ADVERTISEMENT

ಬಹ್ರಸಂದ್ರ ರಸ್ತೆ ಕಾಮಗಾರಿ: 3 ವರ್ಷವಾದರೂ ಮುಗಿಯದ ಕೆಲಸ; ಗ್ರಾಮಸ್ಥರ ಆಕ್ರೋಶ

ಟಿ.ಪ್ರಸನ್ನಕುಮಾರ್
Published 13 ಫೆಬ್ರುವರಿ 2024, 6:55 IST
Last Updated 13 ಫೆಬ್ರುವರಿ 2024, 6:55 IST
ಮಧುಗಿರಿ ತಾಲ್ಲೂಕು ಬ್ರಹ್ಮಸಂದ್ರ ಗ್ರಾಮದ ಸಮೀಪ ರಸ್ತೆಗೆ ಜಲ್ಲಿಕಲ್ಲು ಹರಡಿರುವುದು
ಮಧುಗಿರಿ ತಾಲ್ಲೂಕು ಬ್ರಹ್ಮಸಂದ್ರ ಗ್ರಾಮದ ಸಮೀಪ ರಸ್ತೆಗೆ ಜಲ್ಲಿಕಲ್ಲು ಹರಡಿರುವುದು   

ಮಧುಗಿರಿ: ತಾಲ್ಲೂಕಿನ ಬ್ರಹ್ಮಸಂದ್ರ ರಸ್ತೆ ಕಾಮಗಾರಿ ಪೂರ್ಣಗೊಳಿಸಲು ಇನ್ನೆಷ್ಟು ವರ್ಷಗಳು ಬೇಕು ಎಂದು ಅಧಿಕಾರಿಗಳು ಹಾಗೂ ಗುತ್ತಿಗೆದಾರರ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ತಾಲ್ಲೂಕಿನ ಎಂಡಿಆರ್-9 ರಸ್ತೆಯಿಂದ ಬ್ರಹ್ಮಸಂದ್ರ ಮಾರ್ಗವಾಗಿ ಎಸ್.ಎಚ್. 159 ರಸ್ತೆಯವರೆಗೂ ಅಭಿವೃದ್ಧಿ ಪಡಿಸಲು ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಿಂದ ಆಯ್ಕೆ ಮಾಡಿಕೊಳ್ಳಲಾಗಿದೆ. 5.11 ಕಿ.ಮೀ ಉದ್ದದ ರಸ್ತೆ ಅಭಿವೃದ್ಧಿಗೆ ₹4.14 ಕೋಟಿ ಅಂದಾಜಿಸಲಾಗಿದೆ. 2020ರ ಸೆ. 4ರಂದು ಕಾಮಗಾರಿ ಆರಂಭಿಸಿ, 2021 ಆ.3ರಂದು ಪೂರ್ಣಗೊಳಿಸಿ, ಐದು ವರ್ಷ ನಿರ್ವಹಣೆ ಮಾಡಬೇಕು ಹಾಗೂ 5 ಮತ್ತು 6ನೇ ವರ್ಷದಲ್ಲಿ ಮರು ಡಾಂಬರೀಕರಣ ಮಾಡಬೇಕು ಎಂದು ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯ ನಾಮಫಲಕ ಅಳವಡಿಸಲಾಗಿದೆ. ಆದರೆ ನಾಮಫಲಕದಂತೆ ರಸ್ತೆ ಅಭಿವೃದ್ಧಿ ಕಾರ್ಯ ನಡೆದಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.

ರಸ್ತೆ ಕಾಮಗಾರಿ ಪ್ರಾರಂಭವಾಗಿ ಹಲವು ವರ್ಷ ಕಳೆದರೂ ಸೇತುವೆ, ಚರಂಡಿ ಮತ್ತು ರಸ್ತೆ ಅಭಿವೃದ್ಧಿ ಬಾಕಿ ಉಳಿದಿರುವುದರಿಂದ ಗ್ರಾಮಸ್ಥರ ಸಂಚಾರಕ್ಕೆ ಕಿರಿಕಿರಿಯಾಗುತ್ತಿದೆ. ಎಂಜಿನಿಯರ್ ಮತ್ತು ಗುತ್ತಿಗೆದಾರರ ನಿರ್ಲಕ್ಷ್ಯದಿಂದಾಗಿ ವಾಹನ ಸವಾರರ ಸಂಚಾರಕ್ಕೆ ಸಮಸ್ಯೆಯಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.

ADVERTISEMENT

ಬ್ರಹ್ಮಸಂದ್ರ ಸಮೀಪದ ರಸ್ತೆಯಲ್ಲಿ ಹಲವು ವರ್ಷಗಳಿಂದ ಜನರು ದೂಳು ತಿನ್ನುತ್ತಾ ಬದುಕಬೇಕಾಗಿದೆ. ರಸ್ತೆಯಲ್ಲಿ ಹರಡಿದ ಜಲ್ಲಿಯಿಂದಾಗಿ ಸಂಚಾರಕ್ಕೂ ಹರಸಾಹಸ ಪಡಬೇಕು. ಜಲ್ಲಿಯನ್ನು ಸಕಾಲದಲ್ಲಿ ರೋಲ್‌ ಮಾಡಿ, ಸಮತಟ್ಟುಗೊಳಿಸದೇ ಇರುವ ಕಾರಣ ಜಲ್ಲಿ ಕಲ್ಲುಗಳು ಕಿತ್ತು ಬಂದು ರಸ್ತೆ ಬದಿವರೆಗೂ ಆವರಿಸಿವೆ. ವಾಹನ ಸಂಚಾರ ಮಾಡುವವರಿಗೆ ಹಾಗೂ ಪಾದಚಾರಿಗಳಿಗೂ ಸಮಸ್ಯೆಯಾಗುತ್ತಿದೆ.

