ADVERTISEMENT

ಸೌಹಾರ್ದ ನಮ್ಮ ಜಪವಾಗಲಿ: ಲೇಖಕಿ ಬಾ.ಹ.ರಮಾಕುಮಾರಿ

‘ಸೌಹಾರ್ದ ಭಾರತ ಸಮಾನತೆಯ ಸ್ನೇಹಿತ’ ಜನಾರ್ಪಣೆ

​ಪ್ರಜಾವಾಣಿ ವಾರ್ತೆ
Published 12 ಜನವರಿ 2026, 7:08 IST
Last Updated 12 ಜನವರಿ 2026, 7:08 IST
ತುಮಕೂರಿನಲ್ಲಿ ಶನಿವಾರ ಪ್ರೊ.ಬರಗೂರು ರಾಮಚಂದ್ರಪ್ಪ ಅವರ ‘ಸೌಹಾರ್ದ ಭಾರತ ಸಮಾನತೆಯ ಸ್ನೇಹಿತ’ ಪುಸ್ತಕ ಬಿಡುಗಡೆಗೊಳಿಸಲಾಯಿತು. ಸೈಯದ್‌ ಮುಜೀಬ್‌, ಅಶ್ವತ್ಥ ನಾರಾಯಣ ಗುಟ್ಟೆ, ಓ.ನಾಗರಾಜು, ಕೆ.ದೊರೈರಾಜ್‌ ಬಾ.ಹ.ರಮಾಕುಮಾರಿ, ಎಸ್.ಜ್ಯೋತಿ ಉಪಸ್ಥಿತರಿದ್ದರು
ತುಮಕೂರಿನಲ್ಲಿ ಶನಿವಾರ ಪ್ರೊ.ಬರಗೂರು ರಾಮಚಂದ್ರಪ್ಪ ಅವರ ‘ಸೌಹಾರ್ದ ಭಾರತ ಸಮಾನತೆಯ ಸ್ನೇಹಿತ’ ಪುಸ್ತಕ ಬಿಡುಗಡೆಗೊಳಿಸಲಾಯಿತು. ಸೈಯದ್‌ ಮುಜೀಬ್‌, ಅಶ್ವತ್ಥ ನಾರಾಯಣ ಗುಟ್ಟೆ, ಓ.ನಾಗರಾಜು, ಕೆ.ದೊರೈರಾಜ್‌ ಬಾ.ಹ.ರಮಾಕುಮಾರಿ, ಎಸ್.ಜ್ಯೋತಿ ಉಪಸ್ಥಿತರಿದ್ದರು   

ತುಮಕೂರು: ಪ್ರಸ್ತುತ ಸಂಕಷ್ಟದ ಕಾಲಘಟ್ಟದಲ್ಲಿ ನಾವು ಬದುಕುತ್ತಿದ್ದೇವೆ. ಬಹುತ್ವ ಭಾರತದ ಆಶಯ ಅರ್ಥ ಮಾಡಿಕೊಳ್ಳಲು ‘ಸೌಹಾರ್ದ ಭಾರತ ಸಮಾನತೆಯ ಸ್ನೇಹಿತ’ ಪುಸ್ತಕ ಸಹಕಾರಿಯಾಗುತ್ತದೆ ಎಂದು ಲೇಖಕಿ ಬಾ.ಹ.ರಮಾಕುಮಾರಿ ಅಭಿಪ್ರಾಯಪಟ್ಟರು.

ನಗರದಲ್ಲಿ ಶನಿವಾರ ಸಂಜೆ ಸೌಹಾರ್ದ ಕರ್ನಾಟಕ, ಬಂಡಾಯ ಸಾಹಿತ್ಯ ಸಂಘಟನೆ ಆಶ್ರಯದಲ್ಲಿ ಆಯೋಜಿಸಿದ್ದ ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ ಅವರ ‘ಸೌಹಾರ್ದ ಭಾರತ ಸಮಾನತೆಯ ಸ್ನೇಹಿತ’ ಪುಸ್ತಕ ಜನಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಈ ಕೃತಿ ಸಾಮಾಜಿಕ ಸಂಕಟ ಅರ್ಥ ಮಾಡಿಸುತ್ತದೆ. ಸೌಹಾರ್ದ ನಮ್ಮ ಜಪವಾಗಬೇಕು ಎಂಬುವುದನ್ನು ಸಾರಿ ಹೇಳುತ್ತದೆ. ಸ್ವಾಮಿ ವಿವೇಕಾನಂದ, ಮಹಾತ್ಮ ಗಾಂಧಿ, ಡಾ.ಬಿ.ಆರ್.ಅಂಬೇಡ್ಕರ್‌ ಅವರ ಬಹುತ್ವದ ಆಶಯ ಪ್ರತಿಬಿಂಬಿಸುವ, ಸದಾ ಎಚ್ಚರದ ಸ್ಥಿತಿಯನ್ನು ಸ್ಥಿರೀಕರಿಸುವ ಇಂತಹ ಪುಸ್ತಕ ಪದೇ ಪದೇ ಓದಬೇಕಾದುದು ಇಂದಿನ ತುರ್ತು ಎಂದರು.

ADVERTISEMENT

ಸಹಾಯಕ ಪ್ರಾಧ್ಯಾಪಕಿ ಎಸ್.ಜ್ಯೋತಿ, ‘ಈ ಪುಸ್ತಕ ಬರಗೂರರ ತಾಯ್ತನದ ಆಶಯ ಬಿಂಬಿಸುತ್ತದೆ. ಇದು ಎಲ್ಲರಿಗೂ ತಲುಪಬೇಕು. ದ್ವೇಷದ ಬೆಂಕಿಗೆ ಸೌಹಾರ್ದತೆಯ ನೀರೆರೆದು, ಜವಾಬ್ದಾರಿ ಇರುವವರು ಮಧ್ಯಸ್ಥಿಕೆ ವಹಿಸಬೇಕು. ತಾಯ್ತನ, ಸೌಹಾರ್ದತೆಗೆ ಕನ್ನಡ ಹೆಸರಾಗಿದ್ದು, ಭಾರತೀಯರು ದ್ವೇಷೋತ್ಪಾದನೆ ಸಹಿಸುವುದಿಲ್ಲ’ ಎಂದು ಹೇಳಿದರು.

ಕನ್ನಡ ಉಪನ್ಯಾಸಕ ಅಶ್ವತ್ಥ ನಾರಾಯಣ ಗುಟ್ಟೆ, ‘ಬರಗೂರರ ಪುಸ್ತಕ ಸಾಮಾಜಿಕ ಸಂಕಟಗಳಿಗೆ ಮದ್ದಾಗಿ ಕಾರ್ಯನಿರ್ವಹಿಸಬಲ್ಲದು. ಈ ಕೃತಿಯನ್ನು ಎಲ್ಲ ವಿಶ್ವವಿದ್ಯಾಲಯಗಳಲ್ಲಿ ಪಠ್ಯವಾಗಿ ಮಾಡಿದರೆ ಸೌಹಾರ್ದ ಭಾರತ ಕಟ್ಟಲು ಸಾಧ್ಯ’ ಎಂದು ಪ್ರತಿಪಾದಿಸಿದರು.

ಲೇಖಕರಾದ ಓ.ನಾಗರಾಜು, ಬಿ.ಸಿ.ಶೈಲಾ ನಾಗರಾಜ್‌, ಮಿರ್ಜಾ ಬಷೀರ್‌, ಪ್ರೊ.ಪದ್ಮಪ್ರಸಾದ್, ರಾಜೇಂದ್ರನಾಯಕ್, ಲಕ್ಷ್ಮಿಕಾಂತರಾಜೇ ಅರಸ್, ಎ.ರಾಮಚಂದ್ರ, ಲಕ್ಷ್ಮಣ್, ಎಚ್‌.ಗೋವಿಂದಯ್ಯ, ಮುಖಂಡರಾದ ಸೈಯದ್‌ ಮುಜೀಬ್‌, ಲಕ್ಷ್ಮಣದಾಸ್, ಎಸ್‌.ರಾಘವೇಂದ್ರ, ಅಶ್ವತ್ಥಯ್ಯ, ಪವನ್‌ ಗಂಗಾಧರ್‌ ಇತರರು ಹಾಜರಿದ್ದರು.

ದ್ವೇಷ ಬಿತ್ತುವವರಿಗೆ ಮತ

‘ನಾವು ಯಾರನ್ನು ವಿರೋಧಿಸುತ್ತೇವೆಯೋ ಅವರಿಗೆ ಮತ ಹಾಕುತ್ತಿದ್ದೇವೆ. ದ್ವೇಷ ಹುಟ್ಟು ಹಾಕುವವರಿಗೆ ಮತ ನೀಡುವುದರಲ್ಲಿ ಅರ್ಥವಿಲ್ಲ. ಅಧ್ಯಾತ್ಮ ಧರ್ಮದ ಮೂಲಕ ಕೋಮುವಾದ ಪಸರಿಸಲಾಗುತ್ತಿದೆ’ ಎಂದು ಚಿಂತಕ ಕೆ.ದೊರೈರಾಜ್‌ ಆತಂಕ ವ್ಯಕ್ತಪಡಿಸಿದರು. ‘ಸೌಹಾರ್ದ ರಾಷ್ಟ್ರ ಕಟ್ಟುವವರ ಸಂಖ್ಯೆ ಹೆಚ್ಚಾಗಬೇಕು. ಬರಗೂರರು ಸೌಹಾರ್ದ ಭಾರತ ಕಟ್ಟಲು ಹೆಚ್ಚು ಕ್ರೀಯಾಶೀಲರಾಗಲು ಜನತೆಗೆ ಈ ಹೊತ್ತಿಗೆ‌ ಕೊಟ್ಟಿದ್ದಾರೆ. ನಮಗೆ ಸರ್ವನಾಶದ ನಾಡು ಬೇಡ ಸೌಹಾರ್ದ ಭಾರತ ಬೇಕು ಎನ್ನುವುದು ಈ ಕೃತಿಯ ತಿರುಳು’ ಎಂದು ವಿಶ್ಲೇಷಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.