ADVERTISEMENT

5 ತಾಲ್ಲೂಕಿನಲ್ಲಿ ಬೋರ್‌ವೆಲ್ ಕೊರೆಸುವಂತಿಲ್ಲ

​ಪ್ರಜಾವಾಣಿ ವಾರ್ತೆ
Published 7 ಜುಲೈ 2021, 16:30 IST
Last Updated 7 ಜುಲೈ 2021, 16:30 IST
ಕೊಳವೆ ಬಾವಿ
ಕೊಳವೆ ಬಾವಿ   

ತುಮಕೂರು: ಅಂತರ್ಜಲ ಮಟ್ಟ ತೀವ್ರವಾಗಿ ಕುಸಿದಿರುವ ಹಾಗೂ ಅತಿಯಾಗಿ ಅಂತರ್ಜಲ ಬಳಕೆಯಾಗಿರುವ ಜಿಲ್ಲೆಯ ಐದು ತಾಲ್ಲೂಕುಗಳಲ್ಲಿ ಕೊಳವೆ ಬಾವಿಗಳನ್ನು ಕೊರೆಸಲು ಅನುಮತಿ ಪಡೆಯುವುದು ಕಡ್ಡಾಯವಾಗಿದೆ.

ಚಿಕ್ಕನಾಯಕನಹಳ್ಳಿ, ಕೊರಟಗೆರೆ, ಮಧುಗಿರಿ, ತಿಪಟೂರು, ತುಮಕೂರು ತಾಲ್ಲೂಕಿನಲ್ಲಿ ಕೊಳವೆ ಬಾವಿ ಕೊರೆಸಲು ಇನ್ನು ಮುಂದೆ ಕಡ್ಡಾಯವಾಗಿ ಅನುಮತಿ ಪಡೆಯಬೇಕಾಗಿದೆ.

ಜಿಲ್ಲಾ ಅಂತರ್ಜಲ ಪ್ರಾಧಿಕಾರ ಸಮಿತಿ ಸಭೆಯಲ್ಲಿ ಬುಧವಾರ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಈ ವಿಚಾರ ಪ್ರಕಟಿಸಿದರು. ರಾಜ್ಯ ಅಂತರ್ಜಲ ಪ್ರಾಧಿಕಾರವು ಅತಿಯಾಗಿ ಅಂತರ್ಜಲ ಬಳಕೆ ಮಾಡುತ್ತಿರುವ 45 ತಾಲ್ಲೂಕುಗಳನ್ನು ಗುರುತಿಸಿದ್ದು, ಜಿಲ್ಲೆಯ ಐದು ತಾಲ್ಲೂಕುಗಳು ಸೇರಿವೆ. ಈ ಪ್ರದೇಶಗಳಲ್ಲಿ ಯಾವುದೇ ಉದ್ದೇಶಕ್ಕಾಗಿ ಕೊಳವೆ ಬಾವಿ ಕೊರೆಸಲು ಅನುಮತಿ ಪಡೆಯುವುದು ಕಡ್ಡಾಯವಾಗಿದೆ’ ಎಂದರು.

ADVERTISEMENT

ಸರ್ಕಾರಿ, ನಿಗಮ, ಮಂಡಳಿ, ಇತರೆ ಇಲಾಖೆ ಹಾಗೂ ಖಾಸಗಿಯವರು ಕುಡಿಯುವ ನೀರು, ವಾಣಿಜ್ಯ ಉದ್ದೇಶಕ್ಕೆ ಕೊಳವೆ ಬಾವಿ ತೆಗೆಸುವುದನ್ನು ನಿರ್ಬಂಧಿಸಲಾಗಿದೆ. ಅನುಮತಿ ಪಡೆಯದೆ ಕೊರೆಸಿದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದ್ದಾರೆ.

ಏಜೆನ್ಸಿ ವಿರುದ್ಧ ಕ್ರಮ: ಕೊಳವೆ ಬಾವಿ ಕೊರೆಯುವ ಯಂತ್ರ, ಏಜೆನ್ಸಿಗಳು ರಾಜ್ಯ ಅಂತರ್ಜಲ ಪ್ರಾಧಿಕಾರದಲ್ಲಿ ನೋಂದಣಿ ಮಾಡಿಸಿಕೊಳ್ಳುವುದು ಕಡ್ಡಾಯವಾಗಿದೆ. ನೋಂದಣಿ ಇಲ್ಲದೆ ಅಕ್ರಮವಾಗಿ ಕೊಳವೆ ಬಾವಿ ಕೊರೆಯುವಲ್ಲಿ ತೊಡಗಿಸಿಕೊಂಡರೆ ಅಂತಹ ಯಂತ್ರಗಳನ್ನು ವಶಪಡಿಸಿಕೊಂಡು ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಸುರಕ್ಷಿತವಾಗಿ ಮುಚ್ಚಿ: ವಿಫಲವಾದ ಕೊಳವೆ ಬಾವಿಗಳನ್ನು ಸುರಕ್ಷಿತವಾಗಿ ಮುಚ್ಚಬೇಕು. ಯಾವುದೇ ಅವಘಡಗಳು ಸಂಭವಿಸದಂತೆ ಕ್ರಮ ವಹಿಸಬೇಕು ಎಂದರು.

ಅಂತರ್ಜಲ ಅಭಿವೃದ್ಧಿಗೆ ಒತ್ತು ನೀಡಿ, ಅನುಪಯುಕ್ತ ಕೊಳವೆ ಬಾವಿಗಳಿಗೆ ಜಲ ಮರುಪೂರಣಗೊಳಿಸಲು ಅಧಿಕಾರಿಗಳು, ರೈತರು ಹೆಚ್ಚು ಆಸಕ್ತರಾಗಬೇಕು ಎಂದು ಸಲಹೆ ಮಾಡಿದರು.

ಕೊಳವೆ ಬಾವಿಗಳಿಗೆಜಲ ಮರುಪೂರಣ ಮಾಡಲು ನರೇಗಾ ಯೋಜನೆ ಬಳಸಿಕೊಳ್ಳಬಹುದಾಗಿದೆ. ಜಲ ಮರುಪೂರಣಕ್ಕೆ ವ್ಯವಸ್ಥಿತವಾಗಿ ಬಳಕೆ ಮಾಡಿಕೊಂಡರೆ ಅಂತರ್ಜಲ ಮಟ್ಟ ಹೆಚ್ಚಿಸಬಹುದಾಗಿದೆ. ಭವಿಷ್ಯದಲ್ಲಿ ಎದುರಾಗಬಹುದಾದ ಜಲಕ್ಷಾಮ ತಡೆಗಟ್ಟಬಹುದಾಗಿದೆ ಎಂದರು.

ಹಿರಿಯ ಭೂವಿಜ್ಞಾನಿ ನಾಗವೇಣಿ ಅಂತರ್ಜಲ ಕುಸಿತದ ಬಗ್ಗೆ ಮಾಹಿತಿ ನೀಡಿದರು. ಜಿ.ಪಂ ಉಪಕಾರ್ಯದರ್ಶಿ ಟಿ.ಕೆ.ರಮೇಶ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.