ADVERTISEMENT

ಮುದ್ದಹನುಮೇಗೌಡರಿಗೆ ಟಿಕೆಟ್‌ ಕೊಡಿಸಲು ಪ್ರಯತ್ನ: ಸಚಿವ ಕೆ.ಎನ್‌.ರಾಜಣ್ಣ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2024, 4:45 IST
Last Updated 26 ಫೆಬ್ರುವರಿ 2024, 4:45 IST
ಸಚಿವ ಕೆ.ಎನ್.ರಾಜಣ್ಣ
ಸಚಿವ ಕೆ.ಎನ್.ರಾಜಣ್ಣ   

ತುಮಕೂರು: ಜಿಲ್ಲೆಯ ಎಲ್ಲ ಮುಖಂಡರು ಸೇರಿ ಮಾಜಿ ಸಂಸದ ಮುದ್ದಹನುಮೇಗೌಡ ಅವರನ್ನು ಕಾಂಗ್ರೆಸ್‌ಗೆ ಸೇರಿಸಿಕೊಳ್ಳಲಾಗಿದೆ. ಅವರಿಗೆ ಟಿಕೆಟ್ ಕೊಡಿಸಲು ಎಲ್ಲರು ಪ್ರಯತ್ನಿಸುತ್ತಾರೆ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಹೇಳಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರ ಜತೆ ಮಾತನಾಡಿ, ಮುದ್ದಹನುಮೇಗೌಡ ಲೋಕಸಭಾ ಟಿಕೆಟ್ ಕೊಡಬೇಕು ಅಂತ ಕಾಂಗ್ರೆಸ್‌ಗೆ ಬಂದಿಲ್ಲ. ಯಾವುದೇ ಷರತ್ತು ಇಲ್ಲದೆ ಪಕ್ಷ ಸೇರ್ಪಡೆಯಾಗಿದ್ದಾರೆ. ಮುಂದೆ ಜಿಲ್ಲೆಯ ಎಲ್ಲ ಮುಖಂಡರು ಸೇರಿ ಟಿಕೆಟ್ ನೀಡುವ ಬಗ್ಗೆ ತೀರ್ಮಾನಿಸಲಾಗುವುದು ಎಂದರು.

ಎಲ್ಲ ಆಕಾಂಕ್ಷಿತರು ಟಿಕೆಟ್ ಕೇಳುತ್ತಾರೆ. ಅದರಲ್ಲಿ ತಪ್ಪೇನು ಇಲ್ಲ. ಅಂತಿಮವಾಗಿ ಹೈಕಮಾಂಡ್‌ನವರು ನಿರ್ಣಯ ತೆಗೆದುಕೊಳ್ಳುತ್ತಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಎಲ್ಲರ ಅಭಿಪ್ರಾಯ ಪಡೆದು ಟಿಕೆಟ್ ನೀಡುತ್ತಾರೆ. ಮಾ.10ರ ಒಳಗೆ ಟಿಕೆಟ್‌ ಘೋಷಣೆಯಾಗಬಹುದು ಎಂಬ ನಿರೀಕ್ಷೆ ಇದೆ ಎಂದು ತಿಳಿಸಿದರು.

ADVERTISEMENT
ಹಾಲಪ್ಪ ವಿರುದ್ಧ ವಾಗ್ದಾಳಿ
ಲೋಕಸಭಾ ಟಿಕೆಟ್‌ ಆಕಾಂಕ್ಷಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮುರಳೀದರ್‌ ಹಾಲಪ್ಪಗೆ ಸಹಕಾರ ಸಚಿವ ಕೆ.ಎನ್‌.ರಾಜಣ್ಣ ವಿರೋಧ ವ್ಯಕ್ತಪಡಿಸಿದ್ದಾರೆ. ಮುದ್ದಹನುಮೇಗೌಡರಿಗೆ ಟಿಕೆಟ್ ನೀಡಲು ಹಾಲಪ್ಪ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂಬ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ರಾಜಣ್ಣ ‘ಯಾರ್‌ ರೀ ಅವನು ಯಾರಿಗೆ ಮತ ಹಾಕಿಸಿದ್ದಾನೆ. ಮಧುಗಿರಿಯಲ್ಲಿ ನಾನು ಐದು ಚುನಾವಣೆಯಲ್ಲಿ ಸ್ಪರ್ಧಿಸಿದ್ದೇನೆ. ಐದು ಚುನಾವಣೆಗಳಲ್ಲಿ ಒಂದು ಮತ ಹಾಕಿಸಿದ್ದಾನಾ ಕೇಳಿ’ ಎಂದು ಹಾಲಪ್ಪ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.