ADVERTISEMENT

ಸುರೇಶ್‌ಗೌಡಗೆ ಬಿಜೆಪಿ ಸಾರಥ್ಯ

ಬಿಜೆಪಿ ಜಿಲ್ಲಾ ಘಟಕದ ನೂತನ ಅಧ್ಯಕ್ಷರಾಗಿ ಆಯ್ಕೆ; ಸಂಸದ, ಉಸ್ತುವಾರಿ ಸಚಿವರ ಶಿಫಾರಸಿಗಿಲ್ಲ ಮನ್ನಣೆ

​ಪ್ರಜಾವಾಣಿ ವಾರ್ತೆ
Published 22 ಜೂನ್ 2020, 14:54 IST
Last Updated 22 ಜೂನ್ 2020, 14:54 IST
ಸುರೇಶ್ ಗೌಡ ಅಧ್ಯಕ್ಷರಾಗಿದ್ದಕ್ಕೆ ಬಿಜೆಪಿ ಕಾರ್ಯಕರ್ತರು ತುಮಕೂರಿನ ಟೌನ್‌ಹಾಲ್ ಸಂಭ್ರಮಾಚರಣೆ ನಡೆಸಿದರು
ಸುರೇಶ್ ಗೌಡ ಅಧ್ಯಕ್ಷರಾಗಿದ್ದಕ್ಕೆ ಬಿಜೆಪಿ ಕಾರ್ಯಕರ್ತರು ತುಮಕೂರಿನ ಟೌನ್‌ಹಾಲ್ ಸಂಭ್ರಮಾಚರಣೆ ನಡೆಸಿದರು   

ತುಮಕೂರು: ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷರಾಗಿ ತುಮಕೂರು ಗ್ರಾಮಾಂತರ ಕ್ಷೇತ್ರದ ಮಾಜಿ ಶಾಸಕ ಬಿ.ಸುರೇಶ್‌ಗೌಡ ನೇಮಕವಾಗಿದ್ದಾರೆ. ಎರಡನೇ ಬಾರಿ ಅವರು ಜಿಲ್ಲಾ ಬಿಜೆಪಿ ಚುಕ್ಕಾಣಿ ಹಿಡಿದಿದ್ದಾರೆ. ರಾಜ್ಯ ಕಾರ್ಯದರ್ಶಿಯಾಗಿ ಕೆಲಸ ಮಾಡಿದ ಅನುಭವ ಸಹ ಅವರಿಗೆ ಇದೆ.

ರಾಜ್ಯದ ಇತರೆ ಜಿಲ್ಲಾ ಘಟಕಗಳಿಗೆ ಅಧ್ಯಕ್ಷರನ್ನು ನೇಮಕ ಮಾಡಿದ್ದರೂ ತುಮಕೂರು ಜಿಲ್ಲೆಯ ಆಯ್ಕೆ ಕಗ್ಗಂಟಾಗಿತ್ತು. ಬಿಜೆಪಿಯೊಳಗಿನ ‘ಮನೆಯೊಂದು ಮೂರು ಬಾಗಿಲು’ ಎನ್ನುವ ನಾಯಕರ ನಡೆಯ ಕಾರಣದಿಂದ ಆಯ್ಕೆ ಸಾಧ್ಯವಾಗಿರಲಿಲ್ಲ. ಸಂಸದ ಜಿ.ಎಸ್.ಬಸವರಾಜ್, ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರ ಒಲವು ಗಳಿಸುವ ಅಭ್ಯರ್ಥಿಯೇ ಅಧ್ಯಕ್ಷರಾಗುವರು ಎನ್ನುವ ಮಾತು ಪಕ್ಷದ ಅಂಗಳದಲ್ಲಿ ಪ್ರಬಲವಾಗಿತ್ತು. ಆದರೆ ಈ ಎಲ್ಲ ಬೆಳವಣಿಗೆಗಳನ್ನು ಹಿಂದಿಕ್ಕಿ ಸುರೇಶ್‌ಗೌಡ ಸಾರಥಿ ಆಗಿದ್ದಾರೆ.

