ADVERTISEMENT

ಬಿಜೆಪಿ ಜಿಲ್ಲಾ ಘಟಕಕ್ಕೆ ಸಾರಥಿ ಯಾರು?

ನಾಯಕರ ನಡುವಿನ ಅಭಿಪ್ರಾಯ ಭೇದವೇ ಆಯ್ಕೆಗೆ ಕಗ್ಗಂಟಾಗಿದೆಯೇ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2020, 13:37 IST
Last Updated 23 ಮಾರ್ಚ್ 2020, 13:37 IST
ಲಕ್ಷ್ಮಿಶ್
ಲಕ್ಷ್ಮಿಶ್   

ತುಮಕೂರು: ರಾಜ್ಯದ ಬಹುತೇಕ ಜಿಲ್ಲೆಗಳ ಬಿಜೆಪಿ ಘಟಕಕ್ಕೆ ನೂತನ ಅಧ್ಯಕ್ಷರ ನೇಮಕ ಮಾಡಲಾಗಿದೆ. ಆದರೆ ಜಿಲ್ಲೆಯಲ್ಲಿ ಮಾತ್ರ ಹೊಸ ಸಾರಥಿಯ ಪದಗ್ರಹಣವಾಗಿಲ್ಲ. ಇದು ಕಾರ್ಯಕರ್ತರ ವಲಯದಲ್ಲಿ ಅಚ್ಚರಿಗೆ ಕಾರಣವಾಗಿದ್ದರೆ, ಬಿಜೆಪಿ ಮುಖಂಡರ ಆಂತರಿಕ ವಲಯದಲ್ಲಿ ಅಸಮಾಧಾನದ ಎಲೆ ಎಬ್ಬಿಸಿದೆ.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷರೂ ಆಗಿರುವ ಶಾಸಕ ಜಿ.ಬಿ.ಜ್ಯೋತಿಗಣೇಶ್ ಅವರ ಅಧ್ಯಕ್ಷ ಸ್ಥಾನದ ಅವಧಿ ಪೂರ್ಣವಾಗಿದೆ. ಅವರು ಶಾಸಕರಾಗಿರುವ ಕಾರಣ ಅವರಿಗೆ ತಮ್ಮದೇ ಆದ ಕಾರ್ಯಭಾರದ ಒತ್ತಡಗಳು ಸಹ ಇವೆ.

ಗ್ರಾಮ ಪಂಚಾಯಿತಿ ಚುನಾವಣೆ ಹತ್ತಿರದಲ್ಲಿದೆ. ಮುಂದಿನ ವರ್ಷ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಅಧ್ಯಕ್ಷರ ಜವಾಬ್ದಾರಿಗಳು ಸಹಜವಾಗಿ ಹೆಚ್ಚಿವೆ. ಈ ಎಲ್ಲ ದೃಷ್ಟಿಯಿಂದ ಹೊಸ ಅಧ್ಯಕ್ಷರ ನೇಮಕ ಅನಿವಾರ್ಯ.

ADVERTISEMENT

ಅಧ್ಯಕ್ಷರ ಆಯ್ಕೆ ವಿಚಾರದಲ್ಲಿ ಜಿಲ್ಲಾ ಮುಖಂಡರ ಅಭಿಪ್ರಾಯವನ್ನು ರಾಜ್ಯ ಮಟ್ಟದ ವರಿಷ್ಠರು ಈಗಾಗಲೇ ಸಂಗ್ರಹಿಸಿದ್ದಾರೆ. ಪಕ್ಷದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿಗಳಾಗಿರುವ ರವಿಶಂಕರ್ ಹೆಬ್ಬಾಕ, ವಿ.ಲಕ್ಷ್ಮಿಶ್ ಹಾಗೂ ಮಾಜಿ ಶಾಸಕ ಬಿ.ಸುರೇಶ್ ಗೌಡ ಅವರ ಹೆಸರುಗಳು ಮುಂಚೂಣಿಯಲ್ಲಿವೆ. ಈ ಮೂವರ ಹೆಸರುಗಳನ್ನು ಜಿಲ್ಲಾ ಸಮಿತಿ ವರಿಷ್ಠರಿಗೆ ಶಿಫಾರಸು ಮಾಡಿದೆ ಎನ್ನುತ್ತವೆ ಮೂಲಗಳು. ವೈದ್ಯಕೀಯ ಪ್ರಕೋಷ್ಠ ಸಹ ಸಂಚಾಲಕರಾಗಿರುವ ಡಾ.ಲಕ್ಷ್ಮಿಕಾಂತ್ ಅವರ ಹೆಸರು ಸಹ ಕೇಳಿ ಬಂದಿದೆ. ಇವರು ಚಿತ್ರದುರ್ಗದ ಸ್ವಾಮೀಜಿ ಒಬ್ಬರ ಮೂಲಕ ಪ್ರಯತ್ನ ನಡೆಸಿದ್ದಾರೆ ಎನ್ನಲಾಗುತ್ತಿದೆ.

ಜಿಲ್ಲೆಯ ಮಟ್ಟಿಗೆ ಸಚಿವ ಜೆ.ಸಿ.ಮಾಧುಸ್ವಾಮಿ, ಸಂಸದ ಜಿ.ಎಸ್.ಬಸವರಾಜು ಅವರೇ ಬಿಜೆಪಿ ಉನ್ನತ ನಾಯಕರು. ಇವರ ಬೆಂಬಲವೇ ಮುಖ್ಯ. ಹಿರಿಯ ಮುಖಂಡ ಸೊಗಡು ಶಿವಣ್ಣ ಸಹ ಅಧ್ಯಕ್ಷ ಸ್ಥಾನದ ಆಯ್ಕೆ ವಿಚಾರದಲ್ಲಿ ಗಮನವಿಟ್ಟಿದ್ದಾರೆ ಎನ್ನುತ್ತವೆ ಬಿಜೆಪಿ ಮೂಲಗಳು.

ನಾಯಕರಲ್ಲಿ ಒಮ್ಮತ ಮೂಡಿಸುವುದು ಮತ್ತು ಒಮ್ಮತದ ಅಭ್ಯರ್ಥಿಯನ್ನು ಆಯ್ಕೆ ಮಾಡುವುದೇ ರಾಜ್ಯ ನಾಯಕರಿಗೆ ತಲೆನೋವಾಗಿದೆ. ಜಾತಿ ಸಮೀಕರಣ, ಆರ್‌ಎಸ್‌ಎಸ್ ಹಿನ್ನೆಲೆ, ಸಂಘಟನಾ ಚಾತುರ್ಯ ಈ ಎಲ್ಲವನ್ನೂ ಅಳೆದು ತೂಗಿ ಜವಾಬ್ದಾರಿ ವಹಿಸುವುದು ವರಿಷ್ಠರ ಲೆಕ್ಕಾಚಾರ.

ತುಮಕೂರು ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನದ ವಿಚಾರವಾಗಿಯೇ 10 ಸಭೆಗಳು ಇಲ್ಲಿಯವರೆಗೆ ನಡೆದಿವೆ. ರಾಜ್ಯ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾನ ಅವರು ಮೂರು ಬಾರಿ ನಗರಕ್ಕೆ ಬಂದು ವಾಪಸ್ ಆಗಿದ್ದಾರ ಎನ್ನುತ್ತವೆ ಮೂಲಗಳು.

ಹೆಬ್ಬಾಕ ರವಿಶಂಕರ್, ಪಕ್ಷದ ಎಲ್ಲ ಸ್ತರಗಳಲ್ಲಿಯೂ ಕೆಲಸ ಮಾಡಿದ್ದಾರೆ. ಸದ್ಯ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿರುವ ಅವರು ಜಿಲ್ಲೆಯಲ್ಲಿ ಹೆಚ್ಚಿನದಾಗಿಯೇ ಪರಿಚಿತರು. ರವಿಶಂಕರ್‌ಗೆ ಸಂಸದ ಜಿ.ಎಸ್.ಬಸವರಾಜು ಮತ್ತು ಸಚಿವ ಜೆ.ಸಿ.ಮಾಧುಸ್ವಾಮಿ ಪ್ರಮುಖ ‘ಬಲ’ವಾಗಿದ್ದಾರೆ.

ಮಂಡಲ ಘಟಕದಿಂದ ವಿಭಾಗ ಸಹ ಪ್ರಭಾರಿವರೆಗೂ ಬೆಳೆದಿರುವ ಲಕ್ಷ್ಮಿಶ್ ಅವರಿಗೆ ಸಂಘ ಪರಿವಾರ ಬೆಂಬಲವಾಗಿದೆ ಎನ್ನುತ್ತವೆ ಮೂಲಗಳು. ಸುರೇಶ್ ಗೌಡ ಈ ಹಿಂದೆ ಜಿಲ್ಲಾ ಘಟಕದ ಅಧ್ಯಕ್ಷ ಹಾಗೂ ರಾಜ್ಯ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದಾರೆ. ರಾಜ್ಯ ಮಟ್ಟದಲ್ಲಿ ತಮ್ಮದೇ ಆದ ‘ಪ್ರಭಾವ’ ಹೊಂದಿದ್ದಾರೆ. ಈ ಮೂವರ ನಡುವೆ ಜಿಲ್ಲಾ ಘಟಕದ ಸಾರಥ್ಯಕ್ಕೆ ಪೈಪೋಟಿ ಇದೆ.

ಜಿಲ್ಲಾ ಬಿಜೆಪಿಯಲ್ಲಿ ಲಿಂಗಾಯತರ ಪಾರಮ್ಯ ಹೆಚ್ಚಿದೆ. ಆ ಕಾರಣದಿಂದ ಲಿಂಗಾಯತೇತರ ವ್ಯಕ್ತಿಗೆ ಅಧ್ಯಕ್ಷ ಹುದ್ದೆ ನೀಡಬೇಕು ಎನ್ನುವುದು ಸಹ ಪಕ್ಷದ ಕೆಲ ಮುಖಂಡರ ಪ್ರತಿಪಾದನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.