
ತುಮಕೂರು: ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ, ಸಂಯುಕ್ತ ಹೋರಾಟ– ಕರ್ನಾಟಕದಿಂದ ಭೂಮಿ ಮತ್ತು ವಸತಿಗೆ ಆಗ್ರಹಿಸಿ ನ. 26ರಂದು ಬೆಂಗಳೂರು ಚಲೋ ಹಮ್ಮಿಕೊಳ್ಳಲಾಗಿದೆ.
‘ಕೈಗಾರಿಕೆಗಳಿಗೆ ಭೂಮಿ ಹಂಚಿಕೆ ಮಾಡುವ ಸರ್ಕಾರ ಜನರ ಬದುಕಿಗೆ ನೆರವಾಗುತ್ತಿಲ್ಲ. ಬಡವರಿಗೆ ಸೂರು, ಭೂಮಿ ಕಲ್ಪಿಸುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ವಿಫಲವಾಗಿವೆ. 15 ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಅಹೋರಾತ್ರಿ ಸತ್ಯಾಗ್ರಹ ನಡೆಸಲಾಗುವುದು’ ಎಂದು ಸಮಿತಿಯ ರಾಜ್ಯ ಉಪಾಧ್ಯಕ್ಷ ಸಿರಿಮನೆ ನಾಗರಾಜ್ ಇಲ್ಲಿ ಸೋಮವಾರ ಹೇಳಿದರು.
ಅರಣ್ಯ ಇಲಾಖೆ ಅಧಿಕಾರಿಗಳು ಜನರನ್ನು ಒಕ್ಕಲೆಬ್ಬಿಸುತ್ತಿದ್ದಾರೆ. ಸರ್ಕಾರ ಕಾರ್ಪೊರೇಟ್ ಕಂಪನಿಗೆ ಪೂರಕವಾದ ಕಾನೂನು ರೂಪಿಸುತ್ತಿದೆ. ಗೋಮಾಳ ಭೂಮಿಯನ್ನು ರೈತರಿಗೆ ಹಂಚಿಕೆ ಮಾಡುತ್ತಿಲ್ಲ. ಸರ್ಕಾರಕ್ಕೆ ಮನವರಿಕೆ ಮಾಡಿಕೊಡುತ್ತೇವೆ. ಅನುಸಂಧಾನ ಆಗದಿದ್ದರೆ ಹೋರಾಟ ಅನಿವಾರ್ಯ. 28 ಲಕ್ಷ ಭೂಮಿ, 24 ಲಕ್ಷ ವಸತಿ ಸೇರಿ ಒಟ್ಟು 52 ಲಕ್ಷ ಅರ್ಜಿಗಳು ಸರ್ಕಾರದ ಹಂತದಲ್ಲಿ ಬಾಕಿ ಇವೆ ಎಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಪಿಯುಸಿಎಲ್ ಜಿಲ್ಲಾ ಸಮಿತಿ ಅಧ್ಯಕ್ಷ ಕೆ.ದೊರೈರಾಜ್, ‘ಭೂಮಿ ಮತ್ತು ವಸತಿಗಾಗಿ ಸುಮಾರು 40 ವರ್ಷಗಳಿಂದ ಹೋರಾಟ ನಡೆಯುತ್ತಿದೆ. ಭೂಮಿ ಬೆಲೆ ಹೆಚ್ಚಾಗಿ ಬಡವರ ಮೇಲಿನ ದಬ್ಬಾಳಿಕೆ ಜಾಸ್ತಿಯಾಗುತ್ತಿದೆ. ಇದಕ್ಕೆ ಕಂದಾಯ ಇಲಾಖೆ ಬೆಂಬಲವಾಗಿ ನಿಂತಿದೆ’ ಎಂದು ಆರೋಪಿಸಿದರು.
ಸಂಯುಕ್ತ ಹೋರಾಟ ಕರ್ನಾಟಕದ ಸಿ.ಯತಿರಾಜು, ‘ನಂದಿಹಳ್ಳಿ ಬೈಪಾಸ್ ರಸ್ತೆ ನಿರ್ಮಾಣಕ್ಕೆ ಭೂ ಸ್ವಾಧೀನ ಶುರುವಾಗಿದೆ. ಇದಕ್ಕೆ ರೈತರು ವಿರೋಧ ವ್ಯಕ್ತಪಡಿಸಿದ್ದು, ಸರ್ವೆ ಕಾರ್ಯಕ್ಕೆ ಬಂದವರನ್ನು ವಾಪಸ್ ಕಳುಹಿಸಲಾಗಿದೆ. ಅಧಿಕಾರಿಗಳು ಜಮೀನುಗಳಲ್ಲಿ ಕಲ್ಲು ನೆಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಆ ಕಲ್ಲು ಕಿತ್ತುಕೊಂಡು ಬಂದು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು’ ಎಂದು ಎಚ್ಚರಿಸಿದರು.
ಮುಖಂಡರಾದ ಆರ್.ರಂಗಾಚಾರಿ, ಜೆಸಿಬಿ ವೆಂಕಟೇಶ್, ಮಲ್ಲಿಕಾರ್ಜುನಯ್ಯ ಹಾಜರಿದ್ದರು.