ADVERTISEMENT

ತುಮಕೂರು: ಗ್ರಾಮಾಂತರದಲ್ಲಿ ತಳ ಭದ್ರಪಡಿಸಿದ ಬಿಜೆಪಿ

ಮೀಸಲಾತಿ ನಿಗದಿಯಲ್ಲಿ ತಾರತಮ್ಯ: ಗೌರಿಶಂಕರ್ ಆರೋಪ

ಕೆ.ಜೆ.ಮರಿಯಪ್ಪ
Published 9 ಫೆಬ್ರುವರಿ 2021, 2:01 IST
Last Updated 9 ಫೆಬ್ರುವರಿ 2021, 2:01 IST
ಡಿ.ಸಿ.ಗೌರಿಶಂಕರ್
ಡಿ.ಸಿ.ಗೌರಿಶಂಕರ್   

ತುಮಕೂರು: ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಬಹುತೇಕ ಗ್ರಾಮ ಪಂಚಾಯಿತಿಗಳಲ್ಲಿ ಬಿಜೆಪಿ ಬೆಂಬಲಿಗರು ಅಧಿಕಾರ ಹಿಡಿದಿದ್ದಾರೆ.

ಕ್ಷೇತ್ರದ ವ್ಯಾಪ್ತಿಗೆ 35 ಗ್ರಾಮ ಪಂಚಾಯಿತಿಗಳು ಬರಲಿದ್ದು, ಅದರಲ್ಲಿ 33 ಗ್ರಾ.ಪಂ.ಗಳಲ್ಲಿ ಬಿಜೆಪಿ ಬೆಂಬಲಿಗರು ಅಧ್ಯಕ್ಷರಾಗಿ ಅಯ್ಕೆಯಾಗುವ ಮೂಲಕ ಅಧಿಕಾರದ ಗದ್ದುಗೆಗೆ ಏರಿದ್ದಾರೆ. ಇದರಿಂದಾಗಿ ಬಹುತೇಕ ಗ್ರಾ.ಪಂ.ಗಳು ಬಿಜೆಪಿ ಬೆಂಬಲಿಗರ ವಶವಾದಂತಾಗಿವೆ.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್‌ನ ಡಿ.ಸಿ.ಗೌರಿಶಂಕರ್ ಶಾಸಕರಾಗಿ ಆಯ್ಕೆ ಆಗಿದ್ದರು. ಹಿಂದಿನ ಬಾರಿ ಕ್ಷೇತ್ರ ಪ್ರತಿನಿಧಿಸುತ್ತಿದ್ದ ಬಿಜೆಪಿಯ ಸುರೇಶ್‌ಗೌಡ ಸೋತು, ಅಧಿಕಾರ ಕಳೆದುಕೊಂಡಿದ್ದರು. ವಿಧಾನಸಭೆ ಚುನಾವಣೆ ನಂತರ ಎದುರಾದ ಹಾಗೂ ಕ್ಷೇತ್ರದಲ್ಲಿ ನೇರ ಪರಿಣಾಮ ಬೀರಲಿರುವ ಗ್ರಾಮ ಪಂಚಾಯಿತಿಗಳಲ್ಲಿ ಮಾಜಿ ಶಾಸಕರು ತಮ್ಮ ಬೆಂಬಲಿಗರನ್ನು ಅಧಿಕಾರದಲ್ಲಿ ಕೂರಿಸಿದ್ದಾರೆ. ಆ ಮೂಲಕ ಕ್ಷೇತ್ರದಲ್ಲಿ ಪಕ್ಷಕ್ಕೆ ಮತ್ತಷ್ಟು ಬಲ ತುಂಬಿದ್ದು, ಮುಂಬರುವ ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಚುನಾವಣೆಗೆ ಸಜ್ಜಾಗುತ್ತಿದ್ದಾರೆ.

