ADVERTISEMENT

ಸತ್ಯ ಹೇಳಿದರೆ ಅದನ್ನು ಧ್ವೇಷ ಭಾಷಣ ಎನ್ನುತ್ತಾರೆ: ಬಿ.ಎಲ್. ಸಂತೋಷ

​ಪ್ರಜಾವಾಣಿ ವಾರ್ತೆ
Published 27 ಜನವರಿ 2026, 8:07 IST
Last Updated 27 ಜನವರಿ 2026, 8:07 IST
ತುಮಕೂರಿನಲ್ಲಿ ಸೋಮವಾರ ನಡೆದ ಹಿಂದೂ ಸಮಾಜೋತ್ಸವದಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು. ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ, ಉದ್ಯಮಿ ಎಚ್.ಜಿ.ಚಂದ್ರಶೇಖರ್, ಇಂದಿರಮ್ಮ ಸುಂದರರಾವ್ ಇತರರು ಉಪಸ್ಥಿತರಿದ್ದರು
ತುಮಕೂರಿನಲ್ಲಿ ಸೋಮವಾರ ನಡೆದ ಹಿಂದೂ ಸಮಾಜೋತ್ಸವದಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು. ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ, ಉದ್ಯಮಿ ಎಚ್.ಜಿ.ಚಂದ್ರಶೇಖರ್, ಇಂದಿರಮ್ಮ ಸುಂದರರಾವ್ ಇತರರು ಉಪಸ್ಥಿತರಿದ್ದರು   

ತುಮಕೂರು: ‘ನಾವು ಏನೇ ಹೇಳಿದರೂ ದ್ವೇಷ ಭಾಷಣದ ರೀತಿ ಕಾಣುತ್ತದೆ. ಅದಕ್ಕೂ ಒಂದು ಕಾಯ್ದೆ ತರುತ್ತಿದ್ದಾರೆ’ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ ಹೇಳುವ ಮೂಲಕ ದ್ವೇಷ ಭಾಷಣ ಕಾಯ್ದೆ ಜಾರಿಗೆ ವಿರೋಧ ವ್ಯಕ್ತಪಡಿಸಿದರು.

ನಗರದ ಎಸ್‌ಐಟಿಯಲ್ಲಿ ಸೋಮವಾರ ಹಿಂದೂ ಸಮಾಜೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ‘ಸಿದ್ಧಗಂಗಾ ಹಿಂದೂ ಸಮಾಜೋತ್ಸವ’ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಅಯೋಧ್ಯೆ ಮೇಲೆ ಬಾಬರ್ ಆಕ್ರಮಣ ಮಾಡಿದ ಎಂದರೆ ಕರ್ನಾಟಕದ ಕೆಲವು ರಾಜಕಾರಣಿಗಳಿಗೆ ದ್ವೇಷ ಭಾಷಣ ಎನಿಸುತ್ತದೆ. ಸತ್ಯ ಹೇಳಲು ನಿಮಗೆ ಧೈರ್ಯವಿಲ್ಲ, ನಾವು ಧೈರ್ಯದಿಂದ ಹೇಳುತ್ತಿದ್ದೇವೆ. ಸತ್ಯ ಒಪ್ಪಿಕೊಳ್ಳಿ ಎಂದರೆ ಇದಕ್ಕೊಂದು ಕಾಯ್ದೆ ಹೊರಡಿಸುತ್ತಾರೆ. ಇಂತಹ ಕಾಯ್ದೆ ಒಪ್ಪಿಗೆ ಸಿಗುವ ಮುನ್ನವೇ ಪೊಲೀಸರು ಒತ್ತಡ ಹಾಕುತ್ತಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

‘ನಾವು ಗೌರವದಿಂದ ಕಟ್ಟಿಕೊಂಡಿದ್ದ ಪ್ರತಿಯೊಂದನ್ನೂ ಧ್ವಂಸ ಮಾಡಲು ನಮ್ಮ ದೇಶಕ್ಕೆ ಬಂದರು. ಜತೆಗೆ ದೇಶದಲ್ಲಿ ಎಡಪಂಥೀಯರು ಹಾಗೂ ವಿವಾದಗಳು ಹುಟ್ಟಿಕೊಂಡವು. ಸತ್ಯ ಹೇಳಿದರೆ ಇವರಿಗೆ ದ್ವೇಷ ಭಾಷಣ ಎನಿಸಲು ಆರಂಭವಾಯಿತು’ ಎಂದು ಟೀಕಿಸಿದರು.

‘ನಾವು ಆರಾಧನೆ ಮಾಡುತ್ತೇವೆ ಎಂಬ ಕಾರಣಕ್ಕೆ ದೇವಸ್ಥಾನಗಳನ್ನು ಧ್ವಂಸ ಮಾಡಲಾಯಿತು. ನೀವು ಯಾವುದನ್ನು ಪೂಜಿಸುತ್ತೀರೋ ಅದನ್ನು ಧ್ವಂಸ ಮಾಡುತ್ತೇವೆ ಎಂಬ ಪಂಥಗಳಿವೆ. ಆರಾಧಿಸುವ ದೇವರನ್ನು ಧ್ವಂಸ ಮಾಡುತ್ತೇವೆ. ಗೋವು ಕಡಿಯುತ್ತೇವೆ. ಗೌರವಿಸುವ ಹೆಣ್ಣನ್ನು ಅನ್ಯಾಯಕ್ಕೆ ಒಳಪಡಿಸುತ್ತೇವೆ’ ಎಂಬ ಪರಿಸ್ಥಿತಿ ನಿರ್ಮಿಸಿದರು ತಿಳಿಸಿದರು.