ಅಧ್ಯಕ್ಷ ಸ್ಥಾನಕ್ಕೆ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿಗಳಾದ ರವಿಶಂಕರ್ ಹೆಬ್ಬಾಕ, ವಿ.ಲಕ್ಷ್ಮಿಶ್, ಸುರೇಶ್‌ಗೌಡ ಹೆಸರು ಮುಂಚೂಣಿಯಲ್ಲಿದ್ದವು. ಈ ಮೂವರ ಹೆಸರುಗಳನ್ನು ಜಿಲ್ಲಾ ಸಮಿತಿ ವರಿಷ್ಠರಿಗೆ ಶಿಫಾರಸು ಮಾಡಿತ್ತು. ಬಸವರಾಜ್ ಮತ್ತು ಮಾಧುಸ್ವಾಮಿ ಅವರು ರವಿಶಂಕರ್ ಪರ ತೀವ್ರ ಒಲವು ಹೊಂದಿದ್ದರು. ಪಕ್ಷದ ಹಿರಿಯ ನಾಯಕ ಸೊಗಡು ಶಿವಣ್ಣ ಅವರು ಸುರೇಶ್‌ಗೌಡ ಪರವಾಗಿ ನಿಂತಿದ್ದರು.ವಿ.ಲಕ್ಷ್ಮಿಶ್ ಅವರು ಸಂಘದ ಕಟ್ಟಾಳು ಎನಿಸಿದ್ದರು.

ADVERTISEMENT

2003ರಲ್ಲಿ ಕುಣಿಗಲ್ ವಿಧಾನಸಭಾ ಕ್ಷೇತ್ರದಿಂದ ಸೋಲು ಕಂಡ ಸುರೇಶ್‌ಗೌಡ, ಕ್ಷೇತ್ರ ಪುನರ್ ವಿಂಗಡಣೆ ತರುವಾಯ ತುಮಕೂರು ಗ್ರಾಮಾಂತರ ಕ್ಷೇತ್ರಕ್ಕೆ ಬಂದರು. 2008 ಮತ್ತು 2013ರಲ್ಲಿ ಈ ಕ್ಷೇತ್ರದಿಂದ ಗೆಲುವು ಸಾಧಿಸಿದರು.

2018ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ನ ಗೌರಿಶಂಕರ್ ವಿರುದ್ಧ ಸೋಲು ಅನುಭವಿಸಿದರು. ನಂತರ ಲೋಕಸಭಾ ಚುನಾವಣೆ ಸಮಯದಲ್ಲಿ ಸುರೇಶ್‌ಗೌಡ ಬಿಜೆಪಿಯಿಂದ ಸ್ಪರ್ಧಿಸಲಿದ್ದಾರೆ ಎನ್ನವ ಸುದ್ದಿ ಹಬ್ಬಿತ್ತು. ಅವರ ಬೆಂಬಲಿಗರು ಟಿಕೆಟ್ ನೀಡುವಂತೆ ಆಗ್ರಹಿಸಿದ್ದರು. ಸಂಸದ ಜಿ.ಎಸ್.ಬಸವರಾಜ್ ಗೆಲುವಿನಲ್ಲಿ ಗೌಡರ ಪಾತ್ರವೂ ಪ್ರಮುಖವಾಗಿದೆ. ಗ್ರಾಮಾಂತರದಲ್ಲಿ ಬಸವರಾಜ್ ಅವರಿಗೆ ಹೆಚ್ಚು ಮತಗಳನ್ನು ಕೊಡಿಸಿದ್ದರು.

ನಾನಾ ಲೆಕ್ಕಾಚಾರ: ಯಡಿಯೂರಪ್ಪ, ಶೋಭಾ ಕರಂದ್ಲಾಜೆ ಅವರ ಆಪ್ತವಲಯದಲ್ಲಿ ಸುರೇಶ್‌ಗೌಡ ಗುರುತಿಸಿಕೊಂಡಿದ್ದಾರೆ. ಶೋಭಾ ಅವರನ್ನು ‘ಅಕ್ಕ’ ಎಂದು ಸಂಬೋಧಿಸುವರು. ಅಲ್ಲದೆ ಸಂಘ ಪರಿವಾರದ ಹಿನ್ನೆಲೆಯೂ ಇದೆ. ಜಿಲ್ಲೆಯಲ್ಲಿ ಪಕ್ಷವನ್ನು ಬಲಗೊಳಿಸಲು ಪ್ರಬಲ ಒಕ್ಕಲಿಗ ಸಮುದಾಯದ ಬೆಂಬಲವೂ ಅತ್ಯಗತ್ಯ. ಈ ಎಲ್ಲ ಲೆಕ್ಕಾಚಾರಗಳ ಕಾರಣ ಅವರಿಗೆ ಅಧ್ಯಕ್ಷ ಸ್ಥಾನ ನೀಡಲಾಗಿದೆ ಎಂದು ಹೇಳಲಾಗುತ್ತಿದೆ.

