ADVERTISEMENT

ಪಂಚಾಯಿತಿ ಗೆಲುವಿಗೆ ನೀಲನಕ್ಷೆ

ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿಯಿಂದ ಸಮಿತಿಗಳ ರಚನೆ

ಡಿ.ಎಂ.ಕುರ್ಕೆ ಪ್ರಶಾಂತ
Published 23 ನವೆಂಬರ್ 2020, 5:52 IST
Last Updated 23 ನವೆಂಬರ್ 2020, 5:52 IST
ಬಿ.ಸುರೇಶ್‌ಗೌಡ
ಬಿ.ಸುರೇಶ್‌ಗೌಡ   

ತುಮಕೂರು: ಗ್ರಾಮ ಪಂಚಾಯಿತಿ ಚುನಾವಣೆಗೆ ದಿನಾಂಕ ಘೋಷಣೆಗೆ ದಿನಗಣನೆ ಆರಂಭವಾಗಿದೆ. ಚುನಾವಣಾ ಆಯೋಗವು ಪಂಚಾಯಿತಿ ಚುನಾವಣೆ ನಡೆಸಲು ಸಿದ್ಧತೆ ಮಾಡಿಕೊಳ್ಳುತ್ತಿದೆ. ಮತ್ತೊಂದು ಕಡೆ ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ಪಂಚಾಯಿತಿ ರಾಜಕೀಯ ಗರಿಗೆದರಿದೆ.

ಪಂಚಾಯಿತಿ ಚುನಾವಣೆಯಲ್ಲಿ ಅಭ್ಯರ್ಥಿಗಳು ಪಕ್ಷಗಳ ಚಿಹ್ನೆಗಳ ಅಡಿಯನ್ನು ಸ್ಪರ್ಧಿಸುವುದಿಲ್ಲ. ಆದರೆ ಪಕ್ಷಗಳು ನೆಲೆಗಟ್ಟಿ ಮಾಡಿಕೊಳ್ಳಲು ಕಾರ್ಯಕರ್ತರನ್ನು ಕಣಕ್ಕಿಳಿಸುತ್ತವೆ. ತಳಮಟ್ಟದಲ್ಲಿ ಪಕ್ಷವನ್ನು ಗಟ್ಟಿಗೊಳಿಸಲು ಪಂಚಾಯಿತಿ ಚುನಾವಣೆಗಳೇ ಪ್ರಮುಖ ವೇದಿಕೆಗಳು.

ಜಿಲ್ಲೆಯ 341 ಗ್ರಾಮ ಪಂಚಾಯಿತಿಗಳಲ್ಲಿಯೂ ಈಗಾಗಲೇ ರಾಜಕಾರಣದ ಆಟಗಳು ಆರಂಭವಾಗಿವೆ. ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರು ಸ್ಪರ್ಧೆಯ ಉತ್ಸಾಹದಲ್ಲಿ ಇದ್ದಾರೆ.

ADVERTISEMENT

ಮೂರು ಪಕ್ಷಗಳು ಆಯಾ ವಿಧಾನಸಭಾ ಕ್ಷೇತ್ರಗಳಲ್ಲಿನ ತಮ್ಮ ಪಕ್ಷದ ಶಾಸಕರು, ಮಾಜಿ ಶಾಸಕರು ಇಲ್ಲವೆ ಈ ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಸೋತ ಅಭ್ಯರ್ಥಿಗಳು, ಪಕ್ಷದ ತಾಲ್ಲೂಕು ಘಟಕಗಳ ಅಧ್ಯಕ್ಷರು, ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಸದಸ್ಯರು, ಪ್ರಭಾವಿ ಮುಖಂಡರ ನೇತೃತ್ವದಲ್ಲಿ ಈಗಾಗಲೇ ಸಭೆಗಳನ್ನು ನಡೆಸಿವೆ. ಪಂಚಾಯಿತಿ ಗದ್ದುಗೆ ವಶಕ್ಕೆ ತಮ್ಮದೇ ತಂತ್ರಗಳ ಮೊರೆ ಹೋಗಿವೆ.

ಕಟೀಲ್ ಪ್ರವೇಶ: ಬಿಜೆಪಿಯು ಶಿರಾ ಉಪಚುನಾವಣೆಯ ಗೆಲುವಿನ ಹುಮ್ಮಸ್ಸಿನಲ್ಲಿದೆ. ಈಗ ಗ್ರಾಮೀಣ ಮಟ್ಟದಲ್ಲಿ ಮತ್ತಷ್ಟು ಬೇರುಗಳನ್ನು ಹರಡಲು ಸಜ್ಜಾಗಿದೆ. ಮಧುಗಿರಿ, ಕೊರಟಗೆರೆ, ಶಿರಾ, ಪಾವಗಡ ಮತ್ತು ತುಮಕೂರು ಗ್ರಾಮಾಂತರ, ಚಿಕ್ಕನಾಯಕನಹಳ್ಳಿ, ತುರುವೇಕೆರೆ, ಗುಬ್ಬಿ, ಕುಣಿಗಲ್, ತಿಪಟೂರು ಹೀಗೆ ಎರಡು ವಿಭಾಗಗಳನ್ನು ಮಾಡಿಕೊಂಡು ಗ್ರಾಮ ಪಂಚಾಯಿತಿ ಚುನಾವಣೆಯ ಸಿದ್ಧತೆಗಳಿಗೆ ಮುಂದಾಗಿದೆ.

ಶೀಘ್ರದಲ್ಲಿಯೇ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ಈ ಎರಡು ವಿಭಾಗಗಳ ಸಭೆ ನಡೆಸುವರು ಎನ್ನುತ್ತವೆ ಜಿಲ್ಲಾ ಬಿಜೆಪಿ ಮೂಲಗಳು.

ಉಸ್ತುವಾರಿಗಳ ನೇಮಕ: ತಿಪಟೂರು ಹೊರತು ಪಡಿಸಿ ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿಯೂ ಜೆಡಿಎಸ್‌ಗೆ ಗಟ್ಟಿಯಾದ ನೆಲೆ ಇದೆ. ಪಂಚಾಯಿತಿ ಚುನಾವಣೆ ದೃಷ್ಟಿಯಲ್ಲಿ ಇಟ್ಟುಕೊಂಡು ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಜೆಡಿಎಸ್‌ನಿಂದ ಉಸ್ತುವಾರಿಗಳನ್ನು ನೇಮಿಸಲು ಪಕ್ಷವು ಮುಂದಾಗಿದೆ. ಈಗಾಗಲೇ ಜೆಡಿಎಸ್‌ನಿಂದ ವಿಧಾನಸಭಾವಾರು ಒಂದು ಸುತ್ತಿನ ಸಭೆಗಳೂ ನಡೆದಿವೆ.

ಸ್ಥಳೀಯ ಮುಖಂಡರ ಸಭೆ: ಪಂಚಾಯಿತಿ ಚುನಾವಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷವು ಜಿಲ್ಲಾ ಮಟ್ಟದಲ್ಲಿ ಸಭೆಯನ್ನೇನೂ ನಡೆಸಿಲ್ಲ. ಆದರೆ ಸ್ಥಳೀಯ ಮಟ್ಟದಲ್ಲಿ ಮುಖಂಡರು ಮತ್ತು ತಾಲ್ಲೂಕು ಘಟಕಗಳ ಅಧ್ಯಕ್ಷರು ಈಗಾಗಲೇ ಕಾರ್ಯ
ಪ್ರವೃತ್ತರಾಗಿದ್ದಾರೆ. ಜಿಲ್ಲೆ ಎಲ್ಲ ಕ್ಷೇತ್ರಗಳಲ್ಲಿಯೂ ನೆಲೆಯನ್ನು ಹೊಂದಿರುವ ಕೈ ಪಾಳಯದಲ್ಲಿ ಸ್ಥಳೀಯ ಮುಖಂಡರೇ ಈ ಚುನಾವಣೆಯ ನೇತೃತ್ವ ವಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.