ADVERTISEMENT

ಚೇಳೂರು | ಕೋಟಿಗಟ್ಟಲೇ ವಹಿವಾಟು: ನಿರ್ವಹಣೆಗೆ ನಿರಾಸಕ್ತಿ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2025, 6:09 IST
Last Updated 18 ಆಗಸ್ಟ್ 2025, 6:09 IST
ಚೇಳೂರು ಎಪಿಎಂಸಿ ಆವರಣದ ಗುಂಡಿಗಳಲ್ಲಿ ನೀರು ನಿಂತಿ‌ತ್ತು
ಚೇಳೂರು ಎಪಿಎಂಸಿ ಆವರಣದ ಗುಂಡಿಗಳಲ್ಲಿ ನೀರು ನಿಂತಿ‌ತ್ತು   

ಗುಬ್ಬಿ: ತಾಲ್ಲೂಕಿನ ಚೇಳೂರಿನಲ್ಲಿರುವ ಎಪಿಎಂಸಿ ಆವರಣ ಅಗತ್ಯ ಸೌಕರ್ಯಗಳಿಲ್ಲದೆ ನಿರ್ಲಕ್ಷಕ್ಕೆ ಒಳಗಾಗಿದೆ. ತಾಲ್ಲೂಕು ಕೇಂದ್ರಕ್ಕಿಂತ ಹೆಚ್ಚಿನ ವಹಿವಾಟು ನಡೆಯುವ ಈ ಎಪಿಎಂಸಿ ಕೇಂದ್ರ ಸಮಸ್ಯೆಗಳ ಆಗರವಾಗಿದೆ.

ವಾರ್ಷಿಕ ಕೋಟಿಗಟ್ಟಲೇ ವ್ಯವಹಾರ ನಡೆಯುವ ಇಲ್ಲಿನ ಎಪಿಎಂಸಿ ನಿರ್ವಹಣೆಗೆ ಯಾವುದೇ ಖಾಯಂ ಸಿಬ್ಬಂದಿ ಹಾಗೂ ಅಧಿಕಾರಿಗಳನ್ನು ನೇಮಿಸಿಲ್ಲ. ಸದ್ಯ ಹೊರಗುತ್ತಿಗೆ ಸಿಬ್ಬಂದಿ ಒಬ್ಬರನ್ನು ಕಾಟಾಚಾರಕ್ಕೆ ನೇಮಿಸಲಾಗಿದೆ. ಆದರೆ ಅಗತ್ಯ ಸೌಲಭ್ಯಗಳು ಮರೀಚಿಕೆಯಾಗಿವೆ ಎಂದು ಸಾರ್ವಜನಿಕರು ದೂರಿದ್ದಾರೆ.

ಸದ್ಯ ಗುಬ್ಬಿಯ ಎಪಿಎಂಸಿ ಅಧಿಕಾರಿಯೇ ಚೇಳೂರಿನ ಎಪಿಎಂಸಿಯನ್ನು ನೋಡಿಕೊಳ್ಳುತ್ತಿದ್ದಾರೆ. ಗುಬ್ಬಿಯಿಂದ ಬಿಡುವಾದಾಗ ಬಂದು ಹೋಗುವ ಅಧಿಕಾರಿಯನ್ನು ಹೊರತುಪಡಿಸಿದರೆ ಉಳಿದಂತೆ ಇಲ್ಲಿ ಹೇಳುವವರು, ಕೇಳುವವರು ಯಾರೂ ಇಲ್ಲದೆ ಕುಡುಕರ, ಅನೈತಿಕ ಚಟುವಟಿಕೆಗಳ ತಾಣವಾಗುತ್ತಿದೆ ಎಂದು ಸ್ಥಳೀಯರು ಆರೋಪಿಸುತ್ತಾರೆ.

ADVERTISEMENT

ಆವರಣದೊಳಗೆ ಹೋಗಿ ಬರಲು ಇದ್ದ ಎರಡು ಗೇಟ್‌ಗಳು ಸಂಪೂರ್ಣ ಹಾಳಾಗಿದ್ದು, ಭದ್ರತೆಯೇ ಇಲ್ಲವಾಗಿದೆ. ಏಷ್ಯಾ ಖಂಡದಲ್ಲಿಯೇ ಅತಿದೊಡ್ಡ ಹಲಸಿನ ಮಾರುಕಟ್ಟೆ ಇದೇ ಆವರಣದಲ್ಲಿ ನಡೆಯಲಿದೆ. ಪ್ರತಿ ಭಾನುವಾರ ತೆಂಗಿನಕಾಯಿ, ರಾಗಿ, ದವಸ, ಧಾನ್ಯಗಳ ವ್ಯಾಪಾರ ಜೋರಾಗಿ ನಡೆಯಲಿದೆ. ವಾರ್ಷಿಕ ಕೋಟ್ಯಂತರ ರೂಪಾಯಿ ವಹಿವಾಟು ನಡೆಯುವ ಇಲ್ಲಿನ ಎಂಪಿಎಂಸಿ ನಿರ್ವಹಣೆಗೆ ಅಗತ್ಯ ಕ್ರಮ ಕೈಗೊಂಡಿಲ್ಲ.