ಭಾರಿ ವಾಹನಗಳು ಓಡಾಡುವಾಗ ಚಕ್ರಗಳಿಗೆ ಸಿಲುಕಿ ಕಲ್ಲುಗಳು ಸಿಡಿಯುತ್ತಿದ್ದು, ಸಣ್ಣ- ಪುಟ್ಟ ವಾಹನ ಸವಾರರು ಹಾಗೂ ಪಾದಚಾರಿಗಳು ಆತಂಕದಿಂದಲೇ ಸಂಚರಿಸಬೇಕಿದೆ. ದ್ವಿಚಕ್ರ ವಾಹನಗಳು ರಸ್ತೆ ಮಧ್ಯೆ ಸಂಚರಿಸುವ ಪರಿಸ್ಥಿತಿ ಇಲ್ಲ. ರಸ್ತೆ ಬದಿಯಲ್ಲಾದರೂ ವಾಹನ ಚಲಾಯಿಸೋಣವೆಂದರೆ ಜಲ್ಲಿ ಕಲ್ಲು ಹರಡಿಕೊಂಡು ಅಪಾಯ ಆಹ್ವಾನಿಸುತ್ತಿವೆ ಎಂದು ದೂರಿದರು.

ರಸ್ತೆಯಲ್ಲಿ ಜಲ್ಲಿ ಕಲ್ಲುಗಳು ಹರಡಿ ಹೋದ ಗುತ್ತಿಗೆದಾರ ಮತ್ತು ಎಂಜಿನಿಯರ್ ಮತ್ತೆ ಈ ಕಡೆ ಗಮನವನ್ನೇ ಹರಿಸಿಲ್ಲ. ಹಲವು ವರ್ಷಗಳಿಂದ ರಸ್ತೆ ಕಾಮಗಾರಿ ಮಾಡದೇ ನಿರ್ಲಕ್ಷ್ಯ ಮಾಡಿರುವ ಇಂಜಿನಿಯರ್ ಮತ್ತು ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಬೇಕು. ಶೀಘ್ರ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಮಧುಗಿರಿ ತಾಲ್ಲೂಕು ಬ್ರಹ್ಮಸಂದ್ರ ಗ್ರಾಮದ ಸಮೀಪ ಸೇತುವೆ ಕೆಲಸ ಬಾಕಿ ಉಳಿದಿದೆ
ಗ್ರಾಮಸ್ಥರಿಗೆ ಕಿರಿಕಿರಿ ಈ ಭಾಗದ ರಸ್ತೆ ಕಾಮಗಾರಿ ಪ್ರಾರಂಭ ಮಾಡಿ ವರ್ಷದೊಳಗೆ ಪೂರ್ಣ ಮಾಡಬೇಕಿತ್ತು. ಆದರೆ ಮೂರು ವರ್ಷ ಕಳೆದರೂ ಪೂರ್ಣಗೊಂಡಿಲ್ಲ. ಇದರಿಂದಾಗಿ ಗ್ರಾಮಸ್ಥರಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಸಹಕಾರ ಸಚಿವ ಕೆ.ಎನ್.ರಾಜಣ್ಣ ಗಮನ ಹರಿಸಿ ಈ ಭಾಗದ ರಸ್ತೆ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಬೇಕು.
ಸತ್ಯನಾರಾಯಣ ಬ್ರಹ್ಮಸಂದ್ರ ಎಂಜಿನಿಯರ್‌ ಗುತ್ತಿಗೆದಾರರ
ನಿರ್ಲಕ್ಷ್ಯ ಎಂಜಿನಿಯರ್ ಮತ್ತು ಗುತ್ತಿಗೆದಾರರ ನಿರ್ಲಕ್ಷ್ಯದಿಂದಾಗಿ ಹಲವು ವರ್ಷಗಳಿಂದ ಜನರಿಗೆ ಸಾಕಷ್ಟು ಸಮಸ್ಯೆಯಾಗುತ್ತಿದೆ. ನಿಗದಿತ ಸಮಯಕ್ಕೆ ರಸ್ತೆ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಇಲಾಖೆಯಿಂದ ನಾಮಫಲಕ ಅಳವಡಿಸಿದ್ದಾರೆ. ಆದರೆ ಕಾಮಗಾರಿ ಪೂರ್ಣಗೊಂಡಿಲ್ಲ. ಯಾವಾಗ ಈ ಭಾಗದ ರಸ್ತೆ ಪೂರ್ಣಗೊಳ್ಳುತ್ತದೆ ಎಂದು ಗ್ರಾಮಸ್ಥರು ಎದುರು ನೋಡುತ್ತಿದ್ದಾರೆ.
ಬಿ.ಎ.ವೆಂಕಟೇಶ್ ಬ್ರಹ್ಮಸಂದ್ರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.