ADVERTISEMENT

ಪಾವಗಡ | ಸರಗಳ್ಳರ ಬಂಧನ: ಜಾಮೀನು ಅರ್ಜಿ ವಜಾ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2024, 14:30 IST
Last Updated 11 ಸೆಪ್ಟೆಂಬರ್ 2024, 14:30 IST
ಕಳ್ಳತನ (ಪ್ರಾತಿನಿಧಿಕ ಚಿತ್ರ)
ಕಳ್ಳತನ (ಪ್ರಾತಿನಿಧಿಕ ಚಿತ್ರ)   

ಪಾವಗಡ: ಪಟ್ಟಣದ ಪೆನುಗೊಂಡ ರಸ್ತೆಯ ಅಂಗಡಿ ಬಳಿ ಬಂದು ಸಕ್ಕರೆ ಕೇಳುವ ನೆಪದಲ್ಲಿ ಮಹಿಳೆಯೊಬ್ಬರ ಚಿನ್ನದ ಸರ ಕಳವು ಮಾಡಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಕಳೆದ ಜೂನ್ 18ರಂದು ದಿನಸಿ ಅಂಗಡಿಗೆ ಬಂದು ದಿನಸಿ ಕೊಳ್ಳುವ ನೆಪದಲ್ಲಿ 30 ಗ್ರಾಂ ಚಿನ್ನದ ಸರ ಕದ್ದು ಕಳ್ಳರು ದ್ವಿಚಕ್ರ ವಾಹನದಲ್ಲಿ ಪರಾರಿಯಾಗಿದ್ದರು. ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪಟ್ಟಣದ ಚಳ್ಳಕೆರೆ ಕ್ರಾಸ್ ಬಳಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಮಹಾರಾಷ್ಟ್ರ ಮೂಲದ ಹಸನ್ ಆಲಿ ಮತ್ತು ಮಹಮ್ಮದ್ ಅಲಿ ಇರಾನಿ ಅವರನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದಾಗ ಸರಗಳವು ಮಾಡಿರುವುದು ತಿಳಿದಿದೆ.

ADVERTISEMENT

ಆರೋಪಿಗಳು ಒಂಟಿ ಮಹಿಳೆಯನ್ನು ಗುರಿಯಾಗಿಸಿಕೊಂಡು ಸರಗಳ್ಳತನ ಮಾಡುವುದು, ಒಂಟಿ ವೃದ್ಧ ಮಹಿಳೆಯರನ್ನು ಯಾಮಾರಿಸಿ ಅವರಿಂದ ಬಂಗಾರದ ಸರಗಳನ್ನು ಬಿಚ್ಚಿಸಿಕೊಂಡು ಪರಾರಿಯಾಗುತ್ತಿದ್ದರು ಎನ್ನುವುದು ವಿಚಾರಣೆ ವೇಳೆ ತಿಳಿದಿದೆ.

ಆರೋಪಿಗಳಿಂದ 204 ಗ್ರಾಂ ತೂಕದ ಒಡವೆಗಳನ್ನು ಪೊಲೀಸ್ ಇನ್‌ಸ್ಪೆಕ್ಟರ್ ಸುರೇಶ್ ನೇತೃತ್ವದ ತಂಡ ವಶಪಡಿಸಿಕೊಂಡಿದೆ.

ಜಾಮೀನು ಅರ್ಜಿ ವಜಾ: ಆರೋಪಿಗಳ ವಿರುದ್ಧ ವಿವಿಧ ಠಾಣೆಗಳಲ್ಲಿ 25ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದು, ಆರೋಪಿಗಳು ಪಟ್ಟಣದ ನ್ಯಾಯಾಲಯಕ್ಕೆ ಜಾಮೀನು ಅರ್ಜಿ ಸಲ್ಲಿಸಿದ್ದರು.

ನ್ಯಾಯಾಧೀಶೆ ಬಿ. ಪ್ರಿಯಾಂಕ ಅವರು ಜಾಮೀನು ಅರ್ಜಿಯನ್ನು ವಜಾ ಮಾಡಿದ್ದಾರೆ.

ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ವಕೀಲ ಜಿ.ಎಚ್. ಸಣ್ಣೀರಪ್ಪ ವಾದ ಮಂಡಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.