 ಲಕ್ಷ ಹಣ ಪಾವತಿಯಾಗಿದೆ. ಕಳೆದ ವರ್ಷ ಸ್ವಲ್ಪ ಪರವಾಗಿಲ್ಲ ಎಂಬಂತೆ ವ್ಯಾಪಾರ ವಹಿವಾಟು ನಡೆದಿದೆ. ಈ ವರ್ಷ ಮತ್ತೆ ಯಥಾಸ್ಥಿತಿಗೆ ತಲುಪಿದ್ದು, ಕಳೆದ ಆರು ತಿಂಗಳಲ್ಲಿ 305 ಉತ್ಪನ್ನ ಮಾರಾಟವಾಗಿ ₹3.94 ಲಕ್ಷ ಆದಾಯ ಬಂದಿದೆ.

ನಗರದ ಸ್ವಾತಂತ್ರ್ಯ ಚೌಕದ ಬಳಿಯ ರೆಡ್‌ಕ್ರಾಸ್‌ ಕಟ್ಟಡದಲ್ಲಿರುವ ಬಾಬು ಜಗಜೀವನ್ ರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ ಕಚೇರಿಯಲ್ಲೇ ವಿವಿಧ ಉತ್ಪನ್ನ ಮಾರಾಟ ಮಾಡಲಾಗುತ್ತಿದೆ. ಬುಧವಾರ ಮಧ್ಯಾಹ್ನ 12 ಗಂಟೆಯಾದರೂ ಕಚೇರಿಯ ಬಾಗಿಲು ತೆಗೆದಿರಲಿಲ್ಲ. ಬೀಗ ಹಾಕಿರುವುದನ್ನು ಕಂಡು ಸಾರ್ವಜನಿಕರು ವಾಪಸ್‌ ಆಗುತ್ತಿದ್ದ ದೃಶ್ಯಗಳು ಕಂಡು ಬಂದವು.

ADVERTISEMENT

ಬೆಂಗಳೂರಿನಿಂದ ಚರ್ಮದ ಷೂ, ಚಪ್ಪಲಿ, ವ್ಯಾನಿಟಿ ಬ್ಯಾಗ್, ಪರ್ಸ್, ಲೆದರ್‌ ಬೆಲ್ಟ್‌ ಮತ್ತು ಇತರೆ ಉತ್ಪನ್ನ ತರಿಸಿಕೊಂಡು ಲಿಡ್ಕರ್‌ ಮಳಿಗೆಯಲ್ಲಿ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗುತ್ತದೆ. ಸ್ವಾತಂತ್ರ್ಯೋತ್ಸವ, ಗಣರಾಜ್ಯೋತ್ಸವ, ಕನ್ನಡ ರಾಜ್ಯೋತ್ಸವ, ಗೌರಿ– ಗಣೇಶ ಹಬ್ಬ ಸೇರಿದಂತೆ ಇತರೆ ವಿಶೇಷ ಸಂದರ್ಭದಲ್ಲಿ ಶೇ 10ರಿಂದ 40ರ ವರೆಗೆ ರಿಯಾಯಿತಿ ನೀಡಲಾಗುತ್ತಿದೆ. ಆದರೂ ಖರೀದಿಗೆ ಹೆಚ್ಚಿನ ಜನರು ಆಸಕ್ತಿ ತೋರುತ್ತಿಲ್ಲ.

ಇತ್ತೀಚಿನ ದಿನಗಳಲ್ಲಿ ಲಿಡ್ಕರ್‌ ಉತ್ಪನ್ನಗಳ ಬಳಕೆ ತೀರಾ ಕಡಿಮೆಯಾಗಿದೆ. ಉತ್ಪನ್ನ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವೂ ಪರಿಣಾಮಕಾರಿಯಾಗಿ ಆಗುತ್ತಿಲ್ಲ. ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದಿಂದ ಕಾಲ ಕಾಲಕ್ಕೆ ತರಬೇತಿ ಕಾರ್ಯಾಗಾರ ಏರ್ಪಡಿಸಿ ಷೂ, ಚಪ್ಪಲಿ, ವ್ಯಾನಿಟಿ ಬ್ಯಾಗ್ ತಯಾರಿ ಕುರಿತು ತರಬೇತಿ ನೀಡಬೇಕು. ಇದಕ್ಕಾಗಿ ಸರ್ಕಾರದಿಂದ ಅನುದಾನವೂ ಬಿಡುಗಡೆಯಾಗುತ್ತಿದೆ. ಜಿಲ್ಲೆಯಲ್ಲಿ ಕಳೆದ ಆರು ತಿಂಗಳಿನಿಂದ ಯಾವುದೇ ತರಬೇತಿ ಕಾರ್ಯಾಗಾರ ನಡೆದಿಲ್ಲ. ಕಳೆದ ವರ್ಷ ಒಂದು ಕಾರ್ಯಾಗಾರ ಏರ್ಪಡಿಸಿ, 30 ಮಂದಿ ಮಹಿಳೆಯರಿಗೆ ತರಬೇತಿ ನೀಡಲಾಗಿತ್ತು.

