ADVERTISEMENT

ತುಮಕೂರು | ವರ್ಷದಲ್ಲಿ 404 ಬೈಕ್‌ ಕಳವು; ಪತ್ತೆ ಕಾರ್ಯ ವಿಳಂಬ

​ಪ್ರಜಾವಾಣಿ ವಾರ್ತೆ
Published 16 ಜನವರಿ 2025, 5:09 IST
Last Updated 16 ಜನವರಿ 2025, 5:09 IST
ತುಮಕೂರಿನಲ್ಲಿ ಈಚೆಗೆ ಪೊಲೀಸರು ಜಪ್ತಿ ಮಾಡಿದ ಬೈಕ್‌
ತುಮಕೂರಿನಲ್ಲಿ ಈಚೆಗೆ ಪೊಲೀಸರು ಜಪ್ತಿ ಮಾಡಿದ ಬೈಕ್‌   

ತುಮಕೂರು: ನಗರದ ಉಮೇಶ್‌ ಎಂಬುವರು ಕಳೆದ ನ. 5ರಂದು ಬೆಳಗ್ಗೆ 8.30 ಗಂಟೆಗೆ ಶಿರಾ ಗೇಟ್‌ ಬಳಿಯ ಹೋಟೆಲ್‌ ಮುಂದೆ ಬೈಕ್‌ ನಿಲ್ಲಿಸಿ, ಒಳಗೆ ಹೋಗಿ ಹಾಲು ಕೊಟ್ಟು ಬರುವ ಹೊತ್ತಿಗೆ ಅವರ ಬೈಕ್‌ ಕಾಣೆಯಾಗಿತ್ತು.

ಅವಸರದಲ್ಲಿದ್ದ ಉಮೇಶ್‌ ಬೈಕ್‌ನಲ್ಲೇ ಕೀ ಬಿಟ್ಟು ಹೋಟೆಲ್ ಒಳಗಡೆ ಹೋಗಿದ್ದರು. ಮತ್ತೆ ಬಂದು ನೋಡಿದಾಗ ವಾಹನವೇ ಇರಲಿಲ್ಲ. ರೈಲ್ವೆ ಇಲಾಖೆಯ ಎಂಜಿನಿಯರ್‌ ಸಿ.ವಿನಯ್‌ ಆಚಾರ್ಯ ಅ. 11ರಂದು ಬೆಳಗ್ಗೆ 8.30 ಗಂಟೆಗೆ ವಿದ್ಯಾನಿಕೇತನ ಶಾಲೆಯ ಮುಂಭಾಗ ಬೈಕ್‌ ನಿಲ್ಲಿಸಿ ಕಚೇರಿಗೆ ಹೋಗಿದ್ದರು. 10.50ರ ವೇಳೆಗೆ ಹೊರ ಬಂದು ನೋಡಿದರೆ ಬೈಕ್‌ ನಾಪತ್ತೆ.

ಈಚೆಗೆ ಯುವಕನೊಬ್ಬ ಜಿಲ್ಲಾ ಆಸ್ಪತ್ರೆ ಮುಂಭಾಗ ಬೈಕ್‌ ನಿಲ್ಲಿಸಿ, ಒಳಗಡೆ ಇರುವ ತಮ್ಮ ಸಂಬಂಧಿಕರನ್ನು ಮಾತನಾಡಿಸಿ ಬರುವ ವೇಳೆಗೆ ಬೈಕ್‌ ಕಳವಾಗಿತ್ತು. ಇವು ಕೆಲವು ಉದಾಹರಣೆಗಳಷ್ಟೇ. ಪ್ರತಿ ದಿನ ಇಂತಹ ಹತ್ತಾರು ಪ್ರಕರಣಗಳು ವಿವಿಧ ಪೊಲೀಸ್ ಠಾಣೆಗಳಲ್ಲಿ ವರದಿಯಾಗುತ್ತಿವೆ. ನಗರ ಸೇರಿದಂತೆ ಜಿಲ್ಲೆಯಾದ್ಯಂತ ಬೈಕ್‌ ಕಳ್ಳತನ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ.

ADVERTISEMENT

ಜಿಲ್ಲೆಯಲ್ಲಿ 2024ರ ಒಂದೇ ವರ್ಷದಲ್ಲಿ 404 ಬೈಕ್‌ಗಳು ಕಳವಾಗಿವೆ. ಈ ಹಿಂದೆ ಕಳುವಾಗಿದ್ದ ಬೈಕ್‌ ಸೇರಿದಂತೆ ಒಟ್ಟು 259 ಬೈಕ್‌ಗಳನ್ನು ಪೊಲೀಸರು ಪತ್ತೆ ಹಚ್ಚಿ, ಕಳ್ಳರನ್ನು ಜೈಲಿಗೆ ಅಟ್ಟಿದ್ದಾರೆ. ರಸ್ತೆ ಪಕ್ಕ, ಶಾಲಾ–ಕಾಲೇಜು ಮುಂಭಾಗ, ಬಸ್‌ ನಿಲ್ದಾಣದ ಬಳಿ ನಿಲ್ಲಿಸಿದ ಬೈಕ್‌ಗಳು ಹೆಚ್ಚಿನ ಪ್ರಮಾಣದಲ್ಲಿ ಕಳವಾಗುತ್ತಿವೆ.

