ಕುಣಿಗಲ್: ತಾಲ್ಲೂಕಿನ ಎಡೆಯೂರು ಹೋಬಳಿ ಜಿಡ್ಡಿಗೆರೆ ಗ್ರಾಮದಲ್ಲಿ ತೋಟದ ಕೆಲಸಕ್ಕೆಂದು ಬಂದಿದ್ದ ಭೂತರಾಜು ಮಾಲೀಕ ಕೃಷ್ಣ ಅವರ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿ ₹55 ಸಾವಿರ ದೋಚಿದ್ದಲ್ಲದೆ, ಬೆದರಿಸಿ ಬ್ಯಾಂಕ್ ಖಾತೆಗೆ ₹1 ಲಕ್ಷ ವರ್ಗಾವಣೆ ಮಾಡಿಸಿಕೊಂಡು ಪರಾರಿಯಾಗಿದ್ದಾನೆ.
ಜಿಡ್ಡಿಗೆರೆ ಗ್ರಾಮದ ಕೃಷ್ಣ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಗ್ರಾಮದಲ್ಲಿ ತೋಟದ ಮನೆ, ಕುರಿ ಶೆಡ್ ಮತ್ತು ಕೋಳಿ ಫಾರಂ ಹೊಂದಿದ್ದಾರೆ. ಸ್ನೇಹಿತರ ಮೂಲಕ ಪರಿಚಯವಾಗಿದ್ದ ಕೊರಟಗೆರೆ ತಾಲ್ಲೂಕಿನ ಭೂತರಾಜು ಸೆಪ್ಟೆಂಬರ್ 8ರಂದು ಕೆಲಸಕ್ಕೆ ಸೇರಿದ್ದ.
ಸೆಪ್ಟೆಂಬರ್ 11ರಂದು ರಾತ್ರಿ ಕೃಷ್ಣ ಅವರು ತೋಟದ ಮನೆಯಲ್ಲಿರುವಾಗ ಭೂತರಾಜು ಮಚ್ಚಿನಿಂದ ಹಲ್ಲೆ ನಡೆಸಿದ್ದಾನೆ. ಜೇಬಿನಲ್ಲಿದ್ದ ₹55 ಸಾವಿರ ದೋಚಿದ್ದಲ್ಲದೆ, ₹2 ಲಕ್ಷವನ್ನು ಬ್ಯಾಂಕ್ ಖಾತೆಗೆ ವರ್ಗಾಯಿಸುವಂತೆ ಬೆದರಿಕೆ ಹಾಕಿದ್ದಾನೆ. ಆಗ ಕೃಷ್ಣ ಅವರು ₹1 ಲಕ್ಷವನ್ನು ವರ್ಗಾಯಿಸಿದ್ದಾರೆ. ಮತ್ತೆ ಹಣಕ್ಕೆ ಬೇಡಿಕೆ ಇಟ್ಟು ಬೆದರಿಸುವಾಗ ತೀವ್ರ ಪ್ರತಿರೋಧವೊಡ್ಡಿದ ಕೃಷ್ಣ ಅವರು ಭೂತರಾಜುನ್ನು ಮನೆಯಿಂದ ಹೊರದೂಡಿ, ಸ್ನೇಹಿತರಿಗೆ ಕರೆ ಮಾಡಿದಾಗ ಭೂತರಾಜು ಪರಾರಿಯಾಗಿದ್ದಾನೆ.
ಸ್ನೇಹಿತರಾದ ಅಭಿಷೇಕ್ ಮತ್ತು ಖಲೀಲ್ ಬಂದು ತೀವ್ರವಾಗಿಗಾಯಗೊಂಡಿದ್ದ ಕೃಷ್ಣ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಕೃಷ್ ಅವರ ಹೇಳಿಕೆ ಪಡೆದಿರುವ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.