‘ಇಡೀ ಜಿಲ್ಲೆಗೆ ಕೇವಲ ಒಂದು ಲಿಡ್ಕರ್‌ ಮಳಿಗೆ ಮಾತ್ರ ಇದ್ದು, ಸಾರ್ವಜನಿಕರು ನಗರಕ್ಕೆ ಬಂದು ಉತ್ಪನ್ನ ಖರೀದಿಸಬೇಕಾಗಿದೆ. ಇದರಿಂದ ವ್ಯಾಪಾರಕ್ಕೆ ಹಿನ್ನಡೆಯಾಗುತ್ತಿದೆ. ಆಯಾ ತಾಲ್ಲೂಕು ವ್ಯಾಪ್ತಿಯಲ್ಲಿ ಮಳಿಗೆ ತೆರೆದು ಮಾರಾಟಕ್ಕೆ ಅನುವು ಮಾಡಿಕೊಟ್ಟರೆ ಚರ್ಮ ಕೈಗಾರಿಕೆಗೆ ಉತ್ತೇಜನ ನೀಡಿದಂತಾಗುತ್ತದೆ. ನಿಗಮದ ಅಭಿವೃದ್ಧಿಗೂ ಸಹಾಯವಾಗುತ್ತದೆ’ ಎಂದು ಸಿಐಟಿಯು ಕಾರ್ಯದರ್ಶಿ ಎನ್‌.ಕೆ.ಸುಬ್ರಮಣ್ಯ ಅಭಿಪ್ರಾಯ ವ್ಯಕ್ತಪಡಿಸಿದರು.

‘ನಗರದಲ್ಲಿ ಲಿಡ್ಕರ್‌ ಮಳಿಗೆ ಇದೆ ಎಂಬುದು ತುಂಬಾ ಜನರಿಗೆ ಗೊತ್ತಿಲ್ಲ. ಪ್ರಚಾರದ ಕೊರತೆಯಿಂದ ಉತ್ಪನ್ನ ಖರೀದಿ ಕಡಿಮೆಯಾಗಿದೆ. ಶಾಲೆಯ ಮಕ್ಕಳು, ಪೌರ ಕಾರ್ಮಿಕರಿಗೆ ಷೂ ವಿತರಿಸಲು ಖಾಸಗಿ ಕಂಪನಿಗಳ ಮೇಲೆ ಅವಲಂಬಿತವಾಗಿದೆ. ಇದರ ಬದಲಾಗಿ ಲಿಡ್ಕರ್‌ ಸಂಸ್ಥೆಯಲ್ಲೇ ಅಗತ್ಯ ಷೂ ತಯಾರಿಸಿ ಹಂಚಿಕೆ ಮಾಡಬಹುದು’ ಎಂದು ಸಲಹೆ ನೀಡಿದರು.

ನಿಗಮದಲ್ಲಿ ಇಬ್ಬರೇ ಕೆಲಸ!

ಬಾಬು ಜಗಜೀವನ್ ರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದಲ್ಲಿ ವ್ಯವಸ್ಥಾಪಕ ಹಾಗೂ ಒಬ್ಬ ಡಾಟಾ ಎಂಟ್ರಿ ಆಪರೇಟರ್‌ ಮಾತ್ರ ಕೆಲಸ ಮಾಡುತ್ತಿದ್ದಾರೆ. ವ್ಯವಸ್ಥಾಪಕರು ಮಂಡ್ಯ ಮತ್ತು ತುಮಕೂರು ಎರಡೂ ಕಡೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇರುವ ಒಬ್ಬ ಸಿಬ್ಬಂದಿ ರಜೆ ಸಭೆ– ಕಾರ್ಯಕ್ರಮ ಎಂದು ಹೋದರೆ ಮಳಿಗೆಗೆ ಬೀಗ ಜಡಿಯಲಾಗುತ್ತದೆ. ವಿವಿಧ ಉತ್ಪನ್ನ ಖರೀದಿಸಿಕೊಡಲು ಬಂದವರು ವಾಪಸಾಗುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.