ADVERTISEMENT

PV Web Exclusive: ಕುರಿಗಳಿಗೆ ಕಾಡುತ್ತಿದೆ ನೀಲಿ ನಾಲಿಗೆ ರೋಗ

ಕೆ.ಜೆ.ಮರಿಯಪ್ಪ
Published 6 ನವೆಂಬರ್ 2020, 8:03 IST
Last Updated 6 ನವೆಂಬರ್ 2020, 8:03 IST
ಕುರಿ ಮಂದೆ (ಸಾಂದರ್ಭಿಕ ಚಿತ್ರ)
ಕುರಿ ಮಂದೆ (ಸಾಂದರ್ಭಿಕ ಚಿತ್ರ)   

ತುಮಕೂರು: ರಾಜ್ಯದಲ್ಲೇ ಕುರಿ, ಮೇಕೆಗಳನ್ನು ಹೆಚ್ಚಾಗಿ ಸಾಕಣೆ ಮಾಡುವ ಜಿಲ್ಲೆಗಳಲ್ಲಿ ತುಮಕೂರು ಜಿಲ್ಲೆ ಪ್ರಮುಖ. ಈ ಜಿಲ್ಲೆಯಲ್ಲಿ ಈಗ ಕುರಿಗಳಿಗೆ ನೀಲಿ ನಾಲಿಗೆ ಹಾಗೂ ಮೈಕೊ ಪ್ಲಾಸ್ಮೊಸಿಸ್ ರೋಗ ಕಾಡಲಾರಂಭಿಸಿದೆ.

ಕುಣಿಗಲ್, ಪಾವಗಡ, ಶಿರಾ, ಚಿಕ್ಕನಾಯಕನಹಳ್ಳಿ ಭಾಗದಲ್ಲಿ ಇತ್ತೀಚೆಗೆ ಕುರಿ, ಮೇಕೆ, ಹಸು, ಎಮ್ಮೆಗಳು ಸಾಕಷ್ಟು ಸಂಖ್ಯೆಯಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದು, ಸಾವಿಗೆ ಕಾರಣ ಇನ್ನೂ ಪತ್ತೆಯಾಗಿಲ್ಲ. ಈ ಆತಂಕದ ನಡುವೆಯೇ ನೀಲಿ ನಾಲಿಗೆ ರೋಗ ವ್ಯಾಪಿಸುತ್ತಿದ್ದು, ಕುರಿಗಾರರನ್ನು ಸಂಕಷ್ಟಕ್ಕೆ ಸಿಲುಕಿಸಿದೆ.

ಸಾಮಾನ್ಯವಾಗಿ ಮಳೆಗಾಲದಲ್ಲಿ ನೀಲಿ ನಾಲಿಗೆ ರೋಗ ತೀವ್ರವಾಗಿ ಬಾಧಿಸುತ್ತದೆ. ಮನುಷ್ಯರಿಗೆ ಸೊಳ್ಳೆ ಕಚ್ಚಿದರೆ ಡೆಂಗಿ, ಚಿಕುನ್‌ಗುನ್ಯಾ ಕಾಣಿಸಿಕೊಳ್ಳುವಂತೆ ಕುರಿಗಳಿಗೂ ಸೊಳ್ಳೆ ಕಚ್ಚಿದರೆ ಈ ರೋಗ ವ್ಯಾಪಿಸುತ್ತದೆ. ಈ ಬಾರಿ ಜಿಲ್ಲೆಯಲ್ಲಿ ಚೆನ್ನಾಗಿ ಮಳೆಯಾಗಿದ್ದು, ಅಲ್ಲಲ್ಲಿ ನೀರು ನಿಂತು ಸೊಳ್ಳೆಗಳ ಸಂತತಿಯೂ ಗಣನೀಯವಾಗಿ ಏರಿಕೆಯಾಗಿದೆ. ಇವು ಕಚ್ಚುವುದರಿಂದ ರೋಗ ಎಲ್ಲೆಡೆ ವ್ಯಾಪಕವಾಗಿ ಹರಡುತ್ತಿದೆ. ನವೆಂಬರ್, ಡಿಸೆಂಬರ್ ಸಮಯದಲ್ಲಿ ಶೀತದ ವಾತಾವರಣ ಮುಂದುವರಿದರೆ ರೋಗ ಮತ್ತಷ್ಟು ಪ್ರಸರಿಸುತ್ತದೆ ಎಂದು ಪಶುವೈದ್ಯರು ಎಚ್ಚರಿಸುತ್ತಾರೆ.