ಸಚಿವ ಜೆ.ಸಿ.ಮಾಧುಸ್ವಾಮಿ ಜಿಲ್ಲಾ ಮಟ್ಟದಲ್ಲಿ ಪಕ್ಷ ಸಂಘಟನೆಯ ವಿಚಾರದಲ್ಲಿ ಹೆಚ್ಚು ತಲೆಹಾಕಿದವರಲ್ಲ. ಸಂಸದ ಬಸವರಾಜ್ ಅವರೇ ಹೆಚ್ಚು ಗಮನ ನೀಡುತ್ತಿದ್ದರು. ಈಗ ಸುರೇಶ್ ಗೌಡ ಅವರಿಗೆ ಸ್ಥಾನ ನೀಡುವ ಮೂಲಕ ಬಿಜೆಪಿಯೊಳಗೆ ಆಂತರಿಕ ಕಲಹಗಳು, ಮುಸುಕಿನ ಗುದ್ದಾಟಗಳು ಎದ್ದೇಳುತ್ತವೆಯೇ ಎನ್ನುವ ಚರ್ಚೆಯೂ ಮೂಡಿದೆ. ‘ಡೋಂಟ್ ಕೇರ್’ ಮನಸ್ಥಿತಿಯ ಸುರೇಶಗೌಡರು ಏಕಪಕ್ಷೀಯ ತೀರ್ಮಾನಗಳನ್ನು ತೆಗೆದುಕೊಳ್ಳುವಷ್ಟು ‘ಪ್ರಭಾವಿ’.

ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆ ಅವರ ‘ಅಧ್ಯಕ್ಷ’ ಸಾಮರ್ಥ್ಯವನ್ನು ಒರೆಹಚ್ಚುವ ವೇದಿಕೆಯಾಗಲಿದೆ ಎಂದು ಪಕ್ಷದ ಆಂತರಿಕ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ.

***

ಗ್ರಾಮಾಂತರದಲ್ಲಿ ಸಂಚಲನ

ಸುರೇಶ್ ಗೌಡ ಮತ್ತು ಡಿ.ಸಿ.ಗೌರಿಶಂಕರ್ ನಡುವೆ 2008ರಿಂದಲೇ ಆರಂಭವಾದ ಜಿದ್ದಾಜಿದ್ದಿನ ರಾಜಕಾರಣ ಇಂದಿಗೂ ಮುಂದುವರಿದಿದೆ. ಚುನಾವಣೆ ಮುಗಿದು ಎರಡು ವರ್ಷವಾದರೂ ಇಡೀ ಜಿಲ್ಲೆಯಲ್ಲಿಯೇ ‘ರಾಜಕೀಯ ಕಾವು’ ಉಳಿಸಿಕೊಂಡಿರುವ ಕ್ಷೇತ್ರ ಗ್ರಾಮಾಂತರ ಮಾತ್ರ. ಗೌಡರಿಗೆ ಅಧ್ಯಕ್ಷ ಸ್ಥಾನ ನೀಡಿರುವುದರಿಂದ ಈ ಕಾವು ಇಲ್ಲಿ ಮತ್ತಷ್ಟು ತೀವ್ರಗೊಳ್ಳಲಿದೆ.

***

ಒಕ್ಕಲಿಗರಿಗೆ ಸ್ಥಾನ

ಜಿಲ್ಲೆಯಲ್ಲಿ ಒಕ್ಕಲಿಗ ಸಮುದಾಯವೂ ಪ್ರಬಲವಾಗಿದೆ. ಸಚಿವ, ಸಂಸದ ಸೇರಿದಂತೆ ಬಹುತೇಕ ಅಧಿಕಾರ ಲಿಂಗಾಯತ ಸಮುದಾಯಕ್ಕೆ ದೊರೆತಿದೆ. ಕಳೆದ ಬಾರಿಯೂ ಪಕ್ಷದ ಸಾರಥ್ಯವನ್ನು ಲಿಂಗಾಯತ ಸಮುದಾಯದ ಜ್ಯೋತಿ ಗಣೇಶ್ ವಹಿಸಿದ್ದರು. ಮುಂದೆ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯುವುದರಿಂದ ಒಕ್ಕಲಿಗ ಸಮುದಾಯಕ್ಕೆ ಸ್ಥಾನ ಕಲ್ಪಿಸಿದರೆ ಬಿಜೆಪಿಗೂ ಅನುಕೂಲ ಎನ್ನುವ ಲೆಕ್ಕಾಚಾರ ಇದ್ದಂತಿದೆ.

ಜೆಡಿಎಸ್‌ನ ಪರಂಪರಾಗತ ಒಕ್ಕಲಿಗ ಮತಗಳ ಮೇಲೆ ಕಣ್ಣಿಟ್ಟು ಸಹ ಈ ಆಯ್ಕೆ ನಡೆಸಿದೆ. ಲಿಂಗಾಯತರಾದ ರವಿಶಂಕರ್ ಬದಲಿಗೆ ಸುರೇಶ್ ಗೌಡ ಅವರಿಗೆ ಪಕ್ಷದ ಸಾರಥ್ಯವನ್ನು ವಹಿಸಲು ಇದು ಸಹ ಪ್ರಮುಖ ಕಾರಣ ಎನ್ನಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.