
ತುಮಕೂರಿನಲ್ಲಿ ಭಾನುವಾರ ರಾಜ್ಯ ಕಾಡುಗೊಲ್ಲರ ಸಂಘದಿಂದ ಅಂಧ ಮಹಿಳೆಯರ ಕ್ರಿಕೆಟ್ ತಂಡದ ಆಟಗಾರ್ತಿಯರಾದ ವಿ.ಕಾವ್ಯಾ, ಟಿ.ಸಿ.ದೀಪಿಕಾ, ಎನ್.ಆರ್.ಕಾವ್ಯಾ ಅವರನ್ನು ಅಭಿನಂದಿಸಲಾಯಿತು.
ತುಮಕೂರು: ಅಂಧ ಮಹಿಳೆಯರ ಟಿ–20 ವಿಶ್ವಕಪ್ ಗೆದ್ದ ಭಾರತ ತಂಡವನ್ನು ಮುನ್ನಡೆಸಿದ ನಾಯಕಿ ಟಿ.ಸಿ.ದೀಪಿಕಾ, ಆಟಗಾರ್ತಿಯರಾದ ಎನ್.ಆರ್.ಕಾವ್ಯಾ, ವಿ.ಕಾವ್ಯಾ ಅವರಿಗೆ ನಗರದಲ್ಲಿ ಭಾನುವಾರ ಅದ್ದೂರಿ ಮೆರವಣಿಗೆ ಮೂಲಕ ಸ್ವಾಗತ ಕೋರಲಾಯಿತು.
ರಾಜ್ಯ ಕಾಡುಗೊಲ್ಲರ ಸಂಘದಿಂದ ಅಭಿನಂದನಾ ಸಮಾರಂಭ ಆಯೋಜಿಸಲಾಗಿತ್ತು. ಇದರ ಪ್ರಯುಕ್ತ ಮೆರವಣಿಗೆ ನೆರವೇರಿತು. ಶಿರಾ ತಾಲ್ಲೂಕಿನ ಕರೆತಿಮ್ಮನಹಳ್ಳಿಯ ದೀಪಿಕಾ, ಕೋರ ಬಳಿಯ ನಾಯಕನಪಾಳ್ಯದ ಎನ್.ಆರ್.ಕಾವ್ಯಾ, ಶಿವಮೊಗ್ಗ ಜಿಲ್ಲೆಯ ಕಾವ್ಯಾ ಅವರನ್ನು ಅಲಂಕೃತ ಬೆಳ್ಳಿ ರಥದಲ್ಲಿ ಕೂರಿಸಿ ಮೆರವಣಿಗೆ ಮಾಡಲಾಯಿತು. ಟೌನ್‌ಹಾಲ್‌ನಲ್ಲಿ ಮೆರವಣಿಗೆಗೆ ಚಾಲನೆ ನೀಡಲಾಯಿತು.
ವೀರಗಾಸೆ, ನಾಸಿಕ್ ಡೋಲು, ಚಿಟ್ಟಿ ಮೇಳ, ಕಂಸಾಳೆ, ಗಾರುಡಿ ಗೊಂಬೆ ಸೇರಿ ವಿವಿಧ ಕಲಾ ತಂಡಗಳು ಮೆರವಣಿಗೆ ಮುನ್ನಡೆಸಿದವು. ನೂರಾರು ಜನ ಹೆಜ್ಜೆ ಹಾಕಿದರು. ಆಟಗಾರ್ತಿಯರು ಕನ್ನಡ ಬಾವುಟ ಹಿಡಿದು ಕುಳಿತಿದ್ದರು. ಬಿ.ಎಚ್.ರಸ್ತೆ ಮೂಲಕ ಸಾಗಿ ಬಂದ ಮೆರವಣಿಗೆ ಎಂ.ಜಿ.ರಸ್ತೆಯ ಬಾಲಭವನದ ಬಳಿ ಕೊನೆಯಾಯಿತು.
ಸಂಸದ ಗೋವಿಂದ ಕಾರಜೋಳ, ಶಾಸಕ ಕೆ.ಎನ್.ರಾಜಣ್ಣ ಇತರರು ಮೆರವಣಿಗೆಗೆ ಚಾಲನೆ ನೀಡಿದರು.
ಹೆಮ್ಮೆ ಇದೆ: ನನಗೆ ಒಂದು ಕಣ್ಣು ಇಲ್ಲದಿದ್ದರೂ ಪರವಾಗಿಲ್ಲ. ವಿಶ್ವಕಪ್ ಗೆಲ್ಲುವ ಮೂಲಕ ದೇಶ, ರಾಜ್ಯ, ನಮ್ಮ ಜಿಲ್ಲೆಗೆ ಹೆಸರು ತಂದುಕೊಟ್ಟ ಹೆಮ್ಮೆ ಇದೆ ಎಂದು ಟಿ.ಸಿ.ದೀಪಿಕಾ ಹೇಳಿದರು.
