ಪಾವಗಡ: ಪರಿಶಿಷ್ಟ ಜಾತಿ, ಪಂಗಡದವರ ಜಮೀನುಗಳನ್ನು ಸೋಲಾರ್ ಕಂಪನಿಗಳು ವಶಪಡಿಸಿಕೊಳ್ಳದಂತೆ ಕ್ರಮ ತೆಗೆದುಕೊಳ್ಳಬೇಕು, ರೈತರ ಸಮಸ್ಯೆ ಪರಿಹರಿಸಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘ, ಹಸಿರು ಸೇನೆ ಪದಾಧಿಕಾರಿಗಳು ಬುಧವಾರ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರಿಗೆ ಮನವಿ ಸಲ್ಲಿಸಿದರು.
ತಾಲ್ಲೂಕಿನ ವಿವಿಧೆಡೆ ಖಾಸಗಿ ಕಂಪನಿಗಳು ಸೋಲಾರ್ ಘಟಕ ನಿರ್ಮಿಸಲು ಪರಿಶಿಷ್ಟ ಜಾತಿ, ಪಂಗಡದವರ ಜಮೀನುಗಳನ್ನು ಸ್ವಾಧೀನಪಡಿಸಿಕೊಳ್ಳುತ್ತಿವೆ. ಇನ್ನಿಲ್ಲದ ಒತ್ತಡ ಹೇರಿ ಅವರಿಂದ ಜಮೀನು ವಶಪಡಿಸಿಕೊಳ್ಳುತ್ತಿದ್ದಾರೆ. ಇದರಿಂದ ಬಡ ಜನತೆ ಬೀದಿಗೆ ಬರುವಂತಾಗಿದೆ ಎಂದು ಜಿಲ್ಲಾ ಘಟಕದ ಅಧ್ಯಕ್ಷ ಪೂಜಾರಪ್ಪ ಆರೋಪಿಸಿದರು.
ಸೊಲಾರ್ ಘಟಕ ನಿರ್ಮಿಸುವಾಗ ಜಮೀನುಗಳಿಗೆ ಇರುವ ರಸ್ತೆಗಳನ್ನು ಮುಚ್ಚಲಾಗುತ್ತಿದೆ. ಇದರಿಂದ ಜಮೀನುಗಳಿಗೆ ಹೋಗಲಾಗದೆ ರೈತರು ಸಮಸ್ಯೆ ಎದುರಿಸುತ್ತಿದ್ದಾರೆ. ಬಗರ್ ಹುಕುಂ ಅಡಿ ಅರ್ಜಿ ಸಲ್ಲಿಸಿದ ರೈತರಿಗೆ ಭೂಮಿ ಮಂಜೂರು ಮಾಡುತ್ತಿಲ್ಲ. ಖಾತೆ, ಪಹಣಿ ಮಾಡಿಕೊಡುವಲ್ಲಿ ಅಧಿಕಾರಿಗಳು ವಿಳಂಬ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಸೋಲಾರ್ ಘಟಕ ನಿರ್ಮಿಸುವಾಗ ರೈತರ ಜಮೀನುಗಳನ್ನು ಮುಚ್ಚಬಾರದು. ಪರಿಶಿಷ್ಟ ಜಾತಿ, ಪಂಗಡದ ರೈತರ ಜಮೀನು ವಶಪಡಿಸಿಕೊಳ್ಳಬಾರದು. ಬಗರ್ ಹುಕುಂ ಅಡಿ ಜಮೀನುಗಳನ್ನು ಶೀಘ್ರ ಮಂಜೂರು ಮಾಡಬೇಕು ಎಂದು ಒತ್ತಾಯಿಸಿದರು.
ತಾಲ್ಲೂಕು ಘಟಕದ ಅಧ್ಯಕ್ಷ ಶಿವು, ಗುಡಿಪಲ್ಲಪ್ಪ, ಹನುಮಂತರಾಯ, ರಾಮಾಂಜಿ, ನಾಗೇಂದ್ರಪ್ಪ, ಪಡಿಯಾಲಪ್ಪ, ಪರಶನಾಯ್ಕ, ಚನ್ನಕೇಶವರೆಡ್ಡಿ, ಶ್ರೀನಿವಾಸರೆಡ್ಡಿ, ರಾಜನಾಯ್ಕ, ರಾಮಾನಾಯ್ಕ, ರಾಮಾಂಜಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.