ADVERTISEMENT

ಸೌಹಾರ್ದತೆಯ ಸಂದೇಶ ಸಾರಿದ ಬಕ್ರೀದ್‌

​ಪ್ರಜಾವಾಣಿ ವಾರ್ತೆ
Published 22 ಜುಲೈ 2021, 3:35 IST
Last Updated 22 ಜುಲೈ 2021, 3:35 IST
ತುಮಕೂರಿನ ಕೌಸರ್ ಮಸೀದಿಯಲ್ಲಿ ಮುಸ್ಲಿಮರು ಪ್ರಾರ್ಥನೆ ಸಲ್ಲಿಸಿದರು
ತುಮಕೂರಿನ ಕೌಸರ್ ಮಸೀದಿಯಲ್ಲಿ ಮುಸ್ಲಿಮರು ಪ್ರಾರ್ಥನೆ ಸಲ್ಲಿಸಿದರು   

ತುಮಕೂರು: ಮುಸ್ಲಿಮರು ಬಕ್ರೀದ್ ಹಬ್ಬವನ್ನು ಬುಧವಾರ ನಗರ ಹಾಗೂ ಜಿಲ್ಲೆಯಲ್ಲಿ ಸರಳವಾಗಿ ಆಚರಣೆ ಮಾಡಿದರು

ಕೋವಿಡ್ ಕಾರಣಕ್ಕೆ ಈದ್ಗಾ ಮೈದಾನಗಳಲ್ಲಿ ಸಾಮೂಹಿಕಪ್ರಾರ್ಥನೆ ಸಲ್ಲಿಸುವುದನ್ನು ಜಿಲ್ಲಾ ಆಡಳಿತ ನಿರ್ಬಂಧಿಸಿದ್ದು, ಎಲ್ಲೂ ಸಾಮೂಹಿಕ ಪ್ರಾರ್ಥನೆಗಳು ನಡೆದಿಲ್ಲ. ಮಸೀದಿಗಳಲ್ಲಿ ಮಾತ್ರ ಅಂತರ ಕಾಯ್ದುಕೊಂಡು, ಒಟ್ಟು ಸಾಮರ್ಥ್ಯದ ಅರ್ಧದಷ್ಟು ಮಂದಿ ಮಾತ್ರ ಪ್ರಾರ್ಥನೆ ಸಲ್ಲಿಸಿದರು. 10 ವರ್ಷದ ಒಳಗಿನ ಮಕ್ಕಳು ಹಾಗೂ 65 ವರ್ಷ ಮೇಲ್ಪಟ್ಟವರಿಗೆ ಪ್ರಾರ್ಥನೆಗೆ ಅವಕಾಶ ನೀಡಿರಲಿಲ್ಲ. ಮಕ್ಕಳು, ವೃದ್ಧರು ಮನೆಗಳಲ್ಲೇ ಪ್ರಾರ್ಥನೆ ಸಲ್ಲಿಸಿ, ಹಬ್ಬ ಆಚರಿಸಿದರು.

ಬಾರ್‌ಲೈನ್ ರಸ್ತೆಯಲ್ಲಿರುವ ಮಕ್ಕಾ ಮಸೀದಿ, ಈದ್ಗಾ ಮೊಹಲ್ಲಾ ಪಕ್ಕದಲ್ಲಿರುವ ಕೌಸರ್ ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸಿದರು. ಈಸಮಯದಲ್ಲಿ ಪರಸ್ಪರ ಶುಭಾಶಯ ಕೋರುವುದು ಸಂಪ್ರದಾಯ. ಆದರೆ ಈ ಸಲ ದೂರದಿಂದಲೇ ಶುಭ ಕೋರಿದರು. ಗೆಳೆಯರು, ಸಂಬಂಧಿಕರ ಮನೆಗಳಿಗೆ ಭೇಟಿ ನೀಡಿ ಸೌಹಾರ್ದತೆಯ ಸಂದೇಶ ಸಾರಿದರು. ಮನೆಗಳಲ್ಲಿ ವಿಶೇಷ ಖಾದ್ಯಗಳನ್ನು ತಯಾರಿಸಿ ಸವಿದರು. ಬಂಧು, ಬಾಂಧವರು, ಸ್ನೇಹಿತರಿಗೆ ಆಹ್ವಾನ ನೀಡಿರಲಿಲ್ಲ.

