ADVERTISEMENT

ಎತ್ತಿನಹೊಳೆ | ₹302 ಕೋಟಿ ವೆಚ್ಚದ ಕಾಮಗಾರಿಗೆ ಅನುಮೋದನೆ: ಸಚಿವ ಕೆ.ಎನ್.ರಾಜಣ್ಣ

45 ಕೆರೆಗಳಿಗೆ ನೀರು ತುಂಬಿಸುವ ಯೋಜನೆ: ಸಹಕಾರ ಸಚಿವ ಕೆ.ಎನ್.ರಾಜಣ್ಣ

​ಪ್ರಜಾವಾಣಿ ವಾರ್ತೆ
Published 27 ಜುಲೈ 2024, 15:35 IST
Last Updated 27 ಜುಲೈ 2024, 15:35 IST
ಮಧುಗಿರಿ ತಾಲ್ಲೂಕಿನ ಸಿದ್ಧಾಪುರದ ಕೆರೆಗೆ ಸಹಕಾರ ಸಚಿವ ಕೆ.ಎನ್.ರಾಜಣ್ಣ ಗಂಗಾಪೂಜೆ ನೆರವೇರಿಸಿದರು
ಮಧುಗಿರಿ ತಾಲ್ಲೂಕಿನ ಸಿದ್ಧಾಪುರದ ಕೆರೆಗೆ ಸಹಕಾರ ಸಚಿವ ಕೆ.ಎನ್.ರಾಜಣ್ಣ ಗಂಗಾಪೂಜೆ ನೆರವೇರಿಸಿದರು   

ಮಧುಗಿರಿ: ಎತ್ತಿನಹೊಳೆ ಯೋಜನೆಯಲ್ಲಿ ತಾಲ್ಲೂಕಿನ 45 ಕೆರೆಗಳಿಗೆ ನೀರು ತುಂಬಿಸುವ ₹302 ಕೋಟಿ ವೆಚ್ಚದ ಕಾಮಗಾರಿಗಳಿಗೆ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ಆಡಳಿತಾತ್ಮಕ ಅನುಮೋದನೆ ನೀಡಿದೆ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ತಿಳಿಸಿದರು.

ತಾಲ್ಲೂಕಿನ ಸಿದ್ಧಾಪುರದ ಕೆರೆಗೆ ಹೇಮಾವತಿ ನೀರು ಹರಿದ ಹಿನ್ನೆಲೆಯಲ್ಲಿ ಶನಿವಾರ ಗಂಗಾಪೂಜೆ ನೇರವೇರಿಸಿ ಮಾತನಾಡಿದರು.

ಎತ್ತಿನಹೊಳೆ ಯೋಜನೆಯಿಂದ ಇನ್ನೆರಡು ವರ್ಷಗಳಲ್ಲಿ ತಾಲ್ಲೂಕಿನ 45 ಕೆರೆಗಳಿಗೆ ನೀರು ಹರಿಸಲಾಗುವುದು. ಆದ್ದರಿಂದ ನೀರು ಹರಿಸುವ ಮುನ್ನ ಕೆರೆ ದುರಸ್ತಿ ಕಾರ್ಯಕ್ಕೆ ರಾಜ್ಯ ಸರ್ಕಾರ ₹302 ಕೋಟಿ ಮೊತ್ತದ ಕಾಮಗಾರಿಗಳಿಗೆ ಅನುಮೋದನೆ ನೀಡಿದೆ ಎಂದರು.

ADVERTISEMENT

ರಾಜ್ಯದಲ್ಲಿ ಉತ್ತಮ ಮಳೆಯಾಗಿ ಎಲ್ಲಾ ಜಲಾಶಯಗಳು ತುಂಬಿವೆ. ಅದೇ ರೀತಿ ಹೇಮಾವತಿ ಜಲಾಶಯ ಸಂಪೂರ್ಣವಾಗಿ ತುಂಬಿ ಹರಿಯುತ್ತಿದ್ದು, ತುಮಕೂರು ಸೇರಿದಂತೆ ಎಲ್ಲಾ ನಾಲೆಗೆ ಹೇಮಾವತಿ ನೀರು ಹರಿಸಲಾಗುತ್ತಿದೆ. ಪಟ್ಟಣದ ಜನತೆಗೆ ಕುಡಿಯುವ ನೀರು ಒದಗಿಸುವುದಕ್ಕೆ ಸಿದ್ಧಾಪುರ ಕೆರೆಗೆ ಹೇಮಾವತಿ ನೀರನ್ನು ಸಂಪೂರ್ಣವಾಗಿ ತುಂಬಿಸಲಾಗುವುದು. ಡಿಸೆಂಬರ್‌ವರೆಗೂ ಹೇಮಾವತಿ ನೀರು ಹರಿಸಲಾಗುವುದು ಎಂದರು.

ವಸಂತನರಾಸಪುರ ಸಮೀಪ ಸಿದ್ಧಾಪುರ ಕೆರೆಗೆ ಬರುವ ಹೇಮಾವತಿ ಪೈಪ್‌ಲೈನ್ ಅನ್ನು ಕೆಐಡಿಬಿ ಅವರು ಹೊಡೆದು ಹಾಕಿದ್ದರಿಂದ ಸಿದ್ಧಾಪುರ ಕೆರೆಗೆ ಹೇಮಾವತಿ ನೀರು ಹರಿಸಲು ಸಾಧ್ಯವಾಗಲಿಲ್ಲ. ಅದನ್ನು ಪುರಸಭೆ ಅಧಿಕಾರಿಗಳು ದುರಸ್ತಿ ಕಾರ್ಯ ಮಾಡಿದ್ದಾರೆ. ಈಗ ಒಂದು ಮೋಟರ್‌ನಿಂದ ನೀರು ಬರುತ್ತಿದ್ದು, ಇನ್ನೆರಡು ದಿನಗಳಲ್ಲಿ ಎರಡು ಮೋಟರ್‌ಗಳಿಂದ ಹೇಮಾವತಿ ನೀರು ಹರಿಸಲಾಗುವುದು ಎಂದರು.

ಉಪವಿಭಾಗಾಧಿಕಾರಿ ಗೋಟೋರು ಶಿವಪ್ಪ, ತಹಶೀಲ್ದಾರ್ ಸಿಗ್ಮತ್ ಉಲ್ಲಾ, ತಾ.ಪಂ.ಇಒ ಲಕ್ಷ್ಮಣ್, ಪುರಸಭೆ ಮಾಜಿ ಅಧ್ಯಕ್ಷರಾದ ಎಂ.ಕೆ.ನಂಜುಂಡಯ್ಯ, ಎನ್.ಗಂಗಣ್ಣ , ಮೊಹಮ್ಮದ್ ಅಯೂಬ್, ಸದಸ್ಯರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.