ADVERTISEMENT

ಗ್ರಾಮೀಣ ಭಾಗದಲ್ಲಿ ಗ್ರಾಮ ಪಂಚಾಯಿತಿಗಳು ಪ್ರಮುಖ ಪಾತ್ರ ವಹಿಸುತ್ತವೆ. ತಳ ಮಟ್ಟದಲ್ಲಿ ಅಧಿಕಾರ ಹಿಡಿದು, ಪಕ್ಷ ಸಂಘಟಿಸಿದರೆ ಮುಂಬರುವ ವಿಧಾನಸಭಾ ಚುನಾವಣೆಗೆ ಭದ್ರಬುನಾದಿ ಹಾಕಿದಂತೆ ಆಗುತ್ತದೆ. ಅದೇ ಕಾರಣಕ್ಕೆ ಗ್ರಾ.ಪಂ ಚುನಾವಣೆಯನ್ನು ಬಳಸಿಕೊಂಡು ತಮ್ಮವರು ಅಧಿಕಾರ ಸ್ಥಾನದಲ್ಲಿ ಇರುವಂತೆ ಸುರೇಶ್‌ಗೌಡ ನೋಡಿಕೊಂಡಿದ್ದಾರೆ. ಈಗಿನ ಪ್ರಯತ್ನ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಫಲ ಕೊಡಲಿದೆ ಎಂದು ನಂಬಿದ್ದಾರೆ.

ಗ್ರಾ.ಪಂ ಚುನಾವಣೆಗೆ ತಮ್ಮ ಪಕ್ಷದ ಬೆಂಬಲಿಗ ಅಭ್ಯರ್ಥಿಗಳನ್ನು ಆಯ್ಕೆಮಾಡಿ ಸ್ಪರ್ಧೆಗೆ ಇಳಿಸಿ, ಆಯ್ಕೆ ಆಗುವಂತೆ ನೋಡಿಕೊಂಡಿದ್ದಾರೆ. ನಂತರ ಅಧಿಕಾರ ಕೊಡಿಸಲೂ ‘ಶಕ್ತಿಮೀರಿ’ ಶ್ರಮಿಸಿದ್ದಾರೆ. ಗ್ರಾ.ಪಂ ಅಧ್ಯಕ್ಷ, ಉಪಾಧ್ಯಕ್ಷರ ಮೀಸಲಾತಿ ನಿಗದಿಯಲ್ಲೂ ಸಾಕಷ್ಟು ‘ಪ್ರಯತ್ನ’ ನಡೆಸಿದ್ದಾರೆ. ಕೊನೆಗೆ ತಮ್ಮವರಿಗೆ ಅಧಿಕಾರ ಒಲಿದುಬರುವಂತೆ ನೋಡಿಕೊಂಡಿದ್ದಾರೆ. ಈಗ ಮಾಡಿರುವ ಬಿತ್ತನೆ ಮುಂದಿನ ವಿಧಾನಸಭೆ ಚುನಾವಣೆ ವೇಳೆಗೆ ಬೆಳೆದು ಕೊಯ್ಲಿಗೆ ಸಿದ್ಧವಾಗಲಿದೆ ಎಂದು ಜಿಲ್ಲೆಯ ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ.

ಜೆಡಿಎಸ್ ವಾದ: ಸಾಕಷ್ಟು ಗ್ರಾ.ಪಂ.ಗಳಲ್ಲಿ ಅಧಿಕಾರ ಹಿಡಿಯಲು ಸಾಧ್ಯವಾಗಿಲ್ಲ ಎಂಬ ಸತ್ಯವನ್ನು ಜೆಡಿಎಸ್ ಮುಖಂಡರು ಒಪ್ಪಿಕೊಳ್ಳುತ್ತಾರೆ. ಕ್ಷೇತ್ರದ ವ್ಯಾಪ್ತಿಗೆ ಬರುವ 626 ಗ್ರಾ.ಪಂ ಸದಸ್ಯರಲ್ಲಿ 290 ಸದಸ್ಯರು ಜೆಡಿಎಸ್ ಬೆಂಬಲಿಗರು. ಆದರೆ ಬಹುತೇಕ ಕಡೆಗಳಲ್ಲಿ ಬಹುಮತ ಇದ್ದರೂ ಅಧಿಕಾರ ಸಿಗದಂತೆ ಮೀಸಲಾತಿ ನಿಗದಿಪಡಿಸಲಾಯಿತು. ಅಧಿಕಾರ ಕೈತಪ್ಪುವಂತೆ ಆಡಳಿತ ಪಕ್ಷದವರು ನೋಡಿಕೊಂಡರು ಎಂದು ಆರೋಪಿಸುತ್ತಾರೆ.