ಗ್ರಾಮೀಣ ಭಾಗಕ್ಕಿಂತ ನಗರ ಪ್ರದೇಶದಲ್ಲಿ ಹೆಚ್ಚಿನ ವಾಹನಗಳು ಕಣ್ಮರೆಯಾಗುತ್ತಿವೆ. ರಾತ್ರಿ ಮನೆ ಮುಂದೆ ನಿಲ್ಲಿಸಿದ್ದ ಬೈಕ್‌ ಬೆಳಗ್ಗೆ ಮಾಯವಾಗುತ್ತಿದೆ. ಈ ವರ್ಷ ತುಮಕೂರು ನಗರ ಠಾಣೆ ವ್ಯಾಪ್ತಿಯಲ್ಲಿ 60 ಬೈಕ್‌ಗಳು ಕಳ್ಳತನವಾಗಿವೆ. ಶಿರಾ ಠಾಣೆ ವ್ಯಾಪ್ತಿಯಲ್ಲಿ 49 ಬೈಕ್‌ಗಳು ಕಳವಾಗಿವೆ. ಶಿರಾ ಪೊಲೀಸರು ಕಳೆದ ಎರಡು–ಮೂರು ವರ್ಷದಲ್ಲಿ ಕಳ್ಳತನವಾಗಿದ್ದ ಬೈಕ್‌ ಸೇರಿ ಒಟ್ಟು 75 ಬೈಕ್‌ಗಳನ್ನು ಕಳ್ಳರಿಂದ ಜಪ್ತಿ ಮಾಡಿದ್ದಾರೆ.

ಸಿಸಿ ಟಿವಿ ಕ್ಯಾಮೆರಾ: ಕಳುವಾದ ಬೈಕ್‌ ಪತ್ತೆಗೆ ಸಿ.ಸಿ ಟಿ.ವಿ ಕ್ಯಾಮೆರಾಗಳು ನೆರವಾಗುತ್ತಿವೆ. ನಗರದ 312 ಕಡೆಗಳಲ್ಲಿ ಕ್ಯಾಮೆರಾ ಅಳವಡಿಸಲಾಗಿದೆ. ಅಪರಾಧ ಪ್ರಕರಣಗಳನ್ನು ತಡೆಯುವ ನಿಟ್ಟಿನಲ್ಲಿ ಪೊಲೀಸರಿಗೆ ಇವು ಸಹಾಯಕವಾಗುತ್ತಿವೆ. ಕಳವಾದ ಬೈಕ್‌ ಯಾವೆಲ್ಲ ರಸ್ತೆಯ ಮೂಲಕ ಹಾದು ಹೋಗಿದೆ, ಎಲ್ಲಿ ನಿಂತಿದೆ, ವಾಹನ ಸವಾರರು ಯಾರು ಎಂಬೆಲ್ಲ ಮಾಹಿತಿ ಕ್ಯಾಮೆರಾಗಳಿಂದ ಲಭ್ಯವಾಗುತ್ತಿದೆ.

ಒಂದು ಬೈಕ್‌ ಕಳ್ಳತನದ ಪ್ರಕರಣದಲ್ಲಿ ಕಳ್ಳನನ್ನು ಬಂಧಿಸಿ ವಿಚಾರಣೆಗೆ ಒಳ ಪಡಿಸಿದಾಗ ಹಲವು ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಈಚೆಗೆ ಪಾವಗಡ, ಶಿರಾ ಭಾಗದಲ್ಲಿ ವಾಹನ ಕಳ್ಳತನ ಮಾಡುತ್ತಿದ್ದ ತಂಡವನ್ನು ಪೊಲೀಸರು ಬಂಧಿಸಿ ಬೈಕ್‌ಗಳನ್ನು ಜಪ್ತಿ ಮಾಡಿದ್ದರು. ಸಾರ್ವಜನಿಕರ ಅಜಾಗರೂಕತೆ, ನಿರ್ಲಕ್ಷ್ಯವನ್ನು ಕಳ್ಳರು ಬಂಡವಾಳ ಮಾಡಿಕೊಳ್ಳುತ್ತಿದ್ದಾರೆ. ಪೊಲೀಸ್‌ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ, ನಾನಾ ಕಾರಣಗಳಿಂದ ಕಳವು ಪ್ರಕರಣ ಪತ್ತೆ ಹಚ್ಚುವುದು ವಿಳಂಬವಾಗುತ್ತಿದೆ.

ಕಳ್ಳತನ ಕಡಿಮೆ

ಹಿಂದಿನ ಕೆಲ ವರ್ಷಗಳಿಗೆ ಹೋಲಿಸಿದರೆ ಜಿಲ್ಲೆಯಲ್ಲಿ ಬೈಕ್‌ ಕಳ್ಳತನ ಪ್ರಕರಣಗಳು ಕಡಿಮೆಯಾಗಿವೆ. ಕಳ್ಳರನ್ನು ಬಂಧಿಸುವುದು ಹೆಚ್ಚಾಗುತ್ತಿದೆ. ಇದೇ ಕಾರಣಕ್ಕೆ ಕಳವು ಪ್ರಕರಣ ಇಳಿಕೆಯಾಗಿದೆ. ಸಾರ್ವಜನಿಕರು ಖಾಲಿ ಜಾಗ ಕಂಡಲ್ಲೆಲ್ಲಾ ಬೈಕ್‌ ನಿಲ್ಲಿಸಬಾರದು. ರಕ್ಷಣೆ ಮುಂಜಾಗ್ರತಾ ಕ್ರಮದ ಬಗ್ಗೆಯೂ ಯೋಚಿಸಬೇಕು. ಕೆ.ವಿ.ಅಶೋಕ್‌ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.