ಹಿಂದೂ ಸಂಪ್ರದಾಯದಲ್ಲಿ ಮತಾಂತರ ಪ್ರವೃತ್ತಿ ಇಲ್ಲ. ದೇವರ ಮೆರವಣಿಗೆ ಸಮಯದಲ್ಲಿ ಕಲ್ಲು ತೂರುವುದಿಲ್ಲ, ಬೆಂಕಿ ಹಚ್ಚುವ ಸಂಸ್ಕೃತಿ ಇರಲಿಲ್ಲ. ಇಂತಹ ಕೆಟ್ಟ ಸಂಸ್ಕೃತಿ, ಸಂಪ್ರದಾಯವನ್ನು ತೋರಿಸಿಕೊಟ್ಟಿದ್ದಾರೆ. ಹೊರಗಿನ ದಾಳಿಯ ಜತೆಗೆ ಒಳಗಿನ ದಾಳಿಯೇ ಹೆಚ್ಚಾಗಿದ್ದು, ನಮ್ಮ ಸಮಾಜ ಆತಂಕ ಎತರಿಸುತ್ತಿದೆ. ಜಾತಿ ವ್ಯವಸ್ಥೆ ಹುಟ್ಟುಕಾಕಿ ಲಾಭ ಮಾಡಿಕೊಂಡು, ಚುನಾವಣೆ ಸಮಯದಲ್ಲಿ ಶೋಷಣೆ ಮಾಡಲಾಗುತ್ತಿದೆ. ಈಗ ಅಲ್ಪಸಂಖ್ಯಾತರಾಗಲು ಸಂಘಟನೆ ಆರಂಭಿಸಿದ್ದಾರೆ. ಹಿಂದೆ ಇಂತಹ ವ್ಯವಸ್ಥೆ ಹೊಂದಬಾರದು ಎಂಬ ಭಾವನೆ ಇತ್ತು. ಈ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದರು.

ಆರ್‌ಎಸ್‌ಎಸ್‌ಗೆ 100 ವರ್ಷ ತುಂಬಿದೆ. ಸಂಘದ ಆರಂಭದ ಉದ್ದೇಶ, ನಡೆದು ಬಂದ ಹಾದಿ ಸ್ಮರಿಸಬೇಕು. ಭವಿಷ್ಯದ ಸವಾಲು, ಆಕಾಂಕ್ಷೆ ನೆನಪು ಮಾಡಿಕೊಳ್ಳಬೇಕು. ದೇಶಕ್ಕೆ ಒಂದು ಆಕಾಂಕ್ಷೆ ಇರುತ್ತದೆ. ಅದನ್ನು ನೆನಪು ಮಾಡಿಕೊಳ್ಳಬೇಕು ಎಂದು ಸಲಹೆ ಮಾಡಿದರು.

ಸಿದ್ಧಗಂಗಾ ಮಠದ ಶಿವಸಿದ್ಧೇಶ್ವರ ಸ್ವಾಮೀಜಿ, ‘ಹಿಂದೂ ಸಮಾಜದ ಇತಿಹಾಸ ಗಮನಿಸಿದರೆ ಕೆಲವು ಕಾಲಘಟ್ಟಗಳಲ್ಲಿ ಜಾತೀಯತೆ, ವರ್ಣ ವ್ಯವಸ್ಥೆ ಬಂದು ಸಮಾಜದ ಚಲನಶೀಲತೆಗೆ ತೊಡಕಾಗಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

ಭಾರತದಲ್ಲಿ ವಾಸಿಸುವವರನ್ನು ಹಿಂದೂಗಳು, ಹಿಂದೂ ರಾಷ್ಟ್ರ ಎಂದೇ ಕರೆಯಲಾಗುತ್ತಿದೆ. ದೇಶದಲ್ಲಿ ವಾಸಿಸುವ ಪ್ರತಿಯೊಬ್ಬರೂ ಹಿಂದೂ ಆಗಿರುತ್ತಾರೆ. ರಾಷ್ಟ್ರ ರಕ್ಷಣೆ ವಿಚಾರದಲ್ಲಿ ನಾವೆಲ್ಲರೂ ಒಗ್ಗೂಡಬೇಕು. ಒಳಪಂಗಡಗಳ ಭೇದ ಮರೆತು ಒಟ್ಟಾಗಬೇಕು. ಯಾವುದಕ್ಕೂ ಭೇದ ಎಣಿಸಬಾರದು’ ಎಂದು ಸಲಹೆ ಮಾಡಿದರು.

ಕೈಗಾರಿಕೋದ್ಯಮಿ ಎಚ್.ಜಿ.ಚಂದ್ರಶೇಖರ್, ಸಮಾಜ ಸೇವಕಿ ಇಂದಿರಮ್ಮ ಸುಂದರರಾವ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.