ADVERTISEMENT

ತುಮಕೂರು: ಬೈಕ್‌ ವ್ಹೀಲಿಂಗ್- ₹ 26 ಸಾವಿರ ದಂಡ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2021, 4:14 IST
Last Updated 19 ಅಕ್ಟೋಬರ್ 2021, 4:14 IST

ತುಮಕೂರು: ಬಾಲಕನಿಗೆ ಚಾಲನೆ ಮಾಡಲು ಮೊಪೆಡ್ ನೀಡಿದ ಆತನ ತಂದೆಯೂ ಆದ ಅದರ ಮಾಲೀಕನಿಗೆ ₹26 ಸಾವಿರ ದಂಡ ವಿಧಿಸಿ 2ನೇ ಅಧಿಕ ಸಿವಿಲ್ ನ್ಯಾಯಾಲಯ ಆದೇಶಿಸಿದೆ.

ವ್ಹೀಲಿಂಗ್ ಮಾಡಲು ಬಳಸಿದ ಕೆಎ–06 –ಎಚ್‍ಇ–4873 ಸುಜುಕಿ ಆಕ್ಸಿಸ್ ಮೊಪೆಡ್ ವಾಹನದ ನೋಂದಣಿಯನ್ನು 12 ತಿಂಗಳ ಕಾಲ ರದ್ದುಗೊಳಿಸಿ ನ್ಯಾಯಾಧೀಶರು ಆದೇಶಿಸಿದ್ದಾರೆ.

ನಗರದ ಬಟವಾಡಿ ರಸ್ತೆಯಲ್ಲಿ ವ್ಹೀಲಿಂಗ್ ಮಾಡುವ ಸಮಯದಲ್ಲಿ ಕಾನೂನು ಸಂಘರ್ಷಕ್ಕೆ ಒಳಗಾದ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದು ಕಾನೂನು ಕ್ರಮ ಕೈಗೊಂಡಿದ್ದರು. ಮರಳೂರು ದಿಣ್ಣೆ ಬಡಾವಣೆಯ ಕೈಸರ್ ಷರೀಫ್ ಅವರು ಮಕ್ಕಳು ಮಾಡಿದ ತಪ್ಪಿಗೆ ದಂಡ ತೆತ್ತಿದ್ದಾರೆ. ಬೈಕ್ ಚಾಲನೆ ಮಾಡಿದ ಇಬ್ಬರು ಮಕ್ಕಳಿಗೂ ದಂಡ ವಿಧಿಸಲಾಗಿದೆ.

ADVERTISEMENT

ಘಟನೆ ಹಿನ್ನೆಲೆ: ಇಬ್ಬರು ಬಾಲಕರು ವ್ಹೀಲಿಂಗ್ ಮಾಡುತ್ತಿದ್ದ ಸಮಯದಲ್ಲಿ ಸಂಚಾರಿ ಪೊಲೀಸರಿಗೆ ಸಿಕ್ಕಿ ಬಿದಿದ್ದರು. ಇಬ್ಬರು ಬಾಲಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಬಾಲ ನ್ಯಾಯಮಂಡಳಿ ನ್ಯಾಯಾಲಯದಲ್ಲಿ (ಅಪ್ರಾಪ್ತರಾದ ಕಾರಣ) ದೋಷಾರೋಪಣೆ ಪತ್ರ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರು, ಒಬ್ಬ ಬಾಲಕನಿಗೆ ₹2,100, ಮತ್ತೊಬ್ಬ ಬಾಲಕನಿಗೆ ₹2,400 ದಂಡ ವಿಧಿಸಿದ್ದರು.

ಬಾಲಕರಿಗೆ ವಾಹನ ನೀಡಿದ ಆರೋಪದ ಮೇಲೆ ಮಾಲೀಕ ಕೈಸರ್ ಷರೀಫ್ ವಿರುದ್ಧ 2ನೇ ಅಧಿಕ ಸಿವಿಲ್ ನ್ಯಾಯಾಲಯದಲ್ಲಿ ಪೊಲೀಸರು ದೋಷಾರೋಪಣೆ ಪತ್ರ ಸಲ್ಲಿಸಿದ್ದರು. ನ್ಯಾಯಾಲಯದಲ್ಲಿ ತಪ್ಪು ಒಪ್ಪಿಕೊಂಡ ಷರೀಫ್ ಅವರಿಗೆ ನ್ಯಾಯಾಧೀಶರು ದಂಡ ವಿಧಿಸಿದ್ದಾರೆ.

ನಗರ ಹಾಗೂ ಜಿಲ್ಲೆಯಲ್ಲಿ ಬೈಕ್ ವ್ಹೀಲಿಂಗ್ ಮಾಡುವ ಹುಚ್ಚು ಸಾಹಸವನ್ನು ಕೆಲವರು ಮಾಡುತ್ತಿದ್ದಾರೆ. ವಿಕೃತ ಮನಸ್ಸಿನಿಂದ ಜೀವವನ್ನು ಪಣಕಿಟ್ಟು ಎಷ್ಟೋ ಯುವಕರು ಜೀವ ಕಳೆದುಕೊಂಡಿದ್ದಾರೆ. ಇಂತಹ ಸಾಹಸದ ಸಮಯದಲ್ಲಿ ಅಪಘಾತ ಸಂಭವಿಸಿದರೆ ಅಮಾಯಕ ವಾಹನ ಚಾಲಕರು, ಸಾರ್ವಜನಿಕರು ತೊಂದರೆ ಅನುಭವಿಸುತ್ತಾರೆ. ಜತೆಗೆ ಜೀವ ಹಾನಿಯಾಗುತ್ತಿರುವುದು ಕಂಡು ಬಂದಿದೆ. ವ್ಹೀಲಿಂಗ್ ಮಾಡುವ ವಾಹನ ಚಾಲಕರು ಮತ್ತು ವಾಹನ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಹುಚ್ಚು ಸಾಹಸ ಪ್ರದರ್ಶಿಸುವವರು ಕಂಡು ಬಂದರೆ ದೂರವಾಣಿ ಸಂಖ್ಯೆ 112ಗೆ ಕರೆ ಮಾಡಿ ಮಾಹಿತಿ ನೀಡುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಾಪೂರವಾಡ್ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.