ADVERTISEMENT

ಹಬ್ಬದ ದಿನ ಮಾಂಸ, ಹಣ, ದಿನಸಿ ಸಾಮಗ್ರಿಗಳನ್ನು ಉಡುಗೊರೆಯಾಗಿ ನೀಡಲಾಗುತ್ತದೆ. ಸೀಮಿತ ಪ್ರಮಾಣದಲ್ಲಿ ಮಾಂಸ, ಇತರ ವಸ್ತುಗಳನ್ನು ದಾನಮಾಡಿದ್ದು ಕಂಡು ಬಂತು. ಕೋವಿಡ್‌ನಿಂದಾಗಿ ಈ ಬಾರಿ ಸಾರ್ವಜನಿಕ ಸ್ಥಳದಲ್ಲಿಕುರಿ ಬಲಿಕೊಡುವುದನ್ನು ನಿಷೇಧಿಸಲಾಗಿತ್ತು.

ಬಾರ್‌ಲೈನ್ ರಸ್ತೆಯಲ್ಲಿರುವ ಮಕ್ಕಾ ಮಸೀದಿಗೆ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್‍ ಕುಮಾರ್ ಶಹಾಪೂರವಾಡ್ ಭೇಟಿ ನೀಡಿ ಶುಭಾಶಯ ಕೋರಿದರು.

ಕೋವಿಡ್‌ನಿಂದಾಗಿ ಹಿಂದಿನಂತೆ ಬಕ್ರೀದ್ ಹಬ್ಬ ಆಚರಿಸಲು ಮುಸ್ಲಿಮರಿಗೆ ಸಾಧ್ಯವಾಗುತ್ತಿಲ್ಲ. ಜೀವಕ್ಕೆ ಮಹತ್ವ ಕೊಡಬೇಕಾಗಿದ್ದು, ಸರಳ ಆಚರಣೆ ಅನಿವಾರ್ಯವಾಗಿದೆ. ಜೀವ ಇದ್ದರೆ ಜೀವನ. ಸರ್ಕಾರದ ಮಾರ್ಗಸೂಚಿ ಪಾಲಿಸುವುದು ಅತ್ಯಗತ್ಯ ಎಂದು ಪಾಟೀಲ ಹೇಳಿದರು.

ಕಾಂಗ್ರೆಸ್ ಮುಖಂಡ ಎಸ್.ಷಫಿ ಅಹಮದ್, ‘ಮಕ್ಕಾ ಮಸೀದಿ ಬ್ರಿಟೀಷರ ಕಾಲದಿಂದಲೂ ಇದ್ದು, ಅಂದಿನಿಂದಲೂ ಜಿಲ್ಲಾಡಳಿತದಹೊಣೆ ಹೊತ್ತಿರುವ ಅಧಿಕಾರಿಗಳು
ಇಲ್ಲಿಗೆ ಬಂದು ಶುಭ ಕೋರುವುದು, ಅವರಿಗೆ ಸಮುದಾಯದಿಂದ ಅಭಿನಂದನೆ ಸಲ್ಲಿಸುವುದು ರೂಢಿಗತವಾಗಿದೆ’ ಎಂದು ನೆನಪಿಸಿಕೊಂಡರು.

ಮುಖಂಡರಾದ ಎಸ್.ರಫೀಕ್ ಅಹಮದ್, ಮುರುಳೀಧರ ಹಾಲಪ್ಪ, ಅಫ್ತಾಬ್ ಅಹಮದ್, ಮುನೀರ್ ಅಹಮದ್, ವೇಣುಗೋಪಾಲ್ ಮತ್ತಿತರರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.