ADVERTISEMENT

ವಾಲ್ಮೀಕಿ ಜಯಂತಿ ಸಭೆ ಬಹಿಷ್ಕಾರ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2022, 16:29 IST
Last Updated 26 ಸೆಪ್ಟೆಂಬರ್ 2022, 16:29 IST
ಶಿರಾದಲ್ಲಿ ಕರ್ನಾಟಕ ಸ್ವಾಭಿಮಾನಿ ಪರಿಶಿಷ್ಟ ಜಾತಿ, ಪಂಗಡಗಳ ಮೀಸಲಾತಿ ಹೆಚ್ಚಳ ಕ್ರಿಯಾಸಮಿತಿಯ ಪದಾಧಿಕಾರಿಗಳು ಸೋಮವಾರ ವಾಲ್ಮೀಕಿ ಜಯಂತಿಯ ಪೂರ್ವಭಾವಿ ಸಭೆ ಬಹಿಷ್ಕರಿಸಿ ತಹಶೀಲ್ದಾರ್ ಎಂ. ಮಮತ ಅವರಿಗೆ ಮನವಿ ಪತ್ರ ಸಲ್ಲಿಸಿದರು
ಶಿರಾದಲ್ಲಿ ಕರ್ನಾಟಕ ಸ್ವಾಭಿಮಾನಿ ಪರಿಶಿಷ್ಟ ಜಾತಿ, ಪಂಗಡಗಳ ಮೀಸಲಾತಿ ಹೆಚ್ಚಳ ಕ್ರಿಯಾಸಮಿತಿಯ ಪದಾಧಿಕಾರಿಗಳು ಸೋಮವಾರ ವಾಲ್ಮೀಕಿ ಜಯಂತಿಯ ಪೂರ್ವಭಾವಿ ಸಭೆ ಬಹಿಷ್ಕರಿಸಿ ತಹಶೀಲ್ದಾರ್ ಎಂ. ಮಮತ ಅವರಿಗೆ ಮನವಿ ಪತ್ರ ಸಲ್ಲಿಸಿದರು   

ಶಿರಾ: ವಾಲ್ಮೀಕಿ ಜಯಂತಿ ಅಂಗವಾಗಿ ಸೋಮವಾರ ತಾಲ್ಲೂಕು ಆಡಳಿತ ಕರೆದಿದ್ದ ಪೂರ್ವಭಾವಿ ಸಭೆಯನ್ನು ಕರ್ನಾಟಕ ಸ್ವಾಭಿಮಾನಿ ಪರಿಶಿಷ್ಟ ಜಾತಿ, ಪಂಗಡಗಳ ಮೀಸಲಾತಿ ಹೆಚ್ಚಳದ ಕ್ರಿಯಾಸಮಿತಿಯ ಪದಾಧಿಕಾರಿಗಳು ಬಹಿಷ್ಕರಿಸಿ ತಹಶೀಲ್ದಾರ್ ಎಂ. ಮಮತ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ವಾಲ್ಮೀಕಿ ಗುರುಪೀಠದ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಕಳೆದ 229 ದಿನಗಳಿಂದ ಸಮುದಾಯದ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಹೆಚ್ಚಿಸುವಂತೆ ಒತ್ತಾಯಿಸಿ ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ಇ‌ಂತಹ ಸಮಯದಲ್ಲಿ ವಾಲ್ಮೀಕಿ ಜಯಂತಿ ಆಚರಣೆ ಮಾಡುವುದು ಸರಿಯಲ್ಲ. ಪರಿಶಿಷ್ಟ ಜಾತಿ ಮತ್ತು ಪಂಗಡದವರ ಜೊತೆಗೆ ಶೋಷಿತ ಸಮಾಜಗಳನ್ನು ಕಡೆಗಣಿಸುತ್ತಿರುವುದು ಖಂಡನೀಯ ಎಂದರು.

ರಾಜ್ಯ ಸರ್ಕಾರ ಸ್ವಾಮೀಜಿ ಅವರ ಹೋರಾಟ ಗೌರವಿಸಬೇಕು. ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ್ ವರದಿಯನ್ನು ಅನುಷ್ಠಾನಗೊಳಿಸಬೇಕು. ಕಾನೂನು ರೀತಿಯಲ್ಲಿ ನಮ್ಮ ಬೇಡಿಕೆ ಈಡೇರಿಸಿ ಸ್ವಾಮೀಜಿ ಅವರನ್ನು ಮಠಕ್ಕೆ‌ ಕಳುಹಿಸಿ ಕೊಟ್ಟರೆ ಮಾತ್ರ ವಾಲ್ಮೀಕಿ ಜಯಂತಿಯನ್ನು ಸಡಗರದಿಂದ ಆಚರಣೆ ಮಾಡುತ್ತೇವೆ. ಇಲ್ಲದಿದ್ದರೆ ಮನೆಗಳಲ್ಲಿ ಶ್ರದ್ಧಾ ಭಕ್ತಿಯಿಂದ ಆಚರಿಸಿಕೊಳ್ಳುತ್ತೇವೆ ಎಂದು ಹೇಳಿದರು.

ADVERTISEMENT

ಸರ್ಕಾರ ನಮ್ಮ ಬೇಡಿಕೆಗಳಿಗೆ ಸ್ವಂದಿಸದೆ ವಾಲ್ಮೀಕಿ ಜಯಂತಿ ಆಚರಣೆಗೆ ಮುಂದಾದರೆ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ ನಡೆಸಲಾಗುವುದು ಎಂದರು.

ಮುಖಂಡರಾದ ಜೆ.ಎನ್. ರಾಜಸಿಂಹ, ಧರಣಿಕುಮಾರ್, ರಂಗರಾಜು, ದಾಸಪ್ಪ, ನಗರಸಭೆ ಸದಸ್ಯರಾದ ಲಕ್ಷ್ಮಿಕಾಂತ್, ಅಜೇಯ್ ಕುಮಾರ್, ಪ್ರಕಾಶ್ ಮುದ್ದರಾಜು, ರಾಕೇಶ್ ಬಾಬು, ಟೈರ್ ರಂಗನಾಥ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.