ತುಮಕೂರು: ಕವಿಗಳು, ಲೇಖಕರು, ಬುದ್ಧಿಜೀವಿಗಳನ್ನು ಕೋಮುವಾದಿಗಳು, ಸಂಪ್ರದಾಯವಾದಿಗಳು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದ್ದಾರೆ. ಈ ರೀತಿ ಮಾಡುವುದರಿಂದ ಬರಹಗಾರರ ಆತ್ಮಸ್ಥೈರ್ಯ ಕುಗ್ಗಿಸಲು ಸಾಧ್ಯವಿಲ್ಲ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್.ಮುಕುಂದರಾಜ್ ಎಚ್ಚರಿಸಿದರು.
ನಗರದಲ್ಲಿ ಗುರುವಾರ ಕರ್ನಾಟಕ ಸಾಹಿತ್ಯ ಅಕಾಡೆಮಿಯು ಲೇಖಕಿಯರ ಸಂಘದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಬೆಂಗಳೂರು ವಿಭಾಗಮಟ್ಟದ ಯುವ ಕವಿಗೋಷ್ಠಿಯನ್ನು ತಮ್ಮ ‘ಒಂದು ಬೆಳಕಿನ ದಿನಕ್ಕಾಗಿ’ ಕವಿತೆ ಓದುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಯುವ ಕವಿಗಳು ಪ್ರೀತಿ, ಪ್ರೇಮ, ಪ್ರಣಯದ ಬಗ್ಗೆ ಕವಿತೆ ಬರೆಯುವುದು ಕಡಿಮೆ ಮಾಡಿದ್ದಾರೆ. ಸಂವಿಧಾನ, ಪ್ರಜಾಪ್ರಭುತ್ವ, ಸೌಹಾರ್ದ, ಮಾನವೀಯತೆ, ಮೌಲ್ಯಗಳ ಕುರಿತು ಕವಿತೆ ಕಟ್ಟುವ ಮೂಲಕ ಪ್ರಸ್ತುತ ಕಾಲಘಟ್ಟದ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದಾರೆ. ಇದು ಉತ್ತಮ ಬೆಳವಣಿಗೆ. ಆದರೆ ಲೇಖಕರನ್ನು ಟಾರ್ಗೇಟ್ ಮಾಡುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಹೇಳಿದರು.
ಯುವ ತಲೆಮಾರಿನ ಸಾಕಷ್ಟು ಕವಿಗಳು ಕಾವ್ಯ ರಚಿಸುತ್ತಿದ್ದು, ಒಂದು ರೀತಿಯಲ್ಲಿ ಕಾವ್ಯದ ಸಮೃದ್ಧ ಕಾಲಘಟ್ಟವಾಗಿದೆ. ಈಗಿನ ಕಾಲದ ಕವಿಗಳಿಗೆ ಮೆಚ್ಚುಗೆಯ ಮಾತುಗಳು ಬೇಕಾಗಿದ್ದು, ಅಂತಹವರನ್ನು ಗುರುತಿಸಿ ಬೆನ್ನು ತಟ್ಟಬೇಕಿದೆ. ಅದಕ್ಕಾಗಿ ವಲಯಮಟ್ಟದಲ್ಲಿ ಕವಿಗೋಷ್ಠಿ ಹಮ್ಮಿಕೊಳ್ಳಲಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಲೇಖಕಿಯರ ಸಂಘದ ಜಿಲ್ಲಾ ಶಾಖೆ ಅಧ್ಯಕ್ಷೆ ಮಲ್ಲಿಕಾ ಬಸವರಾಜು, ‘ಸುತ್ತಲಿನ ತವಕ, ತಲ್ಲಣಗಳಿಗೆ ಸ್ಪಂದಿಸಿದರೆ ಸಮಷ್ಟಿ ನೆಲೆಯಲ್ಲಿ ಕಾವ್ಯ ಕಟ್ಟಲು ಸಾಧ್ಯ’ ಎಂದು ಅಭಿಪ್ರಾಯಪಟ್ಟರು.
ಅಕಾಡೆಮಿ ಸದಸ್ಯೆ ಪಿ.ಚಂದ್ರಿಕಾ, ‘ಅಕ್ಷರವು ವಿವೇಕ, ವಿವೇಚನೆ, ವಿಮೋಚನೆ ನೀಡಬೇಕು’ ಎಂದರು.
ಅಕಾಡೆಮಿ ಸದಸ್ಯರಾದ ಅಕ್ಕೈ ಪದ್ಮಶಾಲಿ, ‘ಒಳಗೆ ಸುಳಿವ ಆತ್ಮ ಹೆಣ್ಣೂ ಅಲ್ಲ, ಗಂಡೂ ಅಲ್ಲ ಎಂದು ನಿರ್ಧರಿಸುವವರು ಯಾರು’ ಎಂದು ಪ್ರಶ್ನಿಸಿದರು.
ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಅಸ್ಗರ್ ಬೇಗ್, ಅಕಾಡೆಮಿ ರಿಜಿಸ್ಟ್ರಾರ್ ಕೆ.ಕರಿಯಪ್ಪ, ಅಕಾಡೆಮಿ ಸದಸ್ಯ ಸಂಚಾಲಕಿ ಸುಮಾ ಸತೀಶ್ ಉಪಸ್ಥಿತರಿದ್ದರು. ರಾಣಿ ಕಾರ್ಯಕ್ರಮ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.