ಇಡೀ ಆವರಣದಲ್ಲಿ ಸ್ವಚ್ಛತೆ ಕೊರತೆ ಎದ್ದು ಕಾಣುತ್ತಿದೆ. ಆವರಣದಲ್ಲಿ ಗುಂಡಿಗಳು ಬಿದ್ದಿರುವುದರಿಂದ ಮಳೆ ಬಂದರಂತೂ ರೈತರ ಹಾಗೂ ವ್ಯಾಪಾರಿಗಳ ಪಾಡು ಹೇಳತೀರದು. ಗುಂಡಿಗಳಲ್ಲಿ ನೀರು ನಿಲ್ಲುವುದರಿಂದ ನೀರಿನಲ್ಲಿಯೇ ನಿಂತು ಹರಾಜು ಕೂಗುವುದು ಅನಿವಾರ್ಯ. ಆವರಣ ಗೋಡೆ ಸಂಪೂರ್ಣ ಹಾಳಾಗಿದ್ದು, ಹಲವೆಡೆ ಕುಸಿದು ಹಾಳು ಕೊಂಪೆಯಂತಾಗಿದೆ. ಕುಡಿಯುವ ನೀರು, ಶೌಚಾಲಯ ಸೌಲಭ್ಯವಿಲ್ಲದೆ ವ್ಯಾಪಾರಿಗಳು ಹಾಗೂ ರೈತರು ಕಷ್ಟಪಡುವಂತಾಗಿದೆ. ಮಹಿಳೆಯರ ಪಾಡಂತೂ ಹೇಳತೀರದು.

ಹಲಸು ಹಾಗೂ ತೆಂಗಿನ ಕಾಯಿ ಸಂತೆ ದಿನಗಳನ್ನು ಹೊರತುಪಡಿಸಿ, ಉಳಿದ ಸಂದರ್ಭದಲ್ಲಿ ಈ ಪ್ರಾಂಗಣ ಕುಡುಕರ ಅಡ್ಡೆಯಾಗಿ ಮಾರ್ಪಟ್ಟಿದೆ. ಹಗಲು ಅನೇಕರು ಕುಡಿದು ಆವರಣದ ಮಾರಾಟದ ಶೆಡ್‌ಗಳಲ್ಲಿ ಮಲಗಿ ವಿಶ್ರಮಿಸುತ್ತಾರೆ. ಆವರಣದಲ್ಲಿ ಮಧ್ಯದ ಬಾಟಲ್‌, ಸಿಗರೇಟ್‌ ಪ್ಯಾಕೆಟ್‌, ಪ್ಲಾಸ್ಟಿಕ್ ಕವರ್ ಹಾಗೂ ಲೋಟಗಳು ಬಿದ್ದಿವೆ. ಆವರಣದಲ್ಲಿ ಸ್ವಚ್ಛತೆ ಇಲ್ಲದೆ ಸೊಳ್ಳೆಗಳ ಉತ್ಪತ್ತಿ ತಾಣವಾಗಿದೆ.

ಹೊರ ರಾಜ್ಯಗಳಿಂದ ಹಲಸಿನ ವ್ಯಾಪಾರಕ್ಕೆ ಬರುವ ವ್ಯಾಪಾರಿಗಳಿಗೆ ಅಗತ್ಯ ಸೌಕರ್ಯ ಒದಗಿಸಿಲ್ಲ. ಇಲ್ಲಿನ ಎಪಿಎಂಸಿಯಿಂದ ಹೆಚ್ಚಿನ ಆದಾಯದ ಮೂಲವಿದ್ದರೂ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷಕ್ಕೆ ಒಳಗಾಗಿದೆ.

ಎಪಿಎಂಸಿಯಿಂದ ರೈತರಿಗೆ ಸಾಕಷ್ಟು ಅನುಕೂಲವಿದ್ದರೂ ಮೂಲ ಸೌಕರ್ಯಗಳಿಲ್ಲದೆ ಸೊರಗುತ್ತಿದೆ. ತಾಲ್ಲೂಕಿನಲ್ಲಿಯೇ ಅತಿ ಹೆಚ್ಚು ಆದಾಯ ಬರುವ ಚೇಳೂರಿನ ಎಪಿಎಂಸಿಗೆ ಕಾಯಕಲ್ಪ ನೀಡಿ ಅಗತ್ಯ ಕ್ರಮ ಕೈಗೊಂಡು ಸೌಕರ್ಯ ಒದಗಿಸಿದರೆ ರೈತರು ಹಾಗೂ ವ್ಯಾಪಾರಿಗಳಿಗೆ ಅನುಕೂಲವಾಗುವ ಜೊತೆಗೆ ಸರ್ಕಾರಕ್ಕೂ ಉತ್ತಮ ಆದಾಯದ ಮೂಲವಾಗುತ್ತದೆ ಎನ್ನುವುದು ಸ್ಥಳೀಯರ ಆಶಯ.