ಜೆಡಿಎಸ್ ಬೆಂಬಲಿಗರು ಹೆಚ್ಚಿನ ಸಂಖ್ಯೆಯಲ್ಲಿ ಗೆದ್ದಿರುವ ಗ್ರಾಮ ಪಂಚಾಯಿತಿಗಳಲ್ಲಿ ಮೀಸಲಾತಿ ನಿಗದಿಪಡಿಸುವಲ್ಲಿ ಕೈಚಳಕ ತೋರಿಸಲಾಗಿದೆ. ಜೆಡಿಎಸ್ ಬೆಂಬಲಿಗ ಸದಸ್ಯರು ಇಲ್ಲದ ಜಾತಿಯನ್ನು ನೋಡಿಕೊಂಡು ಮೀಸಲಾತಿ ನಿಗದಿಪಡಿಸಲಾಗಿದೆ. ಇದರಿಂದಾಗಿ ಸಾಕಷ್ಟು ಗ್ರಾ.ಪಂ.ಗಳಲ್ಲಿ ಅಧಿಕಾರ ಹಿಡಿಯಲು ಸಾಧ್ಯವಾಗಲಿಲ್ಲ ಎನ್ನುತ್ತಾರೆ.

ಮಸ್ಕಲ್, ಹರಿಯೂರು, ಗಂಗೊಂಡನಹಳ್ಳಿ, ನಿಡುವಳು, ಅರೆಗುಜ್ಜನಹಳ್ಳಿ ಸೇರಿದಂತೆ ಹಲವೆಡೆ ಮೀಸಲಾತಿ ನಿಗದಿಯಲ್ಲಿ ತಾರತಮ್ಯ ಮಾಡಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಹಾಗೂ ಬಹುಮತ ಇರುವ ಕಡೆಗಳಲ್ಲಿ ಅಧ್ಯಕ್ಷ ಸ್ಥಾನ ಪಡೆಯಲು ಸಾಧ್ಯವಾಗಿಲ್ಲ. ಆದರೆ ಇಂತಹ 6 ಗ್ರಾ.ಪಂ.ಗಳಲ್ಲಿ ಉಪಾಧ್ಯಕ್ಷ ಸ್ಥಾನ ಸಿಕ್ಕಿದೆ. ಬಹುಮತ ಇದ್ದರೂ ಅಧಿಕಾರ ಕೈತಪ್ಪಿದೆ ಎಂದು ಶಾಸಕ ಡಿ.ಸಿ.ಗೌರಿಶಂಕರ್ ಹೇಳುತ್ತಾರೆ.

‘ತಮ್ಮ ಬೆಂಬಲಿಗ ಸದಸ್ಯರಿಗೆ ಆಸೆ, ಆಮಿಷ ತೋರಿಸಿ ಬಿಜೆಪಿಯವರು ಸೆಳೆದುಕೊಂಡಿದ್ದಾರೆ. ಕೆಲವು ಕಡೆಗಳಲ್ಲಿ ಪೊಲೀಸರ ಮೂಲಕ ಬೆದರಿಕೆ ಹಾಕಿಸಿ ಬೆಂಬಲಿಸುವಂತೆ ನೋಡಿಕೊಂಡಿದ್ದಾರೆ’ ಎಂದು ಅವರು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.