ADVERTISEMENT

PV Web Exclusive: ನೆಲೆ ವಿಸ್ತರಿಸಲು ಸಜ್ಜಾದ ಬಿಜೆಪಿ ನಾಯಕರು

ಕೆ.ಆರ್.ಪೇಟೆ ಮಾದರಿಯಲ್ಲಿ ಪ್ರಯೋಗ ಮಾಡಲು ಸಿದ್ಧತೆ

ಕೆ.ಜೆ.ಮರಿಯಪ್ಪ
Published 11 ಸೆಪ್ಟೆಂಬರ್ 2020, 8:00 IST
Last Updated 11 ಸೆಪ್ಟೆಂಬರ್ 2020, 8:00 IST
ಬಿಜೆಪಿ
ಬಿಜೆಪಿ    

ತುಮಕೂರು: ಶಿರಾ ವಿಧಾನಸಭೆ ಉಪ ಚುನಾವಣೆ ಮೂಲಕ ತನ್ನ ಅಸ್ತಿತ್ವವನ್ನು ಮತ್ತಷ್ಟು ಗಟ್ಟಿಗೊಳಿಸುವ ಹಾಗೂ ವಿಸ್ತರಿಸುವ ಪ್ರಯತ್ನದಲ್ಲಿ ಬಿಜೆಪಿ ಸಾಗಿದೆ. ಜಿಲ್ಲೆಯ ರಾಜಕಾರಣಕ್ಕೆ ಹೊಸ ತಿರುವು ಸಿಗಲಿದೆ ಎಂಬ ಕಾರಣಕ್ಕೆ ಪಕ್ಷದ ಮುಖಂಡರು ಟೊಂಕಕಟ್ಟಿ ನಿಂತಿದ್ದಾರೆ.

ಜೆಡಿಎಸ್‌ನಿಂದ ಆಯ್ಕೆಯಾಗಿದ್ದ ಬಿ.ಸತ್ಯನಾರಾಯಣ ನಿಧನದಿಂದ ಶಿರಾ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಬೇಕಿದೆ. ಚುನಾವಣೆ ದಿನಾಂಕ ಇನ್ನೂ ನಿಗದಿಯಾಗಿಲ್ಲ. ಯಾವ ಪಕ್ಷಗಳೂ ಅಭ್ಯರ್ಥಿಗಳನ್ನು ಅಂತಿಮಗೊಳಿಸಿಲ್ಲ. ಅದಕ್ಕೂ ಮುನ್ನವೇ ಬಿಜೆಪಿ ‘ಯೋಜನೆ’ ರೂಪಿಸಿಕೊಂಡು ಅಖಾಡಕ್ಕೆ ಇಳಿದಿದೆ.

ಚುನಾವಣೆ ದೃಷ್ಟಿಯಲ್ಲಿ ಇಟ್ಟುಕೊಂಡೇ ಪಕ್ಷದ ರಾಜ್ಯಮಟ್ಟದ ನಾಯಕರನ್ನು ಒಂದೊಂದು ನೆಪಮಾಡಿಕೊಂಡು ಕ್ಷೇತ್ರಕ್ಕೆ ಕರೆಸಿ, ಪ್ರಚಾರ ಮಾಡಿಸಲಾಗುತ್ತಿದೆ. ಈಗಾಗಲೇ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಕೆಲವು ಅಭಿವೃದ್ಧಿ ಕಾರ್ಯಕ್ರಮಗಳಿಗೆಚಾಲನೆ ನೀಡಿ ಹೋಗಿದ್ದಾರೆ. ಗುರುವಾರವಷ್ಟೇ ಕಂದಾಯ ಸಚಿವ ಆರ್.ಅಶೋಕ ಭೇಟಿ ನೀಡಿದ್ದರು. ಬಿಜೆಪಿ ರಾಜ್ಯಮಟ್ಟದ ನಾಯಕರು ಆಗಾಗ ಭೇಟಿನೀಡಿ ಕಾರ್ಯಕರ್ತರನ್ನು ಸಜ್ಜುಗೊಳಿಸಿ ಪ್ರಚಾರಕ್ಕೆ ಇಳಿದಿದ್ದಾರೆ. ಬಿಜೆಪಿ ಆರಂಭಿಕ ಹಂತದ ಪ್ರಚಾರ ಮುಗಿಸಿದಂತೆ ಕಾಣುತ್ತಿದೆ.