ಜನರು ಹೀಗೆಂದರು...

ಕೋಟಿಗಟ್ಟಲೆ ವ್ಯವಹಾರ ನಡೆಯುವ ಚೇಳೂರು ಎಪಿಎಂಸಿಗೆ ಅಗತ್ಯ ಸೌಲಭ್ಯ ಕಲ್ಪಿಸಬೇಕಿರುವ ಅಧಿಕಾರಿಗಳು ಜನಪ್ರತಿನಿಧಿಗಳು ಸಂಪೂರ್ಣವಾಗಿ ನಿರ್ಲಕ್ಷಿಸಿರುವುದರಿಂದ ರೈತರು ಸಂಕಷ್ಟಕ್ಕೆ ಸಿಲುಕುವಂತಾಗಿದೆ - ಮಂಜುನಾಥ್ ವ್ಯಾಪಾರಿ

ರೈತರ ಕೃಷಿ ಉತ್ಪನ್ನಗಳನ್ನು ಸ್ಥಳೀಯವಾಗಿ ಮಾರಾಟ ಮಾಡಲು ಎಪಿಎಂಸಿಯಿಂದ ಅನುಕೂಲ ಇದೆ. ಆದರೆ ಅವರಣದಲ್ಲಿ ಸೌಕರ್ಯಗಳಿಲ್ಲದೆ ವ್ಯಾಪಾರಕ್ಕೆ ಬರಲು ಅಸಹ್ಯ ಎನಿಸುತ್ತಿದೆ. ಸೌಕರ್ಯ ಕಲ್ಪಿಸಿದರೆ ಅನುಕೂಲ - ನರಸಿಂಹಯ್ಯ ರೈತ

ಎಪಿಎಂಸಿಯನ್ನು ನಿರ್ವಹಿಸಲು ಅಗತ್ಯ ಸಿಬ್ಬಂದಿ ಹಾಗೂ ದುರಸ್ತಿಗೆ ಅನುದಾನದ ಅಗತ್ಯವಿದೆ. ಅನುದಾನ ಬಿಡುಗಡೆಯಾದಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಸರ್ಕಾರದ ನಿರ್ದೇಶನದನ್ವಯ ಕಾರ್ಯನಿರ್ವಹಿಸುತ್ತೇವೆ - ವಿಜಯಲಕ್ಷ್ಮಿ ಎಪಿಎಂಸಿ ಅಧಿಕಾರಿ 

ಎಪಿಎಂಸಿ ದುರಸ್ತಿಗೊಳಿಸಿ ರಸ್ತೆಯ ಬದಿ ಭಾನುವಾರ ನಡೆಯುವ ಸಂತೆಯನ್ನು ಪ್ರಾಂಗಣಕ್ಕೆ ವರ್ಗಾಯಿಸಿದಲ್ಲಿ ರೈತರು ಗ್ರಾಹಕರಿಗೆ ಸಾಕಷ್ಟು ಅನುಕೂಲವಾಗುತ್ತದೆ. ಜನಪ್ರತಿನಿಧಿ ಅಧಿಕಾರಿಗಳು ಗಮನ ಹರಿಸಬೇಕು- ಕೆಂಪರಾಜು ಸ್ಥಳೀಯ

ಎಪಿಎಂಸಿ ಆವರಣ ಸಂಪೂರ್ಣ ಹಾಳಾಗಿರುವ ಜೊತೆಗೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಇಲ್ಲದೆ ಅನಾಥವಾಗಿದೆ. ಅಕ್ರಮ ಚಟುವಟಿಕೆಗಳ ತಾಣವಾಗುತ್ತಿದೆ. ಸಂಬಂಧಿಸಿದವರು ಸುಧಾರಣೆಗೆ ಮುಂದಾಗದಿದ್ದಲ್ಲಿ ಪ್ರತಿಭಟಿಸಲಾಗುವುದು - ಅರೇಹಳ್ಳಿ ಮಂಜುನಾಥ್ ರೈತ ಸಂಘ 

ಚೇಳೂರಿನ ಎಪಿಎಂಸಿ ಆವರಣದಲ್ಲಿ ನೀರಿನಲ್ಲಿಯೇ ನಿಂತು ತೆಂಗಿನ ಕಾಯಿ ವ್ಯಾಪಾರ
ಕೆಟ್ಟು ನಿಂತಿರುವ ಕುಡಿಯುವ ನೀರಿನ ಘಟಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.