ಬಾಲಭವನದಲ್ಲಿ ನಡೆದ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿ, ‘ಕಾಡುಗೊಲ್ಲರ ಹಟ್ಟಿಗಳಲ್ಲಿ ಮೂಢನಂಬಿಕೆ, ಕಂದಾಚಾರ ಪಾಲಿಸಲಾಗುತ್ತಿದೆ. ಬಾಣಂತಿ, ಮಗುವನ್ನು ಊರಾಚೆ ಇಡುವ ಪದ್ಧತಿ ನಿಲ್ಲಬೇಕು. ಆರ್ಥಿಕ ಮತ್ತು ಸಾಮಾಜಿಕವಾಗಿ ಹಿಂದುಳಿದ ಹಟ್ಟಿಗಳಿಗೆ ಅಗತ್ಯ ಸೌಲಭ್ಯ ಕಲ್ಪಿಸಬೇಕು’ ಎಂದು ಮನವಿ ಮಾಡಿದರು.
ಶಾಸಕ ಬಿ.ಸುರೇಶ್‌ಗೌಡ, ‘ಕಾಡುಗೊಲ್ಲರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು ಎಂಬ ಹೋರಾಟ ಹಲವು ವರ್ಷಗಳಿಂದ ನಡೆಯುತ್ತಿದೆ. ಈ ಬೇಡಿಕೆ ನ್ಯಾಯ ಸಮ್ಮತವಾಗಿದೆ. ಎಸ್.ಟಿಗೆ ಸೇರ್ಪಡೆಯಾಗುವ ಆಶಾಭಾವನೆ ಇದೆ. ಇದಕ್ಕಾಗಿ ನಾವು ಸಹ ಕೆಲಸ ಮಾಡುತ್ತೇವೆ’ ಎಂದು ಭರವಸೆ ನೀಡಿದರು.
ಶಾಸಕ ಜಿ.ಬಿ.ಜ್ಯೋತಿಗಣೇಶ್, ‘ಕಾಡುಗೊಲ್ಲರು ಬುಡಕಟ್ಟು ಸಮುದಾಯಕ್ಕೆ ಸೇರಿದ್ದಾರೆ. 80ರ ದಶಕದಿಂದಲೂ ಅನ್ಯಾಯವಾಗಿದ್ದು, ಸರಿಪಡಿಸಬೇಕು. ಸಂಘಟನಾತ್ಮಕ ಶಕ್ತಿಯಿಂದ ಸೌಲಭ್ಯ ಪಡೆಯಲು ಸಾಧ್ಯ’ ಎಂದರು.
ವಿಧಾನ ಪರಿಷತ್ ಸದಸ್ಯ ನಾಗರಾಜ ಯಾದವ್, ಕಾಡುಗೊಲ್ಲರ ಸಂಘದ ಜಿಲ್ಲಾ ಅಧ್ಯಕ್ಷ ದೊಡ್ಡೇಗೌಡ, ಗೌರವಾಧ್ಯಕ್ಷ ಎಸ್.ಡಿ.ಬಸವರಾಜ್, ಮುಖಂಡರಾದ ಜಿ.ಡಿ.ಪ್ರಭುದೇವ್, ಬಸವರಾಜು, ಗಂಗಾಧರ್, ತಿಪ್ಪಯ್ಯ ಇತರರು ಹಾಜರಿದ್ದರು.
ಎಂಎಲ್‌ಸಿ ಸ್ಥಾನಕ್ಕೆ ಒತ್ತಾಯ
ಕಾಡುಗೊಲ್ಲ ಸಮುದಾಯದಲ್ಲಿ ವಿಧಾನ ಪರಿಷತ್ ಸದಸ್ಯರಿಲ್ಲ. ಸರ್ಕಾರ ಈ ಕೊರತೆ ನೀಗಿಸಬೇಕು ಎಂದು ವನಕಲ್ಲು ಮಹಾಸಂಸ್ಥಾನ ಮಠದ ಬಸವ ರಮಾನಂದ ಸ್ವಾಮೀಜಿ ಒತ್ತಾಯಿಸಿದರು. ಕಾಡುಗೊಲ್ಲರು ಅತ್ಯಂತ ಹಿಂದುಳಿದಿದ್ದಾರೆ. ಸಮುದಾಯದ ಮಕ್ಕಳಿಗೆ ಉನ್ನತ ಶಿಕ್ಷಣ ದೊರೆಯಬೇಕು. ಶೈಕ್ಷಣಿಕ ಮತ್ತು ಆರ್ಥಿಕವಾಗಿ ಅಭಿವೃದ್ಧಿಯಾದರೆ ಮಾತ್ರ ಸಮಾಜದ ಮುನ್ನೆಲೆಗೆ ಬರಲು ಸಾಧ್ಯ ಎಂದರು. ರಾಜ್ಯ ಕಾಡುಗೊಲ್ಲರ ಸಂಘದ ಅಧ್ಯಕ್ಷ ರಾಜಣ್ಣ ‘ಚಿತ್ರದುರ್ಗ ತುಮಕೂರು ಜಿಲ್ಲೆಯಲ್ಲಿ ಕಾಡುಗೊಲ್ಲರ ಸಂಖ್ಯೆ ಹೆಚ್ಚಿದೆ. ಸರ್ಕಾರ ಅಗತ್ಯ ಸೌಲಭ್ಯ ಕಲ್ಪಿಸಬೇಕು’ ಎಂದು ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.