ADVERTISEMENT

ಬಿಜೆಪಿಯಿಂದ ಐಟಿ, ಇಡಿ, ಸಿಬಿಐಗಳ ದುರುಪಯೋಗ: ಮಯೂರ ಜಯಕುಮಾರ್‌ ಆರೋಪ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2024, 15:04 IST
Last Updated 19 ಏಪ್ರಿಲ್ 2024, 15:04 IST

ಶಿರಾ: ‘ದೇಶದಲ್ಲಿ ಜನರಿಗೆ ಕಾಂಗ್ರೆಸ್ ಬಗ್ಗೆ ಖಾತ್ರಿ ಬಂದಿದ್ದು ಈ ಬಾರಿ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿಯುವುದು ಖಚಿತ’ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಯೂರ ಜಯಕುಮಾರ್‌ ಹೇಳಿದರು.

ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ಐಟಿ, ಇಡಿ ಮತ್ತು ಸಿಬಿಐಗಳನ್ನು ದುರುಪಯೋಗ ಮಾಡಿಕೊಳ್ಳುವ ಮೂಲಕ ವಿರೋಧ ಪಕ್ಷಗಳನ್ನು ಮಣಿಸುತ್ತಿದೆ ಎಂದು ನಗರದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ಎಲೆಕ್ಟೋರಲ್ ಬಾಂಡ್ ಮೂಲಕ ಕೇಂದ್ರ ಸರ್ಕಾರ ₹6,060 ಕೋಟಿ ಹಗರಣ ನಡೆಸಿದರೂ ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ತುಟಿ ಬಿಚ್ಚುತ್ತಿಲ್ಲ. ಅಭಿವೃದ್ಧಿ ಕೆಲಸ ಕುಂಠಿತವಾಗುತ್ತಿದ್ದು ಜನತೆ ಬಿಜೆಪಿ ಬಗ್ಗೆ ಬೇಸತ್ತಿದ್ದಾರೆ ಎಂದರು.

ADVERTISEMENT

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ನೀಡಿದ ಗ್ಯಾರಂಟಿ ಯೋಜನೆಗಳಿಂದಾಗಿ ಜನರು ಸ್ವಾವಲಂಬಿ ಬದುಕು ಕಟ್ಟಿಕೊಂಡಿದ್ದಾರೆ. ಜನಪರ ಆಡಳಿತದ ಹಿನ್ನೆಲೆಯಲ್ಲಿ ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಗರಿಷ್ಠ ಸ್ಥಾನ ಪಡೆಯುವುದು ಖಚಿತ ಎಂದರು.

ಶಾಸಕ ಟಿ.ಬಿ.ಜಯಚಂದ್ರ ಮಾತನಾಡಿ, ಬಿಜೆಪಿ ಹಿಂದುತ್ವವನ್ನು ಬಂಡವಾಳವನ್ನಾಗಿ ಮಾಡಿಕೊಂಡು ಚುನಾವಣೆ ಗೆಲ್ಲಲು ಹೊರಟಿದೆ. ಕೋಮುವಾದಿಗಳಾದ ಇವರಿಗೆ ಜನತೆ ತಕ್ಕ ಪಾಠ ಕಲಿಸುವರು ಎಂದರು.

ಮತಪತ್ರದ ಮೂಲಕ ಚುನಾವಣೆ ನಡೆದರೆ ಬಿಜೆಪಿ ಯಾವುದೇ ಕಾರಣಕ್ಕೂ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎಂದರು.

ತುಮಕೂರು ಜಿಲ್ಲೆ ವ್ತಾಪ್ತಿಯ ಮೂರು ಲೋಕಸಭಾ ಕ್ಷೇತ್ರಗಳಲ್ಲಿ ಬಿ.ಎನ್.ಚಂದ್ರಪ್ಪ, ಎಸ್.ಪಿ.ಮುದ್ದಹನುಮೇಗೌಡ, ಡಿ.ಕೆ.ಸುರೇಶ್ ಅವರು ಗೆಲುವು ಸಾಧಿಸುವುದು ಖಚಿತ ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಆರ್.ಮಂಜುನಾಥ್, ಬರಗೂರು ನಟರಾಜು, ಕೆಪಿಸಿಸಿ ಸದಸ್ಯ ಟಿ.ಲೋಕೇಶ್, ಕೆಪಿಸಿಸಿ ಅಲ್ಪಸಂಖ್ಯಾತರ ಘಟಕದ ರಾಜ್ಯ ಉಪಾಧ್ಯಕ್ಷ ಅಬ್ದುಲ್ಲಾ ಖಾನ್, ಅಮಾನುಲ್ಲಾ ಖಾನ್, ನಗರಸಭೆ ಸದಸ್ಯರಾದ ಅಜೇಯ್ ಕುಮಾರ್, ಕೃಷ್ಣಪ್ಪ, ರಾಧಾಕೃಷ್ಣ, ಮದ್ದಾಕನಹಳ್ಳಿ ತಿಪ್ಪೇಸ್ವಾಮಿ ಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.