ADVERTISEMENT

ರೋಗ ಲಕ್ಷಣ: ರೋಗ ಕಾಣಿಸಿಕೊಂಡ ಕುರಿಗಳ ನಾಲಿಗೆ ದಪ್ಪವಾಗಿ ನೀಲಿ ಬಣ್ಣಕ್ಕೆ ತಿರುಗುತ್ತದೆ. ಅತಿಯಾದ ಜ್ವರ ಕಾಣಿಸಿಕೊಂಡು ಬಾಯಲ್ಲಿ ಹುಣ್ಣುಗಳಾಗಿ ಮುಖ ಊತ ಬಂದು, ಜೊಲ್ಲು ಸೋರುತ್ತದೆ. ಕಾಲಿನ ಗಿಣ್ಣುಗಳು ಊತ ಬಂದು ಕುಂಟುತ್ತವೆ. ಕೊನೆಗೆ ಮೇವು ತಿನ್ನಲು ಸಾಧ್ಯವಾಗದೆ ನಿತ್ರಾಣಗೊಂಡು ಸಾಯುತ್ತವೆ. ಇದರಿಂದ ಕುರಿಗಾರರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಾರೆ.

ನಿಯಂತ್ರಣ: ಕುರಿ ಹಟ್ಟಿಗಳು, ರೊಪ್ಪಗಳು, ಕುರಿಗಳು ತಂಗುವ ಸುತ್ತಮುತ್ತಲಿನ ಪ್ರದೇಶಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ನೀರು ನಿಂತು ಸೊಳ್ಳೆಗಳ ಉತ್ಪತ್ತಿಗೆ ಅವಕಾಶ ನೀಡಬಾರದು. ಸಂಜೆ ವೇಳೆಗೆ ಹೊಗೆ ಹಾಕುವ ಮೂಲಕ ಸೊಳ್ಳೆ ನಿಯಂತ್ರಿಸಬೇಕು.

ಲಸಿಕೆ: ಮಳೆಗಾಲ ಆರಂಭವಾಗಿ ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗುತ್ತಿರುವುದನ್ನು ಗಮನಿಸಿ ಲಸಿಕೆ ಹಾಕಿಸಬೇಕು. ಪಶುಪಾಲನೆ ಇಲಾಖೆಯಲ್ಲಿ ಈ ರೋಗಕ್ಕೆ ಲಸಿಕೆ ಹಾಕುತ್ತಿಲ್ಲ. ಹಾಗಾಗಿ ಹೊರಗಡೆ ಔಷಧಿ ಅಂಗಡಿಗಳಲ್ಲಿ ಖರೀದಿಸಿ ಲಸಿಕೆ ಕೊಡಿಸಬೇಕು. ಇದರಿಂದ ಕುರಿ, ಮೇಕೆಗಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಳವಾಗಿ ರೋಗ ಬರದಂತೆ ತಡೆಯಬಹುದು.

ಮತ್ತೊಂದು ರೋಗ: ನೀಲಿ ನಾಲಿಗೆ ರೋಗದ ಜತೆಗೆ ಈಗ ‘ಮೈಕೊ ಪ್ಲಾಸ್ಮಾಸಿಸ್’ ರೋಗ ಬಾಧಿಸುತ್ತಿದೆ. ಇದು ಹೆಚ್ಚಾಗಿ ವಲಸೆ ಕುರಿಗಳಲ್ಲಿ ಕಂಡುಬರುತ್ತಿದ್ದು, ಬ್ಯಾಕ್ಟೀರಿಯಾ ಮೂಲಕ ಹರಡುತ್ತದೆ. ಪ್ರಮುಖವಾಗಿ ನೀರು, ಆಹಾರದಿಂದ ಬರುತ್ತಿದ್ದು, ನಿಂತ ನೀರು ಕುಡಿಸುವುದರಿಂದ ಕಾಣಿಸಿಕೊಳ್ಳುತ್ತದೆ.

ಅತಿಯಾದ ಕೆಮ್ಮು, ಜ್ವರ ಕಾಣಿಸಿಕೊಂಡು ಕಾಲಿನ ಗಿಣ್ಣು ಊತ ಬಂದು ಕುಂಟುತ್ತವೆ. ನಂತರ ಕಣ್ಣಿನಲ್ಲಿ ಬಿಳೆ ಪೊರೆ ಬೆಳೆದು ದೃಷ್ಟಿ ಕಳೆದುಕೊಳ್ಳುತ್ತವೆ. ಶ್ವಾಸಕೋಶಕ್ಕೂ ಹಾನಿ ಮಾಡುತ್ತದೆ. ನಂತರ ಸಾಯುತ್ತವೆ. ಒಂದಕ್ಕೆ ರೋಗ ಬಂದರೆ ಮತ್ತೊಂದಕ್ಕೆ ಸುಲಭವಾಗಿ ಹರಡುತ್ತದೆ. ಶೀತದ ವಾತಾವರಣ ಇದ್ದಾಗ ಹೆಚ್ಚಾಗಿ ಕಂಡುಬರುತ್ತದೆ. ಕಾಯಿಲೆ ಇರುವ ಕುರಿಯನ್ನು ಪ್ರತ್ಯೇಕವಾಗಿ ಇಟ್ಟು ಚಿಕಿತ್ಸೆ ಕೊಡಿಸಬೇಕು. ರೋಗ ಕಾಣಿಸಿಕೊಂಡ ಪ್ರದೇಶಗಳಿಗೆ ಪಶುಪಾಲನೆ ಇಲಾಖೆಯು ಔಷಧಿ ಸರಬರಾಜುಮಾಡಿ ಚಿಕಿತ್ಸೆ ನೀಡುತ್ತದೆ.

ಮುನ್ನೆಚ್ಚರಿಕೆ ವಹಿಸಿ:

ನೀಲಿ ನಾಲಿಗೆ, ಮೈಕೊ ಪ್ಲಾಸ್ಮೊಸಿಸ್ ರೋಗ ಈಗ ಅಲ್ಲಲ್ಲಿ ಕಂಡು ಬರುತ್ತಿದೆ. ರೈತರು ಸತ್ತ ಕುರಿಗಳ ಮಾದರಿಯನ್ನುಪ್ರಯೋಗಾಲಯಕ್ಕೆ ತಂದುಕೊಡುತ್ತಿದ್ದು, ಅದನ್ನು ತಪಾಸಣೆಗೆ ಒಳಪಡಿಸಿದಾಗ ಈ ರೋಗ ಲಕ್ಷಗಳು ಇರುವುದು ಪತ್ತೆಯಾಗಿದೆ ಎಂದು ಶಿರಾದ ಪಶುರೋಗ ತನಿಖಾ ಪ್ರಯೋಗಾಲಯದ ಪ್ರಾದೇಶಿಕ ಸಂಶೋಧನಾಧಿಕಾರಿ ಡಾ.ಜಿ.ಆರ್.ಪ್ರವೀಣ್ ತಿಳಿಸುತ್ತಾರೆ

ಮುನ್ನೆಚ್ಚರಿಕೆ ವಹಿಸಿ ರೋಗ ಲಕ್ಷಣಗಳು ಕಾಣಿಸಿಕೊಂಡ ತಕ್ಷಣ ಲಸಿಕೆ ಹಾಕಿಸಬೇಕು. ಜಾನುವಾರು ಸಾವು ತಪ್ಪಿಸಿ, ಆರ್ಥಿಕ ಸಂಕಷ್ಟಕ್ಕೆ ಸಿಲುಕದಂತೆ ನೋಡಿಕೊಳ್ಳಬೇಕು ಎಂದು ಅವರು ಸಲಹೆ ನೀಡುತ್ತಾರೆ.

***

ಜಿಲ್ಲೆಯಲ್ಲಿರುವ ಜಾನುವಾರು ವಿವರ

12.90 ಲಕ್ಷ ಕುರಿ

4.27 ಲಕ್ಷ ಮೇಕೆ

4.31 ಲಕ್ಷ ಹಸು, ಎತ್ತು

1.43 ಲಕ್ಷ ಎಮ್ಮೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.