ADVERTISEMENT

ಸುಜ್ಞಾನದೆಡೆಗೆ ಕರೆದೊಯ್ಯುವ ಕಲೆ: ಡಾ.ಕವಿತಾಕೃಷ್ಣ

ಕಲಾರತ್ನ ಚನ್ನಬಸಯ್ಯಗುಬ್ಬಿ ಪ್ರಶಸ್ತಿ ಪ್ರದಾನ ಸಮಾರಂಭ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2018, 15:32 IST
Last Updated 23 ಅಕ್ಟೋಬರ್ 2018, 15:32 IST
ಕಿರುತೆರೆ ನಟ ಎಂ.ಶ್ರೀನಿವಾಸ್ ಅವರಿಗೆ ಕಲಾರತ್ನ ಚನ್ನಬಸಯ್ಯಗುಬ್ಬಿ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು
ಕಿರುತೆರೆ ನಟ ಎಂ.ಶ್ರೀನಿವಾಸ್ ಅವರಿಗೆ ಕಲಾರತ್ನ ಚನ್ನಬಸಯ್ಯಗುಬ್ಬಿ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು   

ತುಮಕೂರು: ಕಲೆಯು ಮಾನವನನ್ನು ಕತ್ತಲಿಂದ ಬೆಳಕಿನೆಡೆಗೆ, ಮೃತ್ಯು ಮುಖದಿಂದ ಅಮೃತತ್ವದ ಕಡೆಗೆ, ಅಜ್ಞಾನದಿಂದ ಸುಜ್ಞಾನದೆಡೆಗೆ ಕೊಂಡೊಯ್ಯಬಲ್ಲದು ಎಂದು ವಿದ್ಯಾವಾಚಸ್ಪತಿ ಡಾ.ಕವಿತಾಕೃಷ್ಣ ಅಭಿಪ್ರಾಯಪಟ್ಟರು.

ನಗರದ ಕ್ಯಾತಸಂದ್ರದಲ್ಲಿರುವ ಕವಿತಾಕೃಷ್ಣ ಸಾಹಿತ್ಯ ಮಂದಿರದಲ್ಲಿ ಆಯೋಜಿಸಿದ್ದ ರಂಗಭೂಮಿ- ಬೆಳ್ಳಿತೆರೆ- ಕಿರುತೆರೆ ನಟ ಎಂ.ಶ್ರೀನಿವಾಸ್ ಅವರಿಗೆ ಕಲಾರತ್ನ ಚನ್ನಬಸಯ್ಯಗುಬ್ಬಿ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕಾರ್ಯಕ್ರಮ ಉದ್ಘಾಟಿಸಿದ ಕಿರುತೆರೆಯ ನಿರ್ದೇಶಕ ಎಂ.ಭಾರತೀಶ್ ಮಾತನಾಡಿ, ’ಇಂದು ಕಿರುತೆರೆ ಬಹು ಜನಪ್ರಿಯ ಮಾಧ್ಯಮವಾಗಿದೆ. ತನ್ಮೂಲಕ ಸಮಾಜ ಸ್ವಾಸ್ಥ್ಯವನ್ನು ಕಾಪಾಡುವ ಕೆಲಸ ಮಾಡಬೇಕಾಗಿದೆ. ಕಲಾವಿದ ಎಂ.ಶ್ರೀನಿವಾಸ್ ಕಿರುತೆರೆ ಮತ್ತು ರಂಗಭೂಮಿಗೆ ಸಂದಾಯ ಮಾಡಿದ ಸೇವೆ ಅನನ್ಯ. ಕಲಾವಿದರನ್ನು ಗೌರವಿಸಿದರೆ ಇಡೀ ಸಂಸ್ಕೃತಿಯನ್ನು ಗೌರವಿಸಿದಂತೆ’ ಎಂದು ನುಡಿದರು.

ADVERTISEMENT

ಅಮರೇಶ್ವರ ವಿಜಯ ನಾಟಕ ಮಂಡಲಿಯ ಮಾಲೀಕರಾದ ರಂಗತಜ್ಞ, ಕಲಾರತ್ನ ಚನ್ನಸಬಯ್ಯಗುಬ್ಬಿ ಅವರು ರಂಗಭೂಮಿಯ ಹವ್ಯಾಸಿ ನಟ ಎಂ.ಶ್ರೀನಿವಾಸ್ ಅವರಿಗೆ ಶಾಲು ಹೊದಿಸಿ, ಮೈಸೂರು ಪೇಟ ಧರಿಸಿ ಡಾ.ರಾಜ್‌ಕುಮಾರ್ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ರೈತ, ಸೈನಿಕರಂತೆಯೇ ಕಲಾವಿದರೂ ಕೂಡ ನಾಡಭಟರು. ಕಲಾವಿದರ ಪೋಷಣೆಗೆ ಸರ್ಕಾರ ಮುಂದಾಗಬೇಕು ಎಂದು ಕರೆ ನೀಡಿದರು.

ಪ್ರಶಸ್ತಿ ಸ್ವೀಕರಿಸಿದ ಎಂ.ಶ್ರೀನಿವಾಸ್, ಹೂವ ತರುವರ ಮನೆಗೆ ಹುಲ್ಲನೆಂದೂ ತಾರೆನು, ಕವಿ ಕಲಾವಿದರನ್ನು ಆತ್ಮೀಯತೆಯಿಂದ ಗೌರವಿಸುವ ಕವಿತಾಕೃಷ್ಣ ಸಾಹಿತ್ಯ ಮಂದಿರ ನಮ್ಮ ಜಿಲ್ಲೆಯ ಮಾತೃಮಂದಿರವಾಗಿದೆ ಎಂದು ಕೃತಜ್ಞತೆ ಸಲ್ಲಿಸಿದರು.

ಸಾಹಿತ್ಯ ಮಂದಿರದ ಅಧ್ಯಕ್ಷ ಕೆ.ವಿ.ಆರ್.ಅಯ್ಯಂಗಾರ್ ಮತ್ತು ಕನ್ನಡ ಜ್ಯೋತಿ ಯುವ ವೇದಿಕೆ ಗೌರವಾಧ್ಯಕ್ಷ ಕೆ.ಎಲ್.ನಟರಾಜ್ ಅಭಿನಂದನಾ ನುಡಿಗಳನ್ನಾಡಿದರು.

ಕೈವಾರ ಯೋಗಿ ಯತೀಂದ್ರ ಪತ್ತಿನ ಸಹಕಾರ ಸಂಘದ ದಿನೇಶ್‌ಬಾಬು, ಲೇಖಕಿ ಕಮಲಾ ಸುಬ್ಬರಾವ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.