ADVERTISEMENT

ಮಂಡ್ಯ ಜಿಲ್ಲೆಯಲ್ಲಿ ಕಳೆದ ವಿಧಾನಸಭೆ ಚುನಾವಣೆವರೆಗೂ ಬಿಜೆಪಿ ಗೆಲವು ಸಾಧ್ಯವಾಗಿರಲಿಲ್ಲ. ಉಪ ಚುನಾವಣೆಯಲ್ಲಿ ಕೆ.ಆರ್.ಪೇಟೆ ಕ್ಷೇತ್ರವನ್ನು ಗೆದ್ದುಕೊಂಡ ನಂತರ ರಾಜ್ಯದಲ್ಲಿ ಯಾವ ಕ್ಷೇತ್ರವೂ ಕಷ್ಟಕರವಾಗಲಾರದು. ‘ಸರಿಯಾದ ಪ್ರಯತ್ನ’ ನಡೆಸಿದರೆ ಎಲ್ಲವೂ ಸಾಧ್ಯವಾಗಲಿದೆ ಎಂದು ಬಿಜೆಪಿ ಮುಖಂಡರು ಭಾವಿಸಿದಂತಿದೆ. ಅದೇ ಉಮೇದಿನಲ್ಲಿ ಶಿರಾ ಕ್ಷೇತ್ರವನ್ನೂ ತನ್ನ ಬತ್ತಳಿಕೆಗೆ ಸೇರಿಸಿಕೊಳ್ಳಲು ಕಾರ್ಯತಂತ್ರ ಎಣಿದಿದೆ ಎಂದು ಮೂಲಗಳು ತಿಳಿಸಿವೆ.

ರಾಜ್ಯದಲ್ಲಿ ಪಕ್ಷ ಅಧಿಕಾರದಲ್ಲಿ ಇದೆ. ಸಂಸದರು, ನಾಲ್ವರು ಶಾಸಕರು ಇದ್ದಾರೆ. ಶಿರಾ ಕ್ಷೇತ್ರದಲ್ಲಿ ಭೂಮಿಕೆ ಸಿದ್ಧಪಡಿಸುವ ಜವಾಬ್ದಾರಿಯನ್ನು ಜಿಲ್ಲೆಯ ನಾಯಕರಿಗೆ ವಹಿಸಲಾಗಿದೆ. ರಾಜ್ಯ ಮಟ್ಟದ ನಾಯಕರು ಬೇಕಾದ ವ್ಯವಸ್ಥೆ ಮಾಡುತ್ತಾರೆ. ಸಂಪನ್ಮೂಲ, ಇತರ ಎಲ್ಲವನ್ನೂ ಹಿರಿಯರು ನೋಡಿಕೊಳ್ಳುತ್ತಾರೆ. ಒಟ್ಟಾರೆ, ಗೆಲುವಿಗೆ ಬೇಕಾದ ಕಾರ್ಯತಂತ್ರ ರೂಪಿಸುವ ಜವಾಬ್ದಾರಿಯನ್ನು ಸ್ಥಳೀಯ ನಾಯಕರಿಗೆ ವಹಿಸಲಾಗಿದೆ. ಆರಂಭದಿಂದಲೇ ಎಲ್ಲವೂ ಅಂದುಕೊಂಡಂತೆ ನಡೆಯುತ್ತಿದೆ. ವ್ಯವಸ್ಥಿತವಾಗಿ, ಯಾವುದೇ ಅವ್ಯವಸ್ಥೆ ಇಲ್ಲದೆ ಚುನಾವಣೆ ನಡೆಸಲು ಸಜ್ಜಾಗುತ್ತಿದ್ದೇವೆ ಎಂದು ಮುಖಂಡರೊಬ್ಬರು ತಿಳಿಸಿದರು.

ಜಿಲ್ಲೆಯ ಬಹುತೇಕ ಬಿಜೆಪಿ ಶಾಸಕರು, ಸಂಸದರು ಪಕ್ಷಕ್ಕಿಂತ ತಮ್ಮ ವೈಯಕ್ತಿಕ ನೆಲೆಯಲ್ಲಿ ಗೆದ್ದು ಅಧಿಕಾರ ಹಿಡಿದವರು. ಜಿಲ್ಲೆಯಲ್ಲಿ ಪಕ್ಷಕ್ಕೆ ಭದ್ರ ನೆಲೆ ಮೊದಲಿನಿಂದಲೂ ಇಲ್ಲವಾಗಿದೆ. ಈ ವಿಚಾರ ಪಕ್ಷದ ನಾಯಕರಿಗೂ ಗೊತ್ತಿದೆ. ಶಿರಾ ಉಪ ಚುನಾವಣೆ ಮೂಲಕ ಪಕ್ಷವನ್ನು ಗಟ್ಟಿಗೊಳಿಸುವ ಕೆಲಸ ಮಾಡಬೇಕು. ಬಿಜೆಪಿ ಪರವಾದ ಸಂದೇಶ ರವಾನೆಯಾದರೆ ಮುಂದಿನ ವಿಧಾನಸಭೆ ಚುನಾವಣೆ ವೇಳೆಗೆ ಜಿಲ್ಲೆಯಲ್ಲಿ ಪಕ್ಷದ ನೆಲೆಯನ್ನು ಮತ್ತಷ್ಟು ವಿಸ್ತರಿಸಲು ಸಹಕಾರಿಯಾಗುತ್ತದೆ. ಆ ಕಾರಣಕ್ಕೆ ಚುನಾವಣೆಯನ್ನು ಪ್ರತಿಷ್ಠೆಯಾಗಿ ಪರಿಗಣಿಸಲಾಗಿದೆ. ಕೆ.ಆರ್.ಪೇಟೆಯಲ್ಲಿ ನಡೆದ ಎಲ್ಲಾ ರೀತಿಯ ‘ಪ್ರಯೋಗಗಳು’ ಇಲ್ಲೂ ನಡೆಯಲಿವೆ ಎಂದು ಹೇಳಲಾಗುತ್ತಿದೆ.

ಕೆಲವು ಪ್ರಮುಖ ನಾಯಕರಿಗೆ ಹಾಗೂ ರಾಜ್ಯ ಮಟ್ಟದ ಪ್ರಮುಖರಿಗೆ ಜಾವಾಬ್ದಾರಿಯನ್ನೂ ಹಂಚಿಕೆ ಮಾಡಲಾಗುತ್ತಿದೆ. ಯಾರು ಯಾವ ಹೊಣೆ ನಿರ್ವಹಿಸಬೇಕು, ಸ್ಥಳೀಯರ ಜತೆ ಸತತ ಸಂಪರ್ಕ ಸಾಧಿಸುವ ಮೂಲಕ ಏನೆಲ್ಲ ಕಾರ್ಯತಂತ್ರ ಎಣೆಯಬೇಕು ಎಂಬ ಬಗ್ಗೆ ಚರ್ಚೆಗಳು ಪ್ರಮುಖವಾಗಿ ನಡೆದಿವೆ. ಶೀಘ್ರ ಎಲ್ಲವೂ ಕಾರ್ಯರೂಪಕ್ಕೆ ಬರಲಿವೆ, ಚಟುವಟಿಕೆಗಳು ಮತ್ತಷ್ಟು ಚುರುಕಾಗಲಿವೆ ಎಂದು ಮೂಲಗಳು ತಿಳಿಸಿವೆ.

11 -ಒಟ್ಟು ವಿಧಾನಸಭಾ ಕ್ಷೇತ್ರ

4 -ಕ್ಷೇತ್ರದಲ್ಲಿ ಬಿಜೆಪಿ ಶಾಸಕರು

3 -ಕ್ಷೇತ್ರದಲ್ಲಿ ಜೆಡಿಎಸ್

3- ಕ್ಷೇತ್ರದಲ್ಲಿ ಕಾಂಗ್ರೆಸ್

1 -ಕ್ಷೇತ್ರ (ಶಿರಾ) ಖಾಲಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.