ತುಮಕೂರು: ಲಂಚ ತೆಗೆದುಕೊಳ್ಳುವಾಗ ಸಿಕ್ಕಿ ಬಿದ್ದಿದ್ದ ತಾಲ್ಲೂಕಿನ ಬೆಳ್ಳಾವಿ ಹೋಬಳಿ ಚನ್ನೇನಹಳ್ಳಿ ವೃತ್ತದ ಗ್ರಾಮ ಲೆಕ್ಕಾಧಿಕಾರಿ ಡಿ.ನಟರಾಜು ಎಂಬಾತನಿಗೆ ನಾಲ್ಕು ವರ್ಷ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ 7ನೇ ಹೆಚ್ಚುವರಿ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಲಯ ಸೋಮವಾರ ಆದೇಶಿಸಿದೆ.
ಜಮೀನಿನ ದಾಖಲೆ ಸರಿಪಡಿಸಿಕೊಡಲು 2022 ಏಪ್ರಿಲ್ 1ರಂದು ಲಂಚ ತೆಗೆದುಕೊಳ್ಳುತ್ತಿದ್ದಾಗ ಭ್ರಷ್ಟಾಚಾರ ನಿಗ್ರಹ ದಳ ಪೊಲೀಸರ ಟ್ರ್ಯಾಪ್‌ಗೆ ಸಿಲುಕಿದ್ದರು.
ಶಿವಮೊಗ್ಗ ಜಿಲ್ಲೆ ಭದ್ರಾವತಿ ನಗರದ ಆರ್.ಮಂಜುನಾಥ್ ಹಾಗೂ ಸಹೋದರ ವಿಠಲ್ ರಾವ್ ಅವರು ತಾಲ್ಲೂಕಿನ ಬೆಳ್ಳಾವಿ ಹೋಬಳಿ, ಚನ್ನೇನಹಳ್ಳಿ ಗ್ರಾಮದಲ್ಲಿ 1 ಎಕರೆ 6 ಗುಂಟೆ ಜಮೀನು ಖರೀದಿಸಿದ್ದರು. ಜಮೀನಿಗೆ ಖಾತೆ ಮಾಡಿಕೊಡುವ ಸಮಯದಲ್ಲಿ ವಿಸ್ತೀರ್ಣ ನಮೂದಿಸದೆ ಉದ್ದೇಶಪೂರ್ವಕವಾಗಿ ‘ಸೊನ್ನೆ’ ಎಂದು ತೋರಿಸಲಾಗಿತ್ತು. ಈ ತಪ್ಪನ್ನು ಸರಿಪಡಿಸಿಕೊಡುವಂತೆ ಮಂಜುನಾಥ್ ಅರ್ಜಿ ಸಲ್ಲಿಸಿದರು.
ಸಮಸ್ಯೆ ಸರಿಪಡಿಸಿಕೊಡಲು ₹20 ಸಾವಿರ ಲಂಚ ನೀಡುವಂತೆ ಗ್ರಾಮ ಲೆಕ್ಕಾಧಿಕಾರಿ ನಟರಾಜು ಬೇಡಿಕೆ ಸಲ್ಲಿಸಿದ್ದರು. ಮುಂಗಡವಾಗಿ ₹5 ಸಾವಿರ ಪಡೆದುಕೊಂಡಿದ್ದು, ಉಳಿದ ₹15 ಸಾವಿರವನ್ನು ಮಂಜುನಾಥ್ ಸಹೋದರನ ಪುತ್ರ ಅಜಯ್ ಬರ್ಗೆ ಅವರಿಂದ ಬೆಳ್ಳಾವಿ ಉಪತಹಶೀಲ್ದಾರ್ ಕಚೇರಿಯಲ್ಲಿ ಪಡೆದುಕೊಳ್ಳುತ್ತಿದ್ದ ಸಮಯದಲ್ಲಿ ಭ್ರಷ್ಟಾಚಾರ ನಿಗ್ರಹ ದಳದ ಇನ್‌ಸ್ಪೆಕ್ಟರ್ ಎಸ್.ವಿಜಯಲಕ್ಷ್ಮಿ ನೇತೃತ್ವದ ತಂಡ ದಾಳಿ ನಡೆಸಿ ನಟರಾಜನನ್ನು ಬಂಧಿಸಿತ್ತು.
ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಯಾಸ್ಮಿನ ಪರವೀನ ಲಾಡಖಾನ ಅವರು ಆರೋಪ ಸಾಬೀತಾಗಿದ್ದರಿಂದ ಅಪರಾಧಿಗೆ ಶಿಕ್ಷೆ ವಿಧಿಸಿದ್ದಾರೆ. ಲೋಕಾಯುಕ್ತ ಸಂಸ್ಥೆ ಪರವಾಗಿ ಆರ್.ಪಿ.ಪ್ರಕಾಶ್ ವಾದಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.