ADVERTISEMENT

ತಳ ಸಮುದಾಯಕ್ಕೆ ಧ್ವನಿ ನೀಡಿದ ಬಸವಣ್ಣ

ಜಿಲ್ಲಾ ಮಂಡಿ ಹಮಾಲಿ ಮತ್ತು ಕೂಲಿ ಕಾರ್ಮಿಕರ ಸಂಘದಿಂದ ಬಸವೇಶ್ವರ, ಅಂಬೇಡ್ಕರ್ ಜಯಂತಿ

​ಪ್ರಜಾವಾಣಿ ವಾರ್ತೆ
Published 14 ಮೇ 2019, 14:04 IST
Last Updated 14 ಮೇ 2019, 14:04 IST
ಮಂಡಿ ಹಮಾಲಿ ಮತ್ತು ಕೂಲಿ ಕಾರ್ಮಿಕರ ಸಂಘದಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಹಾಗೂ ಬಸವಣ್ಣನ ಭಾವಚಿತ್ರಗಳ ಮೆರವಣಿಗೆ ಮಾಡಲಾಯಿತು.
ಮಂಡಿ ಹಮಾಲಿ ಮತ್ತು ಕೂಲಿ ಕಾರ್ಮಿಕರ ಸಂಘದಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಹಾಗೂ ಬಸವಣ್ಣನ ಭಾವಚಿತ್ರಗಳ ಮೆರವಣಿಗೆ ಮಾಡಲಾಯಿತು.   

ತುಮಕೂರು: ಶ್ರಮಿಕ, ದಮನಿತರ ಶ್ರೇಯೋಭಿವೃದ್ಧಿಗೆ ಶ್ರಮಿಸಿದ ಬಸವಣ್ಣ, ಡಾ.ಬಿ.ಆರ್.ಅಂಬೇಡ್ಕರ್ ಜಯಂತಿಯನ್ನು ಒಟ್ಟಿಗೆ ಆಚರಿಸುತ್ತಿರುವುದು ಆದರ್ಶನೀಯ ಎಂದು ಹಿರೇಮಠದ ಡಾ.ಶಿವಾನಂದ ಶಿವಾಚಾರ್ಯ ಸ್ವಾಮೀಜಿ ನುಡಿದರು.

ಜಿಲ್ಲಾ ಮಂಡಿ ಹಮಾಲಿ ಮತ್ತು ಕೂಲಿ ಕಾರ್ಮಿಕರ ಸಂಘ ಹಮ್ಮಿಕೊಂಡಿದ್ದ ಅಂಬೇಡ್ಕರ್ ಮತ್ತು ಬಸವ ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು.

‘ಬಸವಣ್ಣನ ಕಲ್ಯಾಣ ಕ್ರಾಂತಿಯಿಂದ ತಳ ಸಮುದಾಯಕ್ಕೆ ಧ್ವನಿ ಬಂದಿತು. ಇದರಿಂದಾಗಿಯೇ ತಳಸಮುದಾಯದ ವಚನಕಾರರು ತಮ್ಮ ಅನುಭವವನ್ನು ವಚನಗಳಲ್ಲಿ ದಾಖಲಿಸಿದರು’ ಎಂದರು.

ADVERTISEMENT

ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ತಳಸಮುದಾಯಗಳ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಿದರು. ಅವರಿಂದಲೇ ಇಂದು ದಲಿತ, ದಮನಿತರಿಗೆ ಧ್ವನಿ ಎತ್ತುವ ಹಕ್ಕು ದೊರೆತಿದೆ. ಕಾಯಕವನ್ನು ನಂಬಿರುವ ಹಮಾಲಿಗಳನ್ನು ಹಮಾಲಿಗಳು ಎನ್ನುವ ಬದಲಾಗಿ ಶ್ರಮತಪಸ್ವಿ ಎನ್ನುವುದು ಸೂಕ್ತ. ಹಮಾಲಿಗಳು ಸಂಘಟಿತರಾಗುವ ಮೂಲಕ ಹಕ್ಕುಗಳನ್ನು ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಶಾಸಕ ಜಿ.ಬಿ.ಜ್ಯೋತಿ ಗಣೇಶ್ ಮಾತನಾಡಿ, ‘ಸ್ಪರ್ಧಾತ್ಮಕ ಜಗತ್ತಿನಲ್ಲಿ ಹಮಾಲಿ ಮತ್ತು ಕೂಲಿ ಕಾರ್ಮಿಕರು ಮಕ್ಕಳನ್ನು ವಿದ್ಯಾವಂತರನ್ನಾಗಿಸುವ ಮೂಲಕ ಸಮಾಜದ ಮುಖ್ಯವಾಹಿನಿಗೆ ತರಬೇಕು’ ಎಂದರು.

ಸರ್ಕಾರ ಇಂದು ಅಸಂಘಟಿತ ಕಾರ್ಮಿಕರಿಗೆ ಭದ್ರತೆ ಕಲ್ಪಿಸಲು ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಇಂದು ಬಲಾಢ್ಯರು ಮಾತ್ರ ಸರ್ಕಾರದ ಸೌಲಭ್ಯ ಪಡೆದುಕೊಳ್ಳುತ್ತಿದ್ದಾರೆ. ಅಸಂಘಟಿತ ಕಾರ್ಮಿಕರು ಹಾಗೂ ಕೂಲಿ ಕಾರ್ಮಿಕರು ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ. ಇಂತಹವರು ಸೌಲಭ್ಯ ಪಡೆದುಕೊಳ್ಳುವ ಮೂಲಕ ಆರ್ಥಿಕ ಭದ್ರತೆ ಹೊಂದಬೇಕು ಎಂದು ಸಲಹೆ ನೀಡಿದರು.

ತುಮಕೂರು ಜಿಲ್ಲಾ ಮಂಡಿ ಹಮಾಲಿ ಮತ್ತು ಕೂಲಿ ಕಾರ್ಮಿಕರ ಸಂಘದಿಂದ ಹಮಾಲಿ ಹಾಗೂ ಕೂಲಿ ಕಾರ್ಮಿಕರಿಗೆ ಮನೆಗಳನ್ನು ಮಂಜೂರು ಮಾಡುವಂತೆ ಮನವಿ ಸಲ್ಲಿಸಲಾಯಿತು.

ಕಾರ್ಯಕ್ರಮದ ಅಂಗವಾಗಿ ಎಂ.ಜಿ.ಕ್ರೀಡಾಂಗಣದಿಂದ ಎಪಿಎಂಸಿವರೆಗೆ ಹಮ್ಮಿಕೊಂಡಿದ್ದ ಮೆರವಣಿಗೆಗೆ ಟಿಜಿಎಂಸಿ ಬ್ಯಾಂಕ್‌ ನಿರ್ದೇಶಕ ಆರ್.ಎ.ಸುರೇಶ್‌ಕುಮಾರ್ ಚಾಲನೆ ನೀಡಿದರು.

ಎಪಿಎಂಸಿ ಕಾರ್ಯದರ್ಶಿ ಡಾ.ಕೆ.ಕೋಡಿಗೌಡ, ವರ್ತಕ ವಾಸುದೇವರ, ಜಿಲ್ಲಾ ಮಂಡಿ ಹಮಾಲಿ ಮತ್ತು ಕೂಲಿ ಕಾರ್ಮಿಕರ ಸಂಘದ ಅಧ್ಯಕ್ಷ ಚಿಕ್ಕಹನುಮಯ್ಯ, ತರಕಾರಿ ಮಾರುಕಟ್ಟೆ ವರ್ತಕರ ಸಂಘದ ಅಧ್ಯಕ್ಷ ರಘುರಾಮ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.