
ಗುಬ್ಬಿಯ ಚನ್ನಬಸವೇಶ್ವರ ದೇವಾಲಯ ಮುಂಭಾಗದ ಖಾಲಿ ಜಾಗದಲ್ಲಿ ಅಡಿಕೆ ಸಿಪ್ಪೆ ಸುರಿಯಲಾಗಿದೆ
ಗುಬ್ಬಿ: ತಾಲ್ಲೂಕಿನಲ್ಲಿ ಅಡಿಕೆ ಕೊಯ್ಲು ಪ್ರಾರಂಭವಾಗಿದ್ದು, ಅಡಿಕೆ ಸಿಪ್ಪೆಯ ವಿಲೇವಾರಿ ವ್ಯವಸ್ಥಿತವಾಗಿ ಆಗುತ್ತಿಲ್ಲ.
ರೈತರು ಹಾಗೂ ಚೇಣೀದಾರರು ಅಡಿಕೆ ಸಿಪ್ಪೆಗಳನ್ನು ಹೆದ್ದಾರಿ ಬದಿ, ರಸ್ತೆ ಪಕ್ಕ, ಖಾಲಿ ಜಾಗ ಹಾಗೂ ಅರಣ್ಯದ ಅಂಚಿನಲ್ಲಿ ಲೋಡುಗಟ್ಟಲೆ ತಂದು ಸುರಿಯುತ್ತಿದ್ದಾರೆ.
ಸಣ್ಣ ರೈತರು ಹೇಗೊ ವಿಲೇವಾರಿ ಮಾಡಿಕೊಂಡರೆ, ದೊಡ್ಡ ರೈತರು, ಚೀಣಿದಾರರು ಸಿಪ್ಪೆ ವಿಲೇವಾರಿಗೆ ಹರಸಾಹಸ ಪಡುವಂತಾಗಿದೆ. ಅಡಿಕೆ ಸಿಪ್ಪೆಯನ್ನು ಗೊಬ್ಬರವನ್ನಾಗಿ ಬಳಸಿಕೊಳ್ಳುವ ಬದಲು ಒಣಗಿದ ನಂತರ ಬೆಂಕಿ ಹಚ್ಚುವುದನ್ನು ರೂಢಿಸಿಕೊಂಡಿದ್ದಾರೆ. ಅಡಿಕೆ ಸಿಪ್ಪೆಗೆ ಹಚ್ಚಿದ ಬೆಂಕಿಯ ಹೊಗೆಯಿಂದ ವಾಯುಮಾಲಿನ್ಯ ಹೆಚ್ಚಾಗುತ್ತಿರುವ ಜೊತೆಗೆ ಬೆಂಕಿ ಅನಾಹುತಗಳು ಸಂಭವಿಸುತ್ತಿವೆ.
ರಸ್ತೆ ಬದಿ ಹಾಗೂ ಅರಣ್ಯ ಪ್ರದೇಶಗಳ ಮರ, ಗಿಡಗಳು ಸುಟ್ಟು ಹೋಗುತ್ತಿರುವ ಜೊತೆಗೆ ಪೊದೆ ಹಾಗೂ ಮರಗಳಲ್ಲಿ ಇರುವ ಪಕ್ಷಿ, ಪ್ರಾಣಿಗಳಿಗೂ ತೊಂದರೆಯಾಗುತ್ತಿದೆ.
ಅಡಿಕೆ ಸಿಪ್ಪೆಗಳಿಗೆ ಹಚ್ಚುವ ಬೆಂಕಿಯಿಂದ ಹೊಗೆ ಎಲ್ಲೆಡೆ ಅವರಿಸುತ್ತಿರುವುದು ಸುತ್ತಲಿನ ಪರಿಸರದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಹೊಗೆ ಹೆಚ್ಚಾದಂತೆ ಸುತ್ತಲಿನ ಜೇನುಗಳು ಇಲ್ಲವಾಗುತ್ತಿವೆ. ಇದರಿಂದಾಗಿ ಜೇನುತುಪ್ಪ ಹಾಗೂ ಪರಾಗಸ್ಪರ್ಶ ಕುಂಠಿತಗೊಂಡು ಬೆಳೆಗಳ ಇಳುವರಿಯೂ ಕಡಿಮೆಯಾಗುತ್ತಿದೆ. ಅಧಿಕ ಹೊಗೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿ ಅನೇಕ ರೋಗಗಳಿಗೂ ಕಾರಣವಾಗುತ್ತಿದೆ.
ತಾಲ್ಲೂಕಿನಲ್ಲಿ ನೀರಾವರಿ ಅನುಕೂಲ ಹೆಚ್ಚಾದಂತೆ ರೈತರು ಅಡಿಕೆ ಬೆಳೆಯತ್ತ ಗಮನಹರಿಸುತ್ತಿದ್ದಾರೆ. ಕಲ್ಪತರು ನಾಡಿನ ಭಾಗವಾಗಿದ್ದ ಗುಬ್ಬಿ ತಾಲ್ಲೂಕು ಇತ್ತೀಚಿಗೆ ಅಡಿಕೆಯ ಬಿಡಾಗುತ್ತಿದೆ. ಅಡಿಕೆಯ ನಿರಂತರ ಬೆಲೆ ಏರಿಕೆ ಬೆಳೆಗಾರರ ಉತ್ಸಾಹ ಹೆಚ್ಚಿಸುತ್ತಿದೆ.
ತಾಲ್ಲೂಕಿನಲ್ಲಿ 30 ಸಾವಿರ ಹೆಕ್ಟೇರ್‌ಗೂ ಹೆಚ್ಚಿನ ಪ್ರದೇಶದಲ್ಲಿ ಅಡಿಕೆ ಬೆಳೆ ಇದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಅಧಿಕವಾಗಲಿದೆ. ಇದು ಬಹು ಬೆಳೆ ಕೃಷಿಯ ಮೇಲೆ ವ್ಯತಿರಿಕ್ತ ಪರಿಣಾಮವನ್ನುಂಟು ಮಾಡುವುದು. ಆಹಾರ ಧಾನ್ಯಗಳ ಉತ್ಪಾದನೆ ಕಡಿಮೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಅಡಿಕೆ ಸಿಪ್ಪೆಯಿಂದ ಉತ್ತಮ ಗೊಬ್ಬರ ತಯಾರಿಸುವತ್ತ ರೈತರು ಗಮನಹರಿಸಬೇಕು. ಇಲ್ಲವಾದಲ್ಲಿ ಸಿಪ್ಪೆ ವಿಲೇವಾರಿಯೇ ಸವಾಲಾಗಿ ಪರಿಣಮಿಸಲಿದೆ. ಭವಿಷ್ಯದ ಸಮಸ್ಯೆ ಅರಿತು ಈಗಲೇ ಎಚ್ಚೆತ್ತುಕೊಂಡರೆ ಅನಾಹುತ ತಡೆಯಲು ಸಾಧ್ಯ ಎನ್ನುತ್ತಾರೆ ಸಾರ್ವಜನಿಕರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.