ADVERTISEMENT

ಮಧುಗಿರಿ| ಕಾಕಡ ಹೂವಿನ ಅಧಿಪತಿ ಬಡವನಹಳ್ಳಿ ಮಂಡಿ: ಹೊರ ರಾಜ್ಯಗಳಿಗೂ ರವಾನೆ

ಗಂಗಾಧರ್ ವಿ ರೆಡ್ಡಿಹಳ್ಳಿ
Published 1 ಫೆಬ್ರುವರಿ 2026, 7:16 IST
Last Updated 1 ಫೆಬ್ರುವರಿ 2026, 7:16 IST
ಬಡವನಹಳ್ಳಿ ಮಂಡಿಯಲ್ಲಿ ಬೆಳೆಗಾರರಿಂದ ಹೂವು ಖರೀದಿಸುತ್ತಿರುವ ವ್ಯಾಪಾರಿ
ಬಡವನಹಳ್ಳಿ ಮಂಡಿಯಲ್ಲಿ ಬೆಳೆಗಾರರಿಂದ ಹೂವು ಖರೀದಿಸುತ್ತಿರುವ ವ್ಯಾಪಾರಿ   

ಮಧುಗಿರಿ: ತಾಲ್ಲೂಕಿನ ದೊಡ್ಡೇರಿ ಹೋಬಳಿಯ ಬಡವನಹಳ್ಳಿ ಹೂವಿನ ಮಂಡಿ ರಾಜ್ಯವಲ್ಲದೇ, ಹೊರರಾಜ್ಯಗಳಲ್ಲೂ ಹೆಸರುವಾಸಿಯಾಗಿದೆ.

ಮಂಡಿಯಲ್ಲಿ ಕಾಕಡ ಜತೆಗೆ ವಿವಿಧ ಹೂವುಗಳು ಸದಾ ದೊರಕುತ್ತವೆ. ಬಡವನಹಳ್ಳಿ ಪೊಲೀಸ್ ಠಾಣೆ ಪಕ್ಕದಲ್ಲಿರುವ ಹೂವಿನ ಮಂಡಿ ಜತೆಗೆ ತರಕಾರಿ ಮಾರುಕಟ್ಟೆ ಚಿಕ್ಕದಾಗಿದೆ. 2016-17ರಲ್ಲಿ ಬಡವನಹಳ್ಳಿ ಚೆಕ್‌ಪೋಸ್ಟ್ ಸಮೀಪದಲ್ಲಿ ಹೂ ಬೆಳೆಗಾರರು ಮತ್ತು ವರ್ತಕರಿಗೆ ಅನುಕೂಲವಾಗಲೆಂದು ಎಪಿಎಂಸಿಯಿಂದ ಮಾರುಕಟ್ಟೆ ನಿರ್ಮಾಣ ಮಾಡಿಕೊಟ್ಟಿದ್ದರು. ಆದರೆ ಈ ಮಂಡಿ ಈಗ ಪಾಳು ಬಿದ್ದಿದೆ. 

ಕಾಕಡ ಹೂವಿಗೆ ಹೆಸರುವಾಸಿ: ಈ ಊರಿನಲ್ಲಿ ತಿಗಳ ಜನಾಂಗ ಹಾಗೂ ಇತರೆ ಜಾತಿಯವರು ಕಾಕಡ ಗಿಡ ಬೆಳೆಸುವುದರ ಜತೆಗೆ ಆ ಹೂವನ್ನು ಕಟ್ಟಿ ಮಾರಾಟ ಮಾಡುತ್ತಿದ್ದರು.ನಂತರ ಮೊಗ್ಗನ್ನು ಬಿಡಿಸಿ ವ್ಯಾಪಾರ ಮಾಡಲು ಶುರು ಮಾಡಿದರು. ಮೊದಲಿಗೆ ಬಡವನಹಳ್ಳಿ ತೇರಿನ ಬೀದಿಯ ರಂಗನಾಥ ರಥೋತ್ಸವ ನಡೆಯುವ ಬೀದಿಯಲ್ಲಿ ಮನೆಗಳ ಮುಂದೆ ವ್ಯಾಪಾರ ಮಾಡಲು ಶುರು ಮಾಡಿದರು.

ADVERTISEMENT

ಇದು ಮುಂದೆ ಹೆಚ್ಚು ವ್ಯಾಪಾರ ಕೇಂದ್ರವಾಗಿದ್ದರಿಂದ ಗ್ರಾಮ ಪಂಚಾಯಿತಿಯವರು ವ್ಯಾಪಾರಕ್ಕಾಗಿಯೇ ನಿರ್ದಿಷ್ಟ ಜಾಗವನ್ನು ಸೀಮಿತಗೊಳಿಸಿದರು. ರೈತರು ಕಾಕಡ ಜತೆಗೆ ಸೇವಂತಿಗೆ, ಬಟನ್ಸ್ ಬೆಳೆಯಲು ಶುರುಮಾಡಿದರು. ನೀರಾವರಿ ಇರುವರುತು ಒಬ್ಬೊಬ್ಬರು 50ರಿಂದ 60 ಕೆ.ಜಿ ಕಾಕಡ ಮೊಗ್ಗು ಬೆಳೆಯುತ್ತಿದ್ದರು. ಇದರಿಂದ ಬೇರೆ ಬೆಳೆಗಳು ಕಡಿಮೆಯಾಗಿ ಹೂವಿನ ಬೆಳೆ ಅಧಿಕವಾಗಿ ಮುಂದೆ ವಾಣಿಜ್ಯ ಬೆಳೆಯಾಗಿ ರೂಪುಗೊಂಡಿತು.

ಮೊದಲಿಗೆ ಬಿಡಿ ಹೂಗಳನ್ನು ಮಂಗಳೂರು, ಮಹಾರಾಷ್ಟ್ರದ ಕೊಲ್ಲಾಪುರ, ಪೂನಾ, ಮುಂಬೈ, ಆಂಧ್ರಪ್ರದೇಶದ ಹಿಂದೂಪುರ, ಅನಂತಪುರ, ಕರ್ನೂಲ್, ತಮಿಳುನಾಡಿನ ಕೊಯಮತ್ತೂರು, ಮಧುರೆ ಹೀಗೆ ಹಲವಾರು ರಾಜ್ಯಗಳಿಗೆ ಕಳಿಸುತ್ತಿದ್ದರು.

ಈ ಊರಿನಿಂದ ಕಾಕಡ ಹೂವು ದಿನಕ್ಕೆ ಸುಮಾರು ಸಾವಿರ ಕಿಲೋದಿಂದ 3000 ಕಿಲೋವರೆಗೂ ರವಾನೆಯಾಗುತ್ತಿದ್ದವು. ಮಲ್ಲೆ ಹೂವೂ ಕೂಡ ಸಾವಿರದಿಂದ ನಾಲ್ಕು ಸಾವಿರ ಕಿಲೋವರೆಗೂ ಹೊರ ರಾಜ್ಯಕ್ಕೆ ಹೋಗುತ್ತಿದ್ದವು. ಇದರ ಜೊತೆಗೆ ಕನಕಾಂಬರ ಹೂ ಕೂಡ 600 ಕೆ.ಜಿ ಯವರೆಗೂ ಹೋಗುತ್ತಿದ್ದವು. ಬಡವನಹಳ್ಳಿ‌ ಮಾರುಕಟ್ಟೆ ಬೆಳಗಿನ ಸಮಯದಲ್ಲಿ ಜಾತ್ರೆಯಂತೆಯೇ ಇರುತ್ತದೆ.

ಹಲವಾರು ವರ್ಷಗಳಿಂದಲೂ ಕೂಡ ಹೂವಿನ ವ್ಯಾಪಾರ ನಡೆದರೂ ಹೊರಗಡೆಯಿಂದ ಬರುವ ರೈತರಿಗೆ ಯಾವುದೇ ರೀತಿಯ ಮೋಸವಾಗುವುದಿಲ್ಲ. ಇಲ್ಲಿ ದಿನವೊಂದಕ್ಕೆ ₹15 ರಿಂದ ₹20 ಲಕ್ಷ ಹೂವಿನ ವಹಿವಾಟು ನಡೆಯುತ್ತದೆ ಎಂದು ಮಂಡಿ ವ್ಯಾಪಾರಿ ವೆಂಕಟರಾಜು ಮಾಹಿತಿ ನೀಡಿದರು.

ತಾಂತಂದಿರ ಕಾಲದಿಂದಲೂ ಹೂವಿನ ವ್ಯಾಪಾರ ಮಾಡುತ್ತಿದ್ದು ಇಲ್ಲಿ ದಳ್ಳಾಳಿಗಳ ಹಾವಳಿ ಕಡಿಮೆ. ಬೆಳೆಗಾರರು ದೊಡ್ಡೇರಿ ಹೋಬಳಿಯಲ್ಲದೇ, ಹೊರ ರಾಜ್ಯಗಳಿಂದಲೂ ಇಲ್ಲಿಗೆ ಬಂದು ವಹಿವಾಟು ನಡೆಸುತ್ತಾರೆ ಎಂದು ವ್ಯಾಪಾರಿ ದೇವರಾಜು ಹೇಳಿದರು.

ಮಾರುಕಟ್ಟೆಗೆ ಮಲ್ಲೆ ಹೂ, ಸೇವಂತಿಗೆ, ಸುಗಂಧರಾಜ, ಈಗೀಗ ಗುಲಾಬಿಯ ಬಗೆ ಬಗೆ ಬಣ್ಣದ ಹಾಗೂ ವಿವಿಧ ಜಾತಿಯ ಹೂಗಳು ಬಂದರೂ ಸಹ ಕಾಕಡ ಹೂವು ಬಡವನಹಳ್ಳಿ ಮಂಡಿಗೆ ಅಧಿಪತಿ ಇದ್ದಂತೆ. ಹೂವಿನ ವ್ಯಾಪಾರ ಇಲ್ಲಿನ ಬಹುತೇಕ ಮಹಿಳೆಯರಿಗೆ ಜೀವನಾಧಾರವಾಗಿದೆ ಎಂದು ಹೂವು ಕಟ್ಟುವ ನೂರ್ ಜಾನ್ ಹೇಳಿದರು.

ಇಲ್ಲಿಂದ ಹೆಚ್ಚು ಹೂವು ಕರ್ನಾಟಕವಲ್ಲದೇ, ಹೊರ ರಾಜ್ಯಗಳಿಗೆ ರವಾನೆಯಾಗುತ್ತಿದೆ. ಬೆಳೆಗಾರರಿಗೆ ಮತ್ತು ಮಾರಾಟಗಾರರಿಗೆ ಯಾವುದೇ ರೀತಿಯ ಮೋಸ-ವಂಚನೆ ಇಲ್ಲದೇ ವ್ಯಾಪಾರ ನ್ಯಾಯಯುತವಾಗಿ ನಡೆಯುತ್ತಿರುವುದೆ ಪ್ರಸಿದ್ಧಿಗೆ ಕಾರಣವಾಗಿದೆ ಎಂದು ಹೂವಿನ ಚೌಡಪ್ಪ ತಿಳಿಸಿದರು.

ಮಹಿಳೆಯರು ವ್ಯಾಪಾರಿಯಿಂದ ಕೊಂಡು ಹೂವು ಕಟ್ಟುತ್ತಿರುವುದು
ಬಡವನಹಳ್ಳಿ ಹೊರವಲಯದಲ್ಲಿ ಪಾಳುಬಿದ್ದಿರುವ ಮಾರುಕಟ್